ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ವಿರುದ್ಧ ಆರೋಪ ಮಾಡಿದ್ದ ಮಹಿಳೆ

ನವದೆಹಲಿ: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಹಿಳೆ ಆಂತರಿಕ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ತಮ್ಮದೇ ಆದೇ ಆತಂಕ ಮತ್ತು ನ್ಯಾಯ ಸಿಗದಿರುವ ಅನುಮಾನದಿಂದಾಗಿ ತಾವು ವಿಚಾರಣೆಯಿಂದೆ ಹಿಂದೆ ಸರಿಯುತ್ತಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಂತರಿಕ ವಿಚಾರಣೆ ವೇಳೆ ತಮ್ಮ ವಕೀಲರನ್ನು ಜತೆಗೆ ಕರೆತರುವ ಕುರಿತು ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದರು. ಅಲ್ಲದೆ, ವಿಚಾರಣೆಯ ಧ್ವನಿಮುದ್ರಿಕೆಯಾಗಲಿ ಅಥವಾ ವಿಡಿಯೋ ಚಿತ್ರೀಕರಣವನ್ನಾಗಲಿ ಮಾಡುವಂತೆ ಮಾಡಿಕೊಂಡ ಮನವಿಗೂ ಪುರಸ್ಕಾರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ವಿಚಾರಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೂವರು ನ್ಯಾಯಮೂರ್ತಿಗಳ ಸಮಿತಿಯ ಮೂಲಕ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ನ ಫುಲ್​ ಕೋರ್ಟ್​ (ಸರ್ವಸದಸ್ಯ ನ್ಯಾಯಮೂರ್ತಿಗಳು) ಸಭೆ ನಿರ್ಧರಿಸಿತ್ತು. ಇದಕ್ಕಾಗಿ ನ್ಯಾಯಮೂರ್ತಿಗಳಾದ ಎಸ್​.ಎ. ಬೊಬ್ಡೆ, ಇಂದು ಮಲ್ಹೋತ್ರಾ ಮತ್ತು ಎನ್​.ವಿ. ರಮಣ ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ನ್ಯಾಯಮೂರ್ತಿ ಎನ್​.ವಿ. ರಮಣ ಅವರು ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ಆಪ್ತರು ಎಂದು ಮಹಿಳೆ ಆರೋಪಿಸಿದ್ದರಿಂದ ಅವರ ಬದಲಿಗೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸಮಿತಿಗೆ ನೇಮಿಸಲಾಗಿತ್ತು. (ಏಜೆನ್ಸೀಸ್​)