ರಂಗಸ್ಥಳದಲ್ಲೇ ಅಸುನೀಗಿದ ಕಲಾವಿದ ಚಂದ್ರಹಾಸ

ಬೈಂದೂರು/ಕಾರವಾರ: ಉಡುಪಿ ಜಿಲ್ಲೆಯ ಬೈಂದೂರಿನ ಯಳಜಿತ್ ಗ್ರಾಮದ ಜೋಗಿಜಡ್ಡು ಎಂಬಲ್ಲಿ ಯಕ್ಷಗಾನ ಕಲಾವಿದ ಚಂದ್ರಹಾಸ ನಾಯ್ಕ ಹುಡಗೋಡು(52) ಭಾನುವಾರ ರಂಗಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಮೇಳದ ಅತಿಥಿ ಕಲಾವಿದರಾಗಿ ‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಬಳ್ಕೂರು ಕೃಷ್ಣ ಯಾಜಿ ಅವರ ಭೀಷ್ಮನ ಪಾತ್ರದೆದುರು ಸಾಲ್ವನಾಗಿದ್ದ ಚಂದ್ರಹಾಸ ಅವರು, ರಾತ್ರಿ 11:30ಕ್ಕೆ ಭೀಷ್ಮ ಎಂದು ಉದ್ಗರಿಸುತ್ತಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಬೈಂದೂರಿನ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಮೃತಪಟ್ಟಿದ್ದರು.

ಉ.ಕ. ಜಿಲ್ಲೆ ಹೊನ್ನಾವರದ ಹುಡುಗೋಡಿನ ಚಂದ್ರಹಾಸ ಅವರು ಹಡಿನಬಾಳ ಗ್ರಾಪಂ ಅಧ್ಯಕ್ಷರೂ ಆಗಿದ್ದರು. ಮೊದಲು ಕಾಂಗ್ರೆಸ್​ನಲ್ಲಿದ್ದ ಅವರು ನಂತರ ಬಿಜೆಪಿ ಸೇರಿದ್ದರು. ಮೂರು ದಶಕಗಳ ಸೇವೆ ಬಳಿಕ ಹವ್ಯಾಸಿಯಾಗಿ ಕಲಾ ಸೇವೆ ಮುಂದುವರಿಸಿದ್ದರು. ಕಲಾಶ್ರೀ ಬಳಗ ಕಟ್ಟಿ ಆಟ ವಹಿಸಿಕೊಳ್ಳುತ್ತಿದ್ದರು. ಭಾನುವಾರದ ಪ್ರದರ್ಶನವನ್ನು ಚಂದ್ರಹಾಸ ಅವರದೇ ಫೇಸ್​ಬುಕ್ ಖಾತೆಯಿಂದ ಅಭಿಮಾನಿಯೊಬ್ಬರು ಲೈವ್ ನೀಡುತ್ತಿದ್ದು, ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂದ್ರಹಾಸರ ಪುತ್ರ ಪ್ರದೀಪ್ ಹುಡಗೋಡು ಕೂಡ ಈ ಪ್ರಸಂಗದಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ ಕಲಾವತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಚಂದ್ರಹಾಸ ಅವರ ಅಂತ್ಯಕ್ರಿಯೆ ಸೋಮವಾರ ಹುಡಗೋಡದಲ್ಲಿ ಜರುಗಿತು.

ಎರಡನೇ ದುರಂತ

ರಂಗಸ್ಥಳದಲ್ಲೇ ವಿಧಿವಶರಾದ ಉತ್ತರ ಕನ್ನಡ ಜಿಲ್ಲೆಯ 2ನೇ ಕಲಾವಿದ ಹುಡಗೋಡು ಚಂದ್ರಹಾಸ. ಯಕ್ಷರಂಗದ ಮೇರು ನಟ ಕೆರೆಮನೆ ಶಂಭು ಹೆಗಡೆ ಅವರು ಇಡಗುಂಜಿಯಲ್ಲಿ ರಾಮನಿರ್ಯಾಣ ಯಕ್ಷಗಾನದಲ್ಲಿ ರಾಮನ ಪಾತ್ರ ವಹಿಸಿದ್ದಾಗಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದರು.

ಅತಿಥಿ ಕಲಾವಿದ

ಹಿರಿಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಕೆಲವೇ ದಿನಗಳ ಹಿಂದೆ ನಿಧನರಾದ್ದರಿಂದ ಅವರ ಪುತ್ರ ಹಾಗೂ ಜಲವಳ್ಳಿ ಮೇಳದ ಯಜಮಾನ ವಿದ್ಯಾಧರ ರಾವ್ ಮೇಳದ ತಿರುಗಾಟಕ್ಕೆ ತೆರಳಿರಲಿಲ್ಲ. ಅವರ ಪಾತ್ರ ನಿರ್ವಹಿಸಲು ಚಂದ್ರಹಾಸ ಅತಿಥಿ ಕಲಾವಿದರಾಗಿ ತೆರಳಿದ್ದರು.