More

    ವ್ಯಕ್ತಿತ್ವ ವಿಕಸನಕ್ಕೆ ರಂಗ ಚಟುವಟಿಕೆಗಳು ಸಹಕಾರಿ

    ಮೈಸೂರು: ವ್ಯಕ್ತಿತ್ವ ವಿಕಸನಕ್ಕೆ ರಂಗ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಚಲನಚಿತ್ರ ನಟ ಕಾರ್ತಿಕ್ ಮಹೇಶ್ ಅಭಿಪ್ರಾಯಪಟ್ಟರು.
    ಜೆಎಸ್‌ಎಸ್ ಕಲಾಮಂಟಪದ ವತಿಯಿಂದ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜೆಎಸ್‌ಎಸ್ ರಂಗೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರತರಲು ರಂಗೋತ್ಸವಗಳು ಅಗತ್ಯ. ರಂಗಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ನಾಯಕತ್ವ ಮತ್ತು ಸಂಘಟನಾ ಗುಣಗಳು ಬೆಳೆಯುತ್ತವೆ. ಇಂಥ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

    ಇಂದಿನ ಮಕ್ಕಳು ಮೊಬೈಲ್ ಗೀಳಿಗೆ ಸಿಕ್ಕಿ ಅದರಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಡೊಳ್ಳುಕುಣಿತ, ಕಂಸಾಳೆಯಂಥ ನೃತ್ಯಗಳು, ನಾಟಕಗಳು, ಜನಪದ ಕಲೆಗಳು ಜೀವನದ ಭಾಗವಾಗಬೇಕು. ಜೆಎಸ್‌ಎಸ್ ಸಂಸ್ಥೆ ಈ ನಿಟ್ಟಿನಲ್ಲಿ ವೇದಿಕೆಯನ್ನು ಕಲ್ಪಿಸಿ ಉತ್ತಮ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.
    ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತನಾಡಿ, ಜೆಎಸ್‌ಎಸ್ ಕಲಾಮಂಟಪಕ್ಕೆ 50 ವರ್ಷಗಳ ಇತಿಹಾಸವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ರಾತ್ರಿಯಿಂದ ಬೆಳಗಿನ ಜಾವದವರೆಗೂ ನಾಟಕಗಳು ಜರುಗುತ್ತಿದ್ದವು. ಜನರು ಅದೇ ರೀತಿಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಶಿಸುತ್ತಿರುವ ಕಲೆಗಳ ಜೀವಂತಿಕೆಗಾಗಿ ಕಲಾಮಂಟಪದ ವತಿಯಿಂದ ನಿರಂತರವಾಗಿ ವಿದ್ಯಾರ್ಥಿಗಳ ಮೂಲಕ ರಂಗೋತ್ಸವದಂಥ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಪಾಲಕರು ಅಂಕ ಗಳಿಕೆಗೆ ಮಾತ್ರ ಒತ್ತಾಯಿಸದೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

    ಕಾರ್ಯಕ್ರಮದ ನಂತರ ಸಿದ್ಧಾರ್ಥ ಬಡಾವಣೆಯ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ‘ಒಗಟಿನ ರಾಣಿ’ ನಾಟಕ ಪ್ರದರ್ಶಿಸಿದರು. ಕೆ.ರಾಮಯ್ಯ ರಚನೆಯ ಈ ನಾಟಕವನ್ನು ಶಕುಂತಲಾ ಹೆಗಡೆ ನಿರ್ದೇಶಿಸಿದ್ದಾರೆ.
    ನ.24 ರವರೆಗೆ ರಂಗೋತ್ಸವ ನಡೆಯಲಿದೆ. 23ರಂದು ಬೆ.11.30 ಮತ್ತು ಮಧ್ಯಾಹ್ನ 2.30ಕ್ಕೆ ‘ಹಲಿಗಲಿಯ ಬೇಡರು’ ನಾಟಕ ಪ್ರದರ್ಶನ ನಡೆಯಲಿದೆ. ಕ್ಯಾತನಹಳ್ಳಿ ರಾಮಣ್ಣ ರಚನೆಯ ಈ ನಾಟಕವನ್ನು ಮಂಜುನಾಥ ಕಾಚಕ್ಕಿ ನಿರ್ದೇಶಿಸಿದ್ದಾರೆ. ಪ್ರಶಾಂತ್ ಬಿ.ಹೆಗ್ಗೋಡು ಸಹ ನಿರ್ದೇಶನ ಜವಾಬ್ದಾರಿ ಹೊತ್ತಿದ್ದು, ಗುಂಡ್ಲುಪೇಟೆಯ ಜೆಎಸ್‌ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. 24ರಂದು ಬೆಳಗ್ಗೆ 11 ಮತ್ತು ಸಂಜೆ 6.30ಕ್ಕೆ ‘ಚಾಮಚೆಲುವೆ’ ನಾಟಕ ಪ್ರದರ್ಶನ ನಡೆಯಲಿದೆ. ಡಾ.ಸುಜಾತಾ ಅಕ್ಕಿ ರಚನೆಯ ಈ ನಾಟಕವನ್ನು ಜೀವನ್‌ಕುಮಾರ್ ಬಿ.ಹೆಗ್ಗೋಡು ನಿರ್ದೇಶಿಸಿದ್ದಾರೆ. ಸಮತಾ ಸಹನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts