blank

ಗಿಡದಲ್ಲೇ ಕೊಳೆಯುತ್ತಿದೆ ಪೇರಲ

blank

ರಾಜು ಹೊಸಮನಿ ನರಗುಂದ
ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ತೋಟಗಾರಿಕೆ ಬೆಳೆಗಾರರಿಗೆ ಸರ್ಕಾರ ಪರಿಹಾರ ಘೊಷಿಸಿದೆ. ಆದರೆ, ಈ ಆದೇಶ ತಾಲೂಕಿನ ಬೆಳೆಗಾರರಿಗೆ ಅನ್ವಯವಾಗದ ಹಿನ್ನೆಲೆಯಲ್ಲಿ ಪೇರಲ (ಸೀಬೆ) ಹಣ್ಣುಗಳು ಕಟಾವಾಗದೆ ಗಿಡದಲ್ಲೇ ಕೊಳೆಯುತ್ತಿದೆ. ಇದರಿಂದಾಗಿ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ತಾಲೂಕಿನ ಒಟ್ಟು ಭೌಗೋಳಿಕ ಕ್ಷೇತ್ರ 50,400 ಹೆಕ್ಟೇರ್. ಈ ಪೈಕಿ 35600 ಹೆಕ್ಟೇರ್ ಕೃಷಿ, 2500 ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದೆ. ತೋಟಗಾರಿಕೆ ಪ್ರದೇಶದ ಪೈಕಿ 210 ಹೆಕ್ಟೇರ್​ನಲ್ಲಿ ಪೇರಲ, 1500 ಹೆಕ್ಟೇರ್ ಉಳ್ಳಾಗಡ್ಡಿ, 50 ಹೆಕ್ಟೇರ್ ಮೆಣಸಿನಕಾಯಿ, 20 ಹೆಕ್ಟೇರ್ ಟೊಮ್ಯಾಟೊ, 10 ಹೆಕ್ಟೇರ್ ಚಿಕ್ಕು, 5 ಹೆಕ್ಟೇರ್ ಬಾಳೆ, 10 ಹೆಕ್ಟೇರ್ ಬದನೆ, 40 ಹೆಕ್ಟೇರ್ ತೆಂಗು ಹಾಗೂ 655 ಹೆಕ್ಟೇರ್ ಪ್ರದೇಶದಲ್ಲಿ ಪಪ್ಪಾಯ, ಮಾವು ಮತ್ತಿತರ ಬೆಳೆ ಬೆಳೆಯಲಾಗಿದೆ.
ತಾಲೂಕಿನ ಕೊಣ್ಣೂರ, ಕುರ್ಲಗೇರಿ, ಶಿರೋಳ, ವಾಸನ, ಬೆಳ್ಳೇರಿ, ಲಖಮಾಪುರ, ಕಪ್ಪಲಿ, ಕಲ್ಲಾಪುರ ಮತ್ತಿತರ ಗ್ರಾಮಗಳ 400ಕ್ಕೂ ಹೆಚ್ಚು ರೈತರು ಪೇರಲ ಬೆಳೆದಿದ್ದಾರೆ. ಅತಿ ಹೆಚ್ಚು ಪೇರಲ ಬೆಳೆಯುವ ಪ್ರದೇಶವೆಂದರೆ ಕೊಣ್ಣೂರ ಗ್ರಾಮ. ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಪೇರಲಕ್ಕೆ ಭಾರಿ ಬೇಡಿಕೆಯಿದೆ. ಆದರೆ, ಕಳೆದೆರಡು ವರ್ಷಗಳಿಂದ ಕರೊನಾ, ಮಲಪ್ರಭಾ ನದಿಯ ಪ್ರವಾಹದಿಂದ ಆರ್ಥಿಕ ನಷ್ಟ ಉಂಟಾಗಿದೆ.
ಈ ಹಿಂದೆ ಕೊಣ್ಣೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಶೇ. 70ರಷ್ಟು ಪೇರಲ ಹಣ್ಣು, ಕಾಯಿಗಳನ್ನು ಸ್ವತಃ ರೈತರೇ ಹುಬ್ಬಳ್ಳಿಯಿಂದ ವಿಜಯಪುರವರೆಗಿನ ಪ್ರಮುಖ ಬಸ್ ನಿಲ್ದಾಣ, ರಸ್ತೆ ಅಕ್ಕಪಕ್ಕ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ನಿಂತು ಮಾರಾಟ ಮಾಡುತ್ತಿದ್ದರು. ಲಾಕ್​ಡೌನ್ ಘೊಷಣೆಯಾದಾಗಿನಿಂದ ಸೂಕ್ತ ಮಾರುಕಟ್ಟೆ, ಸಮರ್ಪಕ ವಾಹನಗಳ ಸಂಚಾರವಿಲ್ಲದೆ ಪೇರಲ ಹಣ್ಣು, ಕಾಯಿಗಳು ಮಾರಾಟವಾಗದೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಹಣ್ಣು, ತರಕಾರಿ ಬೆಳೆಗಾರರಿಗೆ ಲಾಕ್​ಡೌನ್​ನ ಕೆಲ ನಿಯಮಗಳನ್ನು ಸಡಿಲಗೊಳಿಸಿದರೂ ನಿರೀಕ್ಷಿತ ಬೆಲೆಗೆ ಮಾರಾಟವಾಗುತ್ತಿಲ್ಲ. ಹೀಗಾಗಿ, ಕೈಗೆ ಬಂದಿರುವ ಫಸಲು ಗಿಡದಲ್ಲೇ ಕೊಳೆಯುತ್ತಿದೆ. ಮತ್ತೊಂದಿಷ್ಟು ಮಳೆ, ಗಾಳಿಯಿಂದ ಬಿದ್ದು ಗೊಬ್ಬರವಾಗುತ್ತಿದೆ.
ಪರಿಹಾರದಿಂದ ವಂಚಿತರಾದ ರೈತರು: ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಸರ್ಕಾರ ಪರಿಹಾರ ಘೊಷಿಸಿದೆ. ಆದರೆ, ಈ ಪರಿಹಾರ ಅಂಜೂರ, ಪಪ್ಪಾಯ, ಅನಾನಸ್, ದ್ರಾಕ್ಷಿ ಬೆಳೆದವರಿಗೆ ಮಾತ್ರ ಅನ್ವಯಿಸುತ್ತದೆ. ಪೇರಲ ಮತ್ತಿತರ ತೋಟಗಾರಿಕೆ ಬೆಳೆಗಳನ್ನು ಬೆಳೆದವರು ಸರ್ಕಾರದ ಪರಿಹಾರದಿಂದ ಎರಡು ವರ್ಷಗಳಿಂದ ವಂಚಿತರಾಗಿದ್ದಾರೆ.

ನರಗುಂದ ತಾಲೂಕಿನಾದ್ಯಂತ 210 ಹೆಕ್ಟೇರ್ ಪ್ರದೇಶದಲ್ಲಿ ಪೇರಲ ಬೆಳೆಯಲಾಗಿತ್ತು. ಲಾಕ್​ಡೌನ್​ನಿಂದ 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 200 ರೈತರ ಪೇರಲ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದ್ದು, 96 ಲಕ್ಷ ರೂಪಾಯಿ ನಷ್ಟವುಂಟಾಗಿದೆ. ಪೇರಲ ವರ್ಷಕ್ಕೆ ಮೂರು ಬಾರಿ ಇಳುವರಿ ನೀಡುವುದರಿಂದ ಗಿಡದ ಟೊಂಗೆಗಳನ್ನು ಕತ್ತರಿಸುವಂತೆ ರೈತರಿಗೆ ಸೂಚಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಮೂರು ತಿಂಗಳ ಬಳಿಕ ಮತ್ತೆ ಹೆಚ್ಚಿನ ಇಳುವರಿ ಬರುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲ ತೋಟಗಾರಿಕೆ ಬೆಳೆಗಳಿಗೆ ಆರ್ಥಿಕ ಪರಿಹಾರ ಘೊಷಿಸಿದರೆ ತಾಲೂಕಿನ ಎಲ್ಲ ರೈತರಿಗೂ ಮಾಹಿತಿ ನೀಡಲಾಗುವುದು.
| ಸಂಜೀವ ಚವ್ಹಾಣ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ನರಗುಂದ

ಉದ್ಯೋಗ ಖಾತ್ರಿ ಯೋಜನೆಯಡಿ 1 ಎಕರೆ ಜಮೀನಿನಲ್ಲಿ 1 ಲಕ್ಷ ರೂಪಾಯಿ ಖರ್ಚು ಮಾಡಿ ಪೇರಲ ಬೆಳೆದಿದ್ದೇನೆ. ಲಾಕ್​ಡೌನ್​ನಿಂದ ಯಾರೊಬ್ಬರೂ ಖರೀದಿಸಲು ಮುಂದಾಗುತ್ತಿಲ್ಲ. ನರಗುಂದ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸೂಕ್ತ ಬೆಲೆ ದೊರಕುತ್ತಿಲ್ಲ. 150 ರೂಪಾಯಿ ಮೌಲ್ಯದ ಹಣ್ಣಿನ ಬುಟ್ಟಿಗೆ ಕೇವಲ 30 ರೂಪಾಯಿಗೆ ಕೇಳುತ್ತಿದ್ದಾರೆ. ಇದರಿಂದ ಕೂಲಿ ಆಳುಗಳು, ವಾಹನದ ಬಾಡಿಗೆಯನ್ನು ನಮ್ಮ ಕೈಯ್ಯಾರೆ ಭರಿಸುವಂತಾಗಿದೆ. ಹೀಗಾಗಿ, ಕಟಾವು ಮಾಡದೆ ಇರುವುದರಿಂದ ಹಣ್ಣುಗಳು ಗಿಡದಲ್ಲೇ ಕೊಳೆಯುತ್ತಿವೆ. ಸರ್ಕಾರ ಇನ್ನಾದರೂ ತೋಟಗಾರಿಕೆಯ ಎಲ್ಲ ಬೆಳೆಗಳಿಗೂ ಸೂಕ್ತ ಪರಿಹಾರ ನೀಡಬೇಕು.
| ಯಲ್ಲಪ್ಪ ಚೆಲುವಣ್ಣವರ, ಕುರ್ಲಗೇರಿ ರೈತ

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…