ಬಾಗಲಕೋಟೆ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಶನಿವಾರ ಸಂಜೆ ಬೀಳಗಿ ಪಟ್ಟಣ ಸೇರಿ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ.
ಮಳೆ ಆರ್ಭಟಕ್ಕೆ ರಸ್ತೆ ತುಂಬೆಲ್ಲ ನೀರು ಹರಿದಾಡಿದೆ. ಬಿರುಸಿನಿಂದ ಸುರಿದ ಮಳೆಯಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಪಾದಚಾರಿಗಳು ಮಳೆಯಲ್ಲಿ ತೋಯಿಸಿಕೊಳ್ಳುತ್ತ ಮನೆಯತ್ತ ತೆರಳುತ್ತಿದ್ದ ದೃಶ್ಯವೂ ಕಂಡು ಬಂದಿತು. ಕಳೆದ ಐದಾರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ ಜೋರಾಗಿ ನಡೆದಿದೆ. ಇದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಹುನಗುಂದ ತಾಲೂಕಿನ ಕಮತಗಿ ಬಳಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ನದಿ ಧುಮ್ಮಿಕ್ಕಿ ಹರಿಯುತ್ತಿರುವುದು ಕಣ್ಣಿಗೆ ಹಬ್ಬವಾಗಿದೆ. ಮೃಗಶಿರ ಮಳೆ ಆರಂಭದ ದಿನವೇ ಜಿಲ್ಲೆಯ ವಿವಿಧೆಡೆ ಅಬ್ಬರಿಸಿದ್ದು, ಉತ್ತಮ ಮಳೆಯಾಗುವ ಶುಭಸೂಚನೆ ನೀಡಿದೆ.