ಚುನಾವಣೆ ಬಹಿಷ್ಕರಿಸಲು ಗೌರಿಪುರ ಗ್ರಾಮಸ್ಥರ ನಿರ್ಧಾರ


ವಿಜಯವಾಣಿ ಸುದ್ದಿಜಾಲ ಹುಣಸೂರು
ತಾಲೂಕಿನ ಗೌರಿಪುರ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕೆಂದು ಎರಡು ದಶಕಗಳಿಂದ ಒತ್ತಾಯಿಸುತ್ತಿದ್ದರೂ ಸ್ಪಂದಿಸದ ತಾಲೂಕು ಆಡಳಿತದ ನಿಲುವನ್ನು ಖಂಡಿಸಿ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಸೋಮವಾರ ಗ್ರಾಮದ ಶ್ರೀಶನಿದೇವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಗ್ರಾಮಸ್ಥರ ಸಭೆಯಲ್ಲಿ ಗ್ರಾ ಪಂ ಸದಸ್ಯ ಗೌರಿಪುರಮಹದೇವ್ ಮಾತನಾಡಿ, ಗ್ರಾಮದಲ್ಲಿ ಸುಮಾರು 70 ವರ್ಷಗಳಿಂದ 400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದೇವೆ.ಎಲ್ಲ ಜನಾಂಗದ ಜನರು ಇಲ್ಲಿ ವಾಸಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದೂರದೃಷ್ಟಿಯಿಂದಾಗಿ ಹೌಸಿಂಗ್‌ಬೋರ್ಡ್ ವತಿಯಿಂದ 120 ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ಕೊಡಿಸಿದ್ದರು. ಅವರೇ ಗೌರಿ ಪುರವೆಂದು ನಾಮಕರಣವನ್ನೂ ಮಾಡಿದ್ದರು. ಆದರೆ ಇದುರೆಗೂ ತಾಲೂಕಿನ ನಕ್ಷೆಯಲ್ಲಿ ಗೌರಿಪುರ ಗ್ರಾಮವಿರುವ ದಾಖಲೆ ಇಲ್ಲ. ಈಗಲೂ ಉದ್ದೂರು ನಾಲೆ ಎಂದು ನಮೂದಿಸಿದ್ದಾರೆ. ಇದನ್ನು ಗೋಮಾಳವೆಂಬ ನೆಪದಲ್ಲಿ ವಾಸಿಸುವ ಮನೆಗಳಿಗಾಗಲಿ, ಜಮೀನು ಗಳಿಗಾಗಲಿ ಹಕ್ಕುಪತ್ರ ನೀಡ್ತಿಲ್ಲ.ಇದರಿಂದ ಗ್ರಾಮಸ್ಥರು ಸೌಲಭ್ಯಗಳಿಂದ ವಂಚಿತರಾಗುವ ಜತೆಗೆ ಮಾಲೀಕತ್ವ ಕೂಡ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಂದಾಯ ಕಟ್ಟಿ, ಮಾಲೀಕತ್ವ ಕೇಳಬೇಡಿ
ಗ್ರಾಪಂನವರು ಮನೆ, ನಲ್ಲಿ ನೀರಿಗೆ ಕಂದಾಯ ಪಡೆಯುತ್ತಿದ್ದಾರೆ. ಇನ್ನು ಪಂಚಾಯಿತಿಯಿಂದ 120 ಮನೆ ಮಂಜೂರಾಗಿದ್ದು, ನಿರ್ಮಿಸಿಕೊಳ್ಳಲು ಆದೇಶಪತ್ರ ನೀಡಿದ್ದಾರೆ. ಆದರೆ ಮನೆ ಮಾಲೀಕತ್ವದ ಹಕ್ಕುಪತ್ರ ನೀಡಲು ಸಾಧ್ಯವಿಲ್ಲವೆನ್ನು ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣೆಗೂ ಮೊದಲು ದಾಖಲೆ ಗ್ರಾಮವನ್ನಾಗಿಸಬೇಕು.ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಯ. ಚಿಕ್ಕಣ್ಣೇಗೌಡ, ಗ್ರಾಪಂ ಸದಸ್ಯ ಜಯರಾಂ ಮಾತನಾಡಿ, ಚುನಾವಣೆಯೊಳಗೆ ಕಂದಾಯ ಗ್ರಾಮವನ್ನಾಗಿಸಿ, ನಕ್ಷೆಯಲ್ಲಿ ಗೌರಿಪುರ ಎಂದು ದಾಖಲಿಸಬೇಕು. ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕರಿಸೋಣ ಎಂದರು. ಇದಕ್ಕೆ ಎಲ್ಲರೂ ಒಪ್ಪಿದರು. ಯ.ಕರೀಗೌಡ, ಮುಖಂಡರಾದ ಎಂ.ಜೆ.ನಾರಾಯಣಗೌಡ, ಸುಶೀಲಮ್ಮ, ಮರಿಯಮ್ಮ ಮತ್ತು 100ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.

ಬಹಿಷ್ಕಾರ ಒಳಿತಲ್ಲ
ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ಆರ್.ಶಿವಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ, ಚುನಾವಣೆ ಬಹಿಷ್ಕಾರ ಒಳಿತಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕಂದಾಯ ನಿರೀಕ್ಷಕ ಪ್ರಭಾಕರ್ ಮಾತನಾಡಿ, ಇದು ಸರ್ಕಾರದ ಮಟ್ಟದಲ್ಲಾಗಬೇಕಾದ ತೀರ್ಮಾನ. ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು. ಗ್ರಾಮಲೆಕ್ಕಿಗರಾದ ಶಿವಕುಮಾರ್,ನಾಗೇಶ್, ಪಿಡಿಒ ನವೀನ್ ಹಾಜರಿದ್ದರು.