ರಂಗಭೂಮಿ ಕಲಾವಿದರಿಗೆ ರಂಗಬದ್ಧತೆ ಅಗತ್ಯ

ಮೈಸೂರು: ನಾಟಕ ಯಾವುದಾದರೂ ಅದು ಪ್ರೇಕ್ಷಕನನ್ನು ಅನುಭವದ ದಿಕ್ಕಿನತ್ತ ಕೊಂಡೊಯ್ಯಬೇಕು. ಆಗ ಮಾತ್ರ ನಾಟಕ ಪ್ರೇಕ್ಷಕನ ಮನದಲ್ಲಿ ಸದಾ ಉಳಿಯಲಿದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ಮಹೇಶ್ ಥಿಯೇಟರ್ ಗ್ರೂಪ್‌ನಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ ತಬರನ ಕಥೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿ ಕಲಾವಿದರಿಗೆ ರಂಗ ಬದ್ಧತೆ ಅಗತ್ಯ. ಸಿನಿಮಾ, ಟಿವಿಗಳ ನಡುವೆ ಯುವ ರಂಗಕರ್ಮಿಗಳು ಬದ್ಧತೆ ಕಾಪಾಡಿಕೊಳ್ಳುವುದು ಕಷ್ಟ. ರಂಗಭೂಮಿ ಪ್ರೇಕ್ಷಕ ಇದೇ ಮಾದರಿ ನಾಟಕ ನೋಡುತ್ತಾರೆ ಎಂದು ನಿರ್ಧರಿಸುವುದು ಕಷ್ಟ ಎಂದರು.

ಯುವ ಕಲಾವಿದರಲ್ಲಿ ಇಂದು ರಂಗಬದ್ಧತೆ ಮಾಯಾವಾಗುತ್ತಿದೆ. ಸಿನಿಮಾ ಹಾಗೂ ಟಿವಿಗಳಲ್ಲಿ ಒಂದು ಬಾರಿ ಕಾಣಿಸಿಕೊಂಡರೆ ಸಾಕು. ನಾಳೆ ಕಾರು, ನಾಳಿದ್ದು ಕೈಯಲ್ಲಿ ಎರಡೆರಡು ಮೊಬೈಲ್‌ಗಳಿರುತ್ತವೆ. ಇಂತಹ ದರ್ಶಿನಿ ಸಂಸ್ಕೃತಿಗೆ ಯುವ ಕಲಾವಿದರು ಮಾರುಹೋಗಬಾರದು. ರಂಗಭೂಮಿಗೆ ಬಂದ ವೇಳೆ ರಂಗದ ಮೇಲೆ ತೋರುವ ಪ್ರೀತಿ, ಗೌರವ ಹಾಗೂ ಬದ್ಧತೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಉಪನ್ಯಾಸಕ ರಮೇಶ್ ಗುಬ್ಬಿಗೂಡು, ನಾಟಕದ ನಿರ್ದೇಶಕ, ರಂಗಾಯಣದ ಹಿರಿಯ ಕಲಾವಿದ ಮಯಸಂದ್ರ ಕೃಷ್ಣಪ್ರಸಾದ್ ಇತರರು ಹಾಜರಿದ್ದರು.
ಬಳಿಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ ತಬರನಕಥೆ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *