ರಬಕವಿ-ಬನಹಟ್ಟಿ: ವರ್ಷದಲ್ಲಿ 282 ದಿನಗಳ ಕಾಲ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ದೀನದಲಿತರಿಗೆ ಹಾಗೂ ದುರ್ಬಲರಿಗೆ ಅನ್ನದಾಸೋಹ ನಡೆಸುತ್ತಿರುವ ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ಅನ್ನದಾನೇಶ್ವರ ಶ್ರೀಗಳ ಕಾರ್ಯ ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠಕ್ಕೆ ಸೋಮವಾರ ಭೇಟಿ ನೀಡಿ, ಫೆ. 22ರಿಂದ ಮುಧೋಳದಲ್ಲಿ ಜರುಗಲಿರುವ ರನ್ನ ವೈಭವಕ್ಕೆ ಭಕ್ತ ವೃಂದವನ್ನು ಆಹ್ವಾನಿಸಿ ಮಾತನಾಡಿದ ಅವರು, ರನ್ನ ವೈಭವದಲ್ಲಿ ಫೆ. 23 ಮತ್ತು 24ರಂದು ಉಪಹಾರ, ಔತನಕೂಟ ವ್ಯವಸ್ಥೆ ಕಲ್ಪಿಸಲು ಬಂಡಿಗಣಿಮಠವು ಮುಂದಾಗಿರುವದು ಹೆಮ್ಮೆಯೆನಿಸುತ್ತಿದೆ. ಸುಮಾರು 50 ಸಾವಿರ ಜನರಿಗೆ ಭೋಜನ ಒದಗಿಸಲು ಮಠ ಸಿದ್ಧತೆ ಮಾಡಿಕೊಂಡಿದೆ ಎಂದು ಶ್ರೀಗಳು ತಿಳಿಸಿದ್ದಾರೆ ಎಂದರು.
ಶಂಕರ ತಿಮ್ಮಾಪೂರ ಮಾತನಾಡಿ, ಜಾತಿ ಬೇಧವಿಲ್ಲದೆ ಸಮಾನತೆ ಸಾರುವಲ್ಲಿ ಮಠವು ಸಾಕ್ಷಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಭಕ್ತರನ್ನು ಒಳಗೊಂಡ ಮಠಗಳಲ್ಲಿ ಬಂಡಿಗಣಿಮಠವೂ ಒಂದಾಗಿದೆ ಎಂದರು.
ಅನ್ನದಾನೇಶ್ವರ ಶ್ರೀಗಳು ಮಾತನಾಡಿ, ಭಕ್ತರಿಂದ ಬಂದದ್ದನ್ನು ಸಮಾಜಕ್ಕೆ ನೀಡುವ ಕಾಯಕ ಶ್ರೀಮಠದ್ದಾಗಿದೆ. ಈ ಬಾರಿ ರನ್ನ ವೈಭವದಲ್ಲಿ ಸಾವಿರಾರು ಭಕ್ತರಿಗೆ ಅನ್ನದಾಸೋಹವು ಬಂಡಿಗಣಿಮಠದಿಂದ ನಡೆಯುತ್ತಿರುವದು ನನಗೂ ಖುಷಿ ನೀಡಿದೆ ಎಂದರು.
ಸತ್ಯ, ಪ್ರಾಮಾಣಿಕತೆ ಹಾಗು ನಿಷ್ಕಲ್ಮಶ ಬದುಕಿನೊಂದಿಗೆ ನೆಮ್ಮದಿಯ ಜೀವನ ಪ್ರತಿಯೊಬ್ಬರದ್ದಾಗಬೇಕು. ಸೀಮೆಗಾಗಿ ರೈತರು ವೈರತ್ವ ನಡೆಸದೆ ಸ್ವಹಿತಾಸಕ್ತಿಯಿಂದ ಸಹಕಾರದ ಬಾಳ್ವೆ ಮುಖ್ಯವಾಗಿದೆ ಎಂದರು.
ಹನುಮಂತ ತಿಮ್ಮಾಪುರ, ಸಂಗಪ್ಪ ಇಮನ್ನವರ, ಮುಧೋಳದ ಎಪಿಎಂಸಿ ಅಧ್ಯಕ್ಷ ಅಶೋಕ ಕಿವಡಿ, ಶಿವಾನಂದ ಹಿರೇಮಠ, ಮಲ್ಲಪ್ಪ ತಂಬಾಕು, ಸಿದ್ದಪ್ಪ ನಿಂಬರಗಿ ಮತ್ತಿತರರಿದ್ದರು.