ಮುಂಡರಗಿ: ಶರಣ ಚಿಂತನ ಉಪನ್ಯಾಸ ಮಾಲಿಕೆ ಮೂಲಕ ಎಲ್ಲ ಬಸವಾದಿ ಪ್ರಮಥರ ಬಗ್ಗೆ ಉತ್ತಮ ರೀತಿಯಲ್ಲಿ ತಿಳಿಸಿಕೊಡುವುದರೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವುದು ಕಾರ್ಯ ಶ್ಲಾಘನೀಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ಸ್ಥಳೀಯ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೊಟ್ರೇಶ ಅಂಗಡಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಸಾಪ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಚಿಂತನಾ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಧಾರವಾಡದಲ್ಲಿ ಕಲ್ಲು ಎಸೆದರೆ ಕವಿಗಳ ಮನೆ ಮೇಲೆ ಬೀಳುತ್ತಿದ್ದವು ಎಂಬ ಮಾತನ್ನು ಕೇಳಿದ್ದೇವು. ಇದೀಗ ಈ ಭಾಗದಲ್ಲೂ ಕೂಡ ಸಾಕಷ್ಟು ಕವಿಗಳು, ಲೇಖಕರು ಸಾಹಿತ್ಯೀಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯುವರಾಜ ಮುಂಡರಗಿ, ಶರಣೆ ಮುಕ್ತಾಯಕ್ಕ ಅವರ ಹುಟ್ಟು, ಬಾಲ್ಯ, ತಂದೆ- ತಾಯಿ ಕಳೆದುಕೊಂಡ ಘಟನೆ ಮತ್ತು ಅಣ್ಣ ಅಜಗಣ್ಣನೊಂದಿಗಿನ ಬಾಂಧವ್ಯವನ್ನು ಮನ ಮುಟ್ಟುವಂತೆ ವಿವರವಾಗಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ಶಕುಂತಲಾ ಮುಂಡರಗಿ ಅವರು ಕನ್ನಡ, ನಾಡು, ನುಡಿಯ ಕುರಿತಾದ ಸ್ವರಚಿತ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಲಿಂಗರಾಜ ದಾವಣಗೇರಿ, ಆರ್.ವೈ. ಪಾಟೀಲ, ಕೃಷ್ಣಾ ಸಾಹುಕಾರ, ಮಧುಮತಿ ಇಳಕಲ್, ಡಾ.ನಿಂಗು ಸೊಲಗಿ, ಆರ್.ಕೆ. ರಾಯನಗೌಡರ, ವಿ.ಸಿ. ಅಲ್ಲಿಪುರ, ಮೋಹನ್ ಪಾಟೀಲ, ಕಾವೇರಿ ಬೋಲಾ, ಜಯಶ್ರೀ ಅಳವಂಡಿ, ರತ್ನ ಕಾಗನೂರುಮಠ, ಎಂ.ಎನ್. ಹೊನ್ನಕಿರಣ್ ಉಪಸ್ಥಿತರಿದ್ದರು. </p><p>ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಲಿಗೆಮ್ಮ ಭಜಂತ್ರಿ ಪ್ರಾರ್ಥಿಸಿದರು. ಮಂಜುನಾಥ ಮುಧೋಳ ವಂದಿಸಿದರು.