More

    ದೇಶದ 63 ಕುಬೇರರ ಸಂಪತ್ತು ಬಜೆಟ್​ಗಿಂತ ಹೆಚ್ಚು: ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಆಕ್ಸ್​ಫ್ಯಾಮ್ ಸಂಸ್ಥೆಯಿಂದ ವರದಿ ಮಂಡನೆ

    ದಾವೋಸ್: ಭಾರತದಲ್ಲಿರುವ ಶೇ. 1ರಷ್ಟು ಅಗ್ರಗಣ್ಯ ಶ್ರೀಮಂತರು ದೇಶದ ಶೇ. 70ರಷ್ಟು ಅಂದರೆ ಸುಮಾರು 90 ಕೋಟಿಯಷ್ಟು ಜನರು ಹೊಂದಿರುವ ಆಸ್ತಿಗಿಂತ ನಾಲ್ಕು ಪಟ್ಟು ಹೆಚ್ಚು ಸಂಪತ್ತು ಹೊಂದಿದ್ದಾರೆ. ಅಲ್ಲದೇ ಇವರ ಸಂಪತ್ತು ಭಾರತದ 2018-19ರ ಕೇಂದ್ರ ಬಜೆಟ್​ಗಿಂತಲೂ ಹೆಚ್ಚಿದೆ ಎಂದು ಅಧ್ಯಯನವೊಂದು ತಿಳಿಸಿದೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) 50ನೇ ವಾರ್ಷಿಕ ಸಭೆಯಲ್ಲಿ ಆಕ್ಸ್​ಫ್ಯಾಮ್ ಎಂಬ ಸಂಸ್ಥೆ ಈ ಅಧ್ಯಯನ ವರದಿ ಮಂಡಿಸಿದೆ. ವರದಿ ಪ್ರಕಾರ, ವಿಶ್ವದ 2,153 ಶತಕೋಟ್ಯಧಿಪತಿಗಳು ಜಗತ್ತಿನ ಶೇ. 60 ಅಂದರೆ ಸುಮಾರು 4.6 ಬಿಲಿಯನ್​ನಷ್ಟು ಜನಸಂಖ್ಯೆ ಹೊಂದಿರುವ ಆಸ್ತಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಜಾಗತಿಕ ಆರ್ಥಿಕತೆ ಅಸಮಾನತೆ ಆಘಾತಕಾರಿಯಾಗಿದ್ದು, ಕಳೆದ 10 ವರ್ಷಗಳಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ದ್ವಿಗುಣವಾಗಿದೆ ಎಂದು ಆಕ್ಸ್​ಫ್ಯಾಮ್ ಹೇಳಿದೆ.

    ಭಾರತದಲ್ಲಿ ಒಟ್ಟು 63 ಶತಕೋಟ್ಯಾಧಿಪತಿಗಳನ್ನು ಗುರುತಿಸಲಾಗಿದ್ದು, ಇವರ ಸಂಪತ್ತು 2018-19ರ ಆರ್ಥಿಕ ವರ್ಷದ ಕೇಂದ್ರ ಬಜೆಟ್​ಗಿಂತ ಹೆಚ್ಚಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷದ ಕೇಂದ್ರ ಬಜೆಟ್​ನ ಒಟ್ಟು ಮೊತ್ತ -ಠಿ; 24,42,200 ಕೋಟಿಯಷ್ಟಿತ್ತು.

    ಆಕ್ಸ್​ಫ್ಯಾಮ್ ವರದಿಯ ಪ್ರಕಾರ, ತಂತ್ರಜ್ಞಾನ ಕಂಪನಿಯ ಉನ್ನತ ಸಿಇಒ ಒಬ್ಬರು ಒಂದು ವರ್ಷದಲ್ಲಿ ಗಳಿಸುವಷ್ಟು ಹಣವನ್ನು ದುಡಿಯಲು ಸಾಮಾನ್ಯ ಮಹಿಳಾ ಮನೆಕೆಲಸದವರಿಗೆ ಬರೋಬ್ಬರಿ 22,277 ವರ್ಷಗಳು ಬೇಕಾಗುತ್ತದೆ. ಸಾಮಾನ್ಯ ಕಾರ್ವಿುಕ ವರ್ಷಪೂರ್ತಿ ಗಳಿಸುವ ಹಣವನ್ನು ಸಿಇಒ ಕೇವಲ 10 ನಿಮಿಷದಲ್ಲಿ ಗಳಿಸುತ್ತಾರೆ.

    ಎಫ್​ಡಿಐ ಟಾಪ್ 10ರಲ್ಲಿ ಭಾರತ

    2019ರ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) ಪಡೆದ ಜಗತ್ತಿನ ಪ್ರಮುಖ 10 ರಾಷ್ಟ್ರಗಳಲ್ಲಿ ಭಾರತವೂ ಒಂದು. 2019ರಲ್ಲಿ ಭಾರತದ ಎಫ್​ಡಿಐ ಹಿಂದಿನ ವರ್ಷಕ್ಕಿಂತ ಶೇ.16ರಷ್ಟು ಹೆಚ್ಚಾಗಿದ್ದು, 49 ಬಿಲಿಯನ್ ಡಾಲರ್​ನಷ್ಟು ವಿದೇಶಿ ಬಂಡವಾಳ ಹರಿದುಬಂದಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಿತಿ (ಯುಎನ್​ಸಿಟಿಎಡಿ) ಸಂಗ್ರಹಿಸಿದ ಜಾಗತಿಕ ಹೂಡಿಕೆ ಟ್ರೆಂಡ್ ಮಾನಿಟರ್ ವರದಿಯಲ್ಲಿ ತಿಳಿಸಲಾಗಿದೆ. ಜಾಗತಿಕ ವಿದೇಶಿ ನೇರ ಬಂಡವಾಳ ಹೂಡಿಕೆ 2019ರಲ್ಲಿ 1.39 ಟ್ರಿಲಿಯನ್ ಡಾಲರ್​ಗಳಷ್ಟಿದ್ದು, 2018ರ 1.41 ಟ್ರಿಲಿಯನ್ ಡಾಲರ್​ಗೆ ಹೋಲಿಸಿದರೆ ಶೇಕಡಾ 1 ಅಂಶ ಕುಸಿತವಾಗಿದೆ.

    ಈ ವರ್ಷ ಭಾರತದ ಜಿಡಿಪಿ ಏರಿಕೆ

    2020 ಮತ್ತು 2021ರಲ್ಲಿ ಭಾರತದ ಜಿಡಿಪಿ ಸುಧಾರಿಸಲಿದ್ದು, ಕ್ರಮವಾಗಿ ಶೇ. 5.8 ಮತ್ತು ಶೇ. 6.5ಕ್ಕೆ ಏರಿಕೆಯಾಗುವ ನೀರಿಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಬೆಳವಣಿಗೆ 2019ರಲ್ಲಿ ಭಾರತದ ಜಿಡಿಪಿ ಶೇ. 6.1 ಇರಲಿದೆ ಎಂದು ಕಳೆದ ಅಕ್ಟೋಬರ್​ನಲ್ಲಿ ಅಂದಾಜಿಸಲಾಗಿತ್ತು. ಆದರೆ ಆರ್ಥಿಕತೆಯ ಮಂದಗತಿಯಿಂದಾಗಿ ಇದು ಶೇ. 4.8 ಆಗಿರುತ್ತದೆ ಎಂದು ಸೋಮವಾರ ಬಿಡುಗಡೆ ಮಾಡಿದ ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಐಎಂಎಫ್ ಹೇಳಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ದರವನ್ನು ಕೆಳಮುಖವಾಗಿ ಪರಿಷ್ಕರಿಸಿರುವ ಐಎಂಎಫ್, 2019ರ ಜಿಡಿಪಿ ಶೇ. 2.9 ಆಗಿರಲಿದೆ ಎಂದಿದೆ. 2020ರಲ್ಲಿ ಶೇ. 3.3 ಹಾಗೂ 2021ರಲ್ಲಿ ಅದು ಶೇ. 3.4 ಆಗಲಿದೆ ಎಂದು ಅಂದಾಜು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts