ಕುಂಭದ್ರೋಣ ಮಳೆ ಆರ್ಭಟ

ಚಿಕ್ಕಮಗಳೂರು: ಜಿಲ್ಲಾದ್ಯಂತ ಕುಂಭದ್ರೋಣ ಮಳೆ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ನದಿ, ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಕೊಪ್ಪ ತಾಲೂಕಿನ ಜಯಪುರದ ಕೊಗ್ರೆ ಸಮೀಪ ಬೈರದೇವರು ಗ್ರಾಮದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕ ಅಶೋಕ ಅವರ ಶವ ಇನ್ನೂ ಸಿಕ್ಕಲ್ಲ. ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಈಜು ತಜ್ಞರು ಶವ ಹುಡುಕಾಟ ನಡೆಸಿದ್ದಾರೆ.

ಹಲವು ಕಡೆ ಗುಡ್ಡಗಳು ಕುಸಿದು ಸಂಚಾರಕ್ಕೆ ತೊಂದರೆಯಾಗಿದ್ದು, ಜಿಲ್ಲಾಡಳಿತ ಪರಿಹಾರ ಕ್ರಮ ಕೈಗೊಳ್ಳುತ್ತಿದೆ. ಆದರೆ ಮತ್ತಷ್ಟು ಕಡೆ ರಸ್ತೆಗೆ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಭಾಗದ ಜನರು ಆತಂಕದಲ್ಲಿದ್ದಾರೆ. ಚಿಕ್ಕಮಗಳೂರಿನ ಗಿರಿ ಶ್ರೇಣಿ, ಮೂಡಿಗೆರೆ ಕಳಸ, ಬಣಕಲ್ ಹಾಗೂ ಕೊಪ್ಪ ತಾಲೂಕಿನ ಜಯಪುರ ಭಾಗದ ನೂರಾರು ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದಂತಾಗಿದೆ.

ಚಿಕ್ಕಮಗಳೂರಿನಿಂದ ಕೈಮರದ ಮೂಲಕ ದತ್ತಪೀಠಕ್ಕೆ ಸಾಗುವ ದಾರಿಯಲ್ಲಿ ಮುಳ್ಳಯ್ಯನಗಿರಿಗೆ ಸಾಗುವ ಸರ್ಪದ ಹಾದಿ ಸಮೀಪ ಬುಧವಾರ ರಾತ್ರಿ ಗುಡ್ಡ ಜರಿದು ಸಂಚಾರ ಬಂದ್ ಆಗಿತ್ತು. ಬೆಳಗ್ಗೆ 11ರ ವೇಳೆಗೆ ಸ್ವಲ್ಪ ಮಣ್ಣು ತೆಗೆದು ಹಾಕಿದ್ದರಿಂದ ದ್ವಿಚಕ್ರ ಮತ್ತು ಲಘು ವಾಹನಗಳು ಸಂಚರಿಸುತ್ತಿವೆ. ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ಕೈಮರದಿಂದ ಕವಿಕಲ್ ಗುಂಡಿವರೆಗೆ ಇದೇ ದಾರಿಯ ಮೂರ್ನಾಲ್ಕು ಕಡೆ ಗುಡ್ಡಗಳು ಕುಸಿದಿದ್ದು ಸಂಚಾರಕ್ಕೆ ತೊಂದರೆಯಾಗಿಲ್ಲ. ವಿದ್ಯುತ್ ಕಂಬ ಮುರಿದು ದತ್ತಪೀಠ, ಮುಳ್ಳಯ್ಯನಗಿರಿ ಮಾರ್ಗದ ಮನೆಗಳಿಗೆ ವಿದ್ಯುತ್ ಕಡಿತವಾಗಿದೆ.

ಬೆಳಗ್ಗೆ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಅತ್ತಿಗುಂಡಿ, ಕವಿಕಲ್ ಗುಂಡಿ ಗ್ರಾಮಸ್ಥರು, ಎಸ್ಟೇಟ್ ಕಾರ್ವಿುಕರಿಗೆ ಹಾಗೂ ದತ್ತಪೀಠ ಮಾರ್ಗದ ಕಡೆ ಹೋಗುವವರಿಗೆ ತೀವ್ರ ತೊಂದರೆಯಾಗಿತ್ತು. ಈ ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿದ್ದು, ಹೊನ್ನಮ್ಮನಹಳ್ಳ, ಸಗೀರ ಫಾಲ್ಸ್, ಮಾಣಿಕ್ಯಧಾರ ಫಾಲ್ಸ್​ಗಳು ಸೇರಿ ಗಿರಿಶ್ರೇಣಿಯಿಂದ ನೂರಾರು ಝುರಿಯಗಳು ಧುಮ್ಮಿಕ್ಕುತ್ತಿವೆ.

ಕಳಸ ಸಮೀಪ ಮುಳುಗಡೆಯಾಗಿದ್ದ ಹೆಬ್ಬಾಳ ಸೇತುವೆಯಲ್ಲಿ ನೀರು ಕಡಿಮೆಯಾಗಿ ಸಂಚಾರ ಪುನಾರಂಭಗೊಂಡಿದೆ. ಆದರೆ ಮತ್ತೆ ಮಳೆ ಜೋರಾಗಿರುವುದರಿಂದ ಸೇತುವೆ ಮುಳುಗಡೆ ಆಗುವ ಆತಂಕವಿದೆ. ಇಲ್ಲಿನ ಹಿರೇಬೈಲು ಬಳಿ ದೊಡ್ಡ ಗುಡ್ಡ ಕುಸಿದು ಬಾಳೆಹೊಳೆಗೆ ಹೋಗುವ ದಾರಿ ಬಂದ್ ಆಗಿದೆ. ಒಂದು ಮನೆ ಪೂರ್ಣ ಜಖಂಗೊಂಡಿದ್ದು, ಮತ್ತೊಂದು ಮನೆಗೆ ಅಪಾಯವಾಗುವ ತೊಂದರೆ ಇದೆ. ಹಾನಿಗೊಳಗಾದ ಮನೆಯವರ ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಶೃಂಗೇರಿಯಲ್ಲಿಯೂ ಮಳೆ ಮುಂದುವರಿದಿದ್ದು, ತುಂಗಾ ಸೇತುವೆ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಕೊಪ್ಪ, ಶೃಂಗೇರಿಯ ಕೆಲವು ಶಾಲೆಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಎನ್.ಆರ್.ಪುರದಲಿಯೂ ಮಳೆ ಜೋರಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.

ಜಿಲ್ಲೆಯ ಬಯಲು ಸೀಮೆಯ ಕಡೂರು, ತರೀಕೆರೆ ತಾಲೂಕಿನಲ್ಲಿ ಸಾಧಾರಣ ಮಳೆ ಇದೆ. ತರೀಕೆರೆ ಪಟ್ಟಣದಲ್ಲಿ ಒಂದು ಮನೆ ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *