ಜಮಖಂಡಿ: ರೋಗಿಗಳ ಆರೈಕೆಯಲ್ಲಿ ದಾದಿಯರು ಹಾಗೂ ಶುಶ್ರೂಷಕರ ಸೇವೆ ಅತಿಮುಖ್ಯ ಎಂದು ನಿವೃತ್ತ ಶಸಚಿಕಿತ್ಸ ತಜ್ಞ ಡಾ. ಎಂ.ಆರ್. ಹುಂಡೆಕಾರ ಹೇಳಿದರು.

ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಭಾಭವನದಲ್ಲಿ ಕರ್ನಾಟಕ ಸರ್ಕಾರಿ ಶೂಶ್ರೂಷಾಧಿಕಾರಿಗಳ ತಾಲೂಕು ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗಿಗಳ ಆರೈಕೆಯೂ ಒಂದು ಸವಾಲಿನ ಕಾರ್ಯ. ಆ ಸವಾಲಿನ ಕಾರ್ಯಗಳನ್ನು ನಿಭಾಯಿಸುವ ಶುಶ್ರೂಷಕರ ಕಾರ್ಯ ಶ್ಲಾಘನೀಯ ಎಂದರು.
‘ನಮ್ಮ ದಾದಿಯರು ನಮ್ಮ ಭವಿಷ್ಯ’ ಘೋಷ ವಾಕ್ಯದೊಂದಿಗೆ ನೈಟಿಂಗೇಲ್ ಪ್ರತಿಜ್ಞಾ ವಿಧಿಯೊಂದಿಗೆ ದಿನ ಆಚರಿಸಲಾಯಿತು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಎಲ್ಲ ಒಳ ರೋಗಿಗಳಿಗೆ ಬೆಳಗಿನ ಉಪಾಹಾರವನ್ನು ಶುಶ್ರೂಷಾಧಿಕಾರಿಗಳು ವಿತರಿಸಿದರು.
ಮುಖ್ಯ ವೈದ್ಯಾಧಿಕಾರಿ ಡಾ. ವಿ.ಸಿ. ಮುದಿಗೌಡರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೋವಿಂದ ಘಾಟಗೆ, ಜಿ.ಎ.ನರೇಂದ್ರ ಕುಮಾರ್, ಲಕ್ಷ್ಮೀಬಾಯಿ ನೀಲನಾಯಕ, ಭಾಗಣ್ಣ ನಾಗಠಾಣ, ಜೆ.ಡಿ. ಧನ್ನೂರ, ಸಿ.ವಿ. ಮುದರಡ್ಡಿ, ವಿಶ್ವನಾಥ ಕಲ್ಯಾಣಿ, ಬೀರಪ್ಪ ಇಟ್ಟಣ್ಣವರ ಮತ್ತಿತರರಿದ್ದರು.