More

    ಪ್ರಿಯಕರನೊಂದಿಗೆ ಪತಿ ಕೊಂದಿದ್ದ ಮಹಿಳೆ

    ಮದ್ದೂರು: ಮಹಿಳೆ ತನ್ನ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಎರಡೂವರೆ ವರ್ಷದ ಹಿಂದೆ ಕೊಲೆ ಮಾಡಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

    ತಾಲೂಕಿನ ರಾಜೇಗೌಡನದೊಡ್ಡಿ ಗ್ರಾಮದ ನಿವಾಸಿ ರಂಗಸ್ವಾಮಿ ಕೊಲೆಯಾದವರು. ರಂಗಸ್ವಾಮಿ ಪತ್ನಿ ರೂಪಾ ತನ್ನ ಪ್ರಿಯಕರ ಮುತ್ತುರಾಜನೊಂದಿಗೆ ಸೇರಿ 2017 ಏ.7ರಂದು ಪತಿಯನ್ನು ಕೊಲೆ ಮಾಡಿ ಚೆಂದಹಳ್ಳಿ ಗ್ರಾಮದ ಕೆರೆ ಬಳಿ ಶವವನ್ನು ಹೂತು ಹಾಕಿದ್ದಳು. ಇದೀಗ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

    ಏನಿದು ಪ್ರಕರಣ: ಕೊಲೆಯಾಗಿರುವ ರಂಗಸ್ವಾಮಿ ಮೂಲತಃ ಚಾಮರಾಜನಗರ ಜಿಲ್ಲೆ ರಾಮಾಪುರ ಗ್ರಾಮದ ನಿವಾಸಿಯಾಗಿದ್ದು, ಮದ್ದೂರಿನ ಭೀಮನಕೆರೆ ಗ್ರಾಮದ ಕಲ್ಲು ಕ್ವಾರಿಯಲ್ಲಿ ಕುಟುಂಬದೊಂದಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅದೇ ಗ್ರಾಮದ ರೂಪಾ ರಂಗಸ್ವಾಮಿಗೆ ಪರಿಚಯವಾಗಿದ್ದಳು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ರಂಗಸ್ವಾಮಿ ಮತ್ತು ರೂಪಾ ದೇವಸ್ಥಾನದಲ್ಲಿ ಮದುವೆ ಆಗಿ ರಾಜೇಗೌಡನದೊಡ್ಡಿಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.

    15 ವರ್ಷಗಳವರೆಗೆ ರಂಗಸ್ವಾಮಿ ಹಾಗೂ ರೂಪಾ ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ರೂಪಾ ರಾಜೇಗೌಡನದೊಡ್ಡಿಯ ಮುತ್ತುರಾಜನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ರಂಗಸ್ವಾಮಿ ಕೆಲಸಕ್ಕೆ ಹೋದ ವೇಳೆ ರೂಪಾ ಮುತ್ತುರಾಜನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಈ ವಿಷಯ ರಂಗಸ್ವಾಮಿಗೆ ಗೊತ್ತಾಗಿ ಪತ್ನಿಯನ್ನು ಪ್ರಶ್ನೆ ಮಾಡಿದ್ದ. ಇದರಿಂದ ಕುಪಿತಳಾದ ರೂಪಾ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿ, ಮುತ್ತುರಾಜನೊಂದಿಗೆ ಸೇರಿ ಕೊಲೆ ಮಾಡಿ ಶವವನ್ನು ಚೆಂದಹಳ್ಳಿದೊಡ್ಡಿಯಲ್ಲಿ ಹೂತು ಹಾಕಿದ್ದರು. ನಂತರ ಪತಿ ಕಾಣೆಯಾಗಿರುವುದಾಗಿ ಸಂಬಂಧಿಕರಿಗೆ ಸುಳ್ಳು ಹೇಳಿದ್ದಳು. ಅದನ್ನು ಅವರು ನಂಬಿದ್ದರು.

    ಇಬ್ಬರ ನಡುವೆ ವೈಮನಸ್ಸು: ರಂಗಸ್ವಾಮಿಯನ್ನು ಕೊಲೆ ಮಾಡಿದ ನಂತರ ರೂಪಾ ಒಬ್ಬ ಮಗನನ್ನು ಹಾಸ್ಟೆಲ್‌ಗೆ ಸೇರಿಸಿ ಉಳಿದ ಇಬ್ಬರು ಮಕ್ಕಳೊಂದಿಗೆ ಮದ್ದೂರಿನಲ್ಲಿ ಮನೆ ಮಾಡಿಕೊಂಡು ಪ್ರಿಯಕರ ಮುತ್ತುರಾಜನೊಂದಿಗೆ ವಾಸವಿದ್ದಳು. ಎರಡೂವರೆ ವರ್ಷಗಳವರೆಗೆ ಇಬ್ಬರೂ ಸಹ ಸುಖವಾಗಿ ಇದ್ದರು. ಇತ್ತೀಚೆಗೆ ರೂಪಾ ಮತ್ತು ಮುತ್ತುರಾಜನ ನಡುವೆ ವೈಮನಸ್ಸು ಉಂಟಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು.
    ಮೃತ ರಂಗಸ್ವಾಮಿ ಕಾಣೆಯಾಗಿರುವುದಾಗಿ ಅಣ್ಣ ಮುತ್ತೇಲಿ ಕಳೆದ ಜ.13ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ರೂಪಾ ಮತ್ತು ಮುತ್ತುರಾಜನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಎಸ್ಪಿ ಪರಶುರಾಮ್, ಡಿವೈಎಸ್ಪಿ ಪೃಥ್ವಿ ಮಾರ್ಗದರ್ಶನದಲ್ಲಿ ಸಿಪಿಐ ದೇವರಾಜು. ಪಿಎಸ್‌ಐ ಮಂಜೇಗೌಡ, ಪೇದೆಗಳಾದ ಕುಮಾರಸ್ವಾಮಿ, ನಂಜುಂಡಸ್ವಾಮಿ ಪ್ರಕರಣ ಬಯಲಿಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts