ಮುಂಡರಗಿ: ಮಹಾ ತಪಸ್ವಿಗಳಾಗಿದ್ದ ರೇಣುಕಾಚಾರ್ಯರು ಸಮಾಜವನ್ನೆ ತಮ್ಮ ಕುಟುಂಬವೆಂದು ಭಾವಿಸಿ, ಅದರ ಶ್ರೇಯೋಭಿವೃದ್ಧಿಗೆ ತಮ್ಮ ಬದುಕನ್ನು ಮೀಸಲಿಟ್ಟರು. ಅದ್ಭುತ ಜ್ಞಾನ ಸಂಪನ್ನರಾಗಿದ್ದ ರೇಣುಕಾಚಾರ್ಯರು ಜಗತ್ತುನ್ನು ಬೆಳಗಿದ ಮಹಾನುಭಾವರಾಗಿದ್ದಾರೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಹಾಗೂ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಜಗತ್ತಿನ ಎಲ್ಲ ಧರ್ಮಗಳು ಮಾನವನ ಕಲ್ಯಾಣ ಹಾಗೂ ಉದ್ಧಾರವನ್ನು ಪ್ರತಿಪಾದಿಸಿವೆ. ಮಾನವನ ಶ್ರೇಯೋಭಿವೃದ್ಧಿಯೇ ಎಲ್ಲ ಶರಣರ ಮೂಲ ಮಂತ್ರವಾಗಿದ್ದು, ನಮ್ಮ ನಾಡಿನಲ್ಲಿ ಬಾಳಿಹೋದ ಶರಣರು, ಸಂತರು ಅದನ್ನೇ ಪ್ರತಿಪಾದಿಸಿದ್ದಾರೆ’ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂತೋಷ ಹಿರೇಮಠ ಮಾತನಾಡಿ, ಸಮಾಜ ಸೇವೆಯೇ ಶಿವಪೂಜೆ ಎಂದು ಭಾವಿಸಿದ್ದ ಹಲವಾರು ಸಂತರು, ಶರಣರು, ಮಹಾತ್ಮರು ನಮ್ಮ ನಾಡಿನಲ್ಲಿ ಬಾಳಿ ಹೋಗಿದ್ದಾರೆ. ಅವರ ನಿಸ್ವಾರ್ಥ ಸೇವಾ ಮನೋಭಾವವನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಗದ್ಗುರು ಅನ್ನದಾನೀಶ್ವರ ಜಾತ್ರಾ ಸಮಿತಿ ಅಧ್ಯಕ್ಷ ವಿ.ಜೆ. ಹಿರೇಮಠ ಮಾತನಾಡಿ, ರೇಣುಕಾಚಾರ್ಯರು ಪ್ರತಿಪಾದಿಸಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ನಾವೆಲ್ಲ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಚನ್ನವೀರಯ್ಯ ಹಿರೇಮಠ ಪ್ರಾರ್ಥನೆ ಹಾಡಿದರು. ಶಿಕ್ಷಕಿ ಶಕುಂತಲಾ ಹಂಪಿಮಠ ಕಾರ್ಯಕ್ರಮ ನಿರೂಪಿಸಿದರು.
