ಎನ್​ಡಿಎಗೆ ವಿಷಯಾಧಾರಿತ ಬೆಂಬಲ

ಮಂಡ್ಯ ಸಂಸದರಾಗಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಸುಮಲತಾ ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಜತೆ ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಬಾರಿ ಸಂಸತ್ತಿಗೆ ಪ್ರವೇಶ ಮಾಡಿದ್ದೀರಿ. ಏನನಿಸುತ್ತಿದೆ?

ಮೊದಲ ಬಾರಿಗೆ ಶಾಲೆ, ಕಾಲೇಜಿಗೆ ಹೋದಾಗ ವಿದ್ಯಾರ್ಥಿಗೆ ಏನು ಅನಿಸುತ್ತದೋ, ನನಗೂ ಅದೇ ರೀತಿ ಅನಿಸುತ್ತಿದೆ. ಪ್ರಜಾಪ್ರಭುತ್ವದ ದೇಗುಲ ಈ ಸಂಸತ್ತು. ನಾನೀಗ ಅದರ ಭಾಗವಾಗಿದ್ದೇನೆ ಎಂಬುದು ಹೇಳಲಾರದಷ್ಟು ಹೆಮ್ಮೆ, ಖುಷಿ ತಂದುಕೊಟ್ಟಿದೆ. ನನಗೆ ಆಶೀರ್ವಾದ ಮಾಡಿ ಇಲ್ಲಿಗೆ ಕಳಿಸಿಕೊಟ್ಟ ಜನರಿಗೆ ಸದಾ ಋಣಿಯಾಗಿರುತ್ತೇನೆ.

ಮಂಡ್ಯ, ಕರ್ನಾಟಕ ಮತ್ತು ದೇಶದ ಜನರ ಅಭಿವೃದ್ಧಿಗೆ ಸಂಸದರಾಗಿ ಹೇಗೆ ಕೆಲಸ ಮಾಡಬೇಕೆಂದು ಬಯಸಿದ್ದೀರಿ?

ನನ್ನ ಮೊದಲ ಆದ್ಯತೆ ಕ್ಷೇತ್ರ ಮಂಡ್ಯ. ಅವರ ಸಮಸ್ಯೆ, ನೋವು, ನಲಿವುಗಳಿಗೆ ಸ್ಪಂದಿಸುವುದೇ ಮೂಲ ಮಂತ್ರ. ಮಂಡ್ಯ ಜಿಲ್ಲೆ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮ ವಹಿಸುತ್ತೇನೆ.

ಮಂಡ್ಯದಲ್ಲಿ ನೀವು ಗೆದ್ದ ನಂತರ ಮಾಜಿ ಪ್ರಧಾನಿ ದೇವೇಗೌಡರು ಅಥವಾ ಸಿಎಂ ಕುಮಾರಸ್ವಾಮಿ ನಿಮ್ಮ ಬಳಿ ಮಾತನಾಡಿದರೆ? ನೀವು ಮಾತನಾಡಲು ಯತ್ನಿಸಿದಿರಾ?

ಇಲ್ಲ. ನನ್ನೊಂದಿಗೆ ಅವರು ಮಾತನಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ನಿರ್ವಣವಾಗಿದ್ದ ಬಿಗಿ ವಾತಾವರಣದಿಂದ ಬಹುಶಃ ಅವರಿನ್ನೂ ಹೊರಬಂದಿಲ್ಲ ಅನಿಸುತ್ತದೆ. ಅವರೊಂದಿಗೆ ಮಾತನಾಡಲು ನನಗೇನೂ ಸಮಸ್ಯೆಯಿಲ್ಲ.

ಗೆದ್ದ ಬಳಿಕ ಕಾಂಗ್ರೆಸ್ ನಾಯಕರು ನಿಮ್ಮನ್ನು ಸಂರ್ಪಸಿ, ಪಕ್ಷದ ಜತೆ ಗುರುತಿಸಿಕೊಳ್ಳಿ ಎಂದು ಹೇಳಿದರಾ?

ಇಲ್ಲ. ನನ್ನನ್ನು ಸಂರ್ಪಸುವ ಪ್ರಯತ್ನ ಮಾಡಲಿಲ್ಲ.

ಎನ್​ಡಿಎ ಸೇರಲು ಬಿಜೆಪಿ ನಾಯಕರು ಒತ್ತಾಯ ಮಾಡಲಿಲ್ಲವೇ?

ಚುನಾವಣೆಗೆ ಮುನ್ನ ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂಬ ಮನವಿಗಳನ್ನು ಮಾಡಿದ್ದರು. ಮಂಡ್ಯದ ಜನರ ಅಪೇಕ್ಷೆಯಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಅಗತ್ಯ ಬಿದ್ದಾಗ ಸಂಸತ್ತಿನಲ್ಲಿ ಕೇಂದ್ರ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡುತ್ತೇನೆ.

ಪ್ರಧಾನಿ ಮೋದಿ ಭೇಟಿಯಾಗುತ್ತೀರಾ?

ಅವಕಾಶ ಸಿಕ್ಕಾಗ ಖಂಡಿತಾ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ.

Leave a Reply

Your email address will not be published. Required fields are marked *