ಕುಸಿಯುತ್ತಿದೆ ಆನೆಕೆರೆ ತಡೆಗೋಡೆ

ಹಿರಿಕರ ರವಿ ಸೋಮವಾರಪೇಟೆ
ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣದ ಆನೆಕೆರೆ ಭರ್ತಿ ಆಗುತ್ತಿರುವುದರಿಂದ ಪಟ್ಟಣದ ಜನರು ಹರ್ಷಗೊಂಡಿದ್ದಾರೆ. ಆದರೆ, ಕೆರೆಯ ತಡೆಗೋಡೆ ಕುಸಿಯುತ್ತಿರುವುದರಿಂದ ಆತಂಕವೂ ಎದುರಾಗಿದೆ.
ಕಳೆದ ಹಲವಾರು ವರ್ಷಗಳಿಂದ ಪಟ್ಟಣ ಪಂಚಾಯಿತಿ ಆಡಳಿತ ಕೆರೆಯ ಅಭಿವೃದ್ಧಿಗೆ ಯೋಜನೆ ರೂಪಿಸದ ಹಿನ್ನೆಲೆಯಲ್ಲಿ ಕೆರೆಯೊಳಗೆ ಹೂಳು ತುಂಬಿಕೊಂಡು ಪಾಳುಬಿದ್ದಿತ್ತು.

ಕೆರೆ ನಿರ್ಮಿಸಿದ ಕಾಲದಿಂದಲೂ ಸೋಮವಾರಪೇಟೆ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು, ಪಕ್ಕದ ಗ್ರಾಮೀಣ ಭಾಗದ ನೂರಾರು ಎಕರೆ ಭತ್ತ ಕೃಷಿಗೆ ನೀರುಣಿಸುತ್ತಿದ್ದ ಆನೆಕೆರೆಯ ಪುನಶ್ಚೇತನಕ್ಕೆ ಮುಂದಾದ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಮೂರು ತಿಂಗಳ ಹಿಂದೆ ಸುಮಾರು 4 ಲಕ್ಷ ರೂ. ಖರ್ಚು ಮಾಡಿ ಕೆರೆಯ ಹೂಳು ತೆಗೆಸಿದ್ದರು.

ಈ ಬಾರಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೆರೆಯಲ್ಲಿ ನೀರು ತುಂಬುತ್ತಿದೆ. ಆದರೆ, ಹಳೆಯದಾದ ಕೆರೆಯ ತಡೆಗೋಡೆ ಕುಸಿಯುತ್ತಿದ್ದು ಅನಾಹುತ ಸಂಭವಿಸುವ ಸೂಚನೆಗಳು ಕಾಣುತ್ತಿವೆ. ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯಲ್ಲಿ ಶಿಥಿಲಗೊಂಡಿರುವ ತಡೆಗೋಡೆ ಇದ್ದು, ಯಾವುದಾದರು ವಾಹನಗಳು ಅತಿ ವೇಗದಿಂದ ಬಂದು ಡಿಕ್ಕಿ ಹೊಡೆದರೆ ನೇರವಾಗಿ ಕೆರೆಯೊಳಗೆ ಬೀಳುವ ಸಾಧ್ಯತೆ ಇದೆ.
ತಡೆಗೋಡೆ ದುರಸ್ತಿಪಡಿಸುವಂತೆ ಪಂಚಾಯಿತಿಗೆ ಸದಸ್ಯರು ಮನವಿ ಮಾಡಿಕೊಂಡಿದ್ದರೂ ಪಂಚಾಯಿತಿ ಕ್ರಮಕೈಗೊಳ್ಳದ ಕಾರಣ ತಡೆಗೋಡೆ ಕುಸಿತ ಮುಂದುವರಿದಿದೆ. ಲೋಕೋಪಯೋಗಿ ಇಲಾಖೆ ಕೂಡ ಕ್ರಮಕೈಗೊಳ್ಳುತ್ತಿಲ್ಲ.

1910ರಲ್ಲಿ ನಿರ್ಮಾಣ: 1910ರಲ್ಲಿ ಆಲೆಕಟ್ಟೆ ಹನುಮ ಮೇಸ್ತ್ರಿ ಎಂಬುವರು ದೂರದೃಷ್ಟಿಯಿಂದ ಕೆರೆ ನಿರ್ಮಾಣಗೊಂಡಿತ್ತು. ವರ್ಷವಿಡೀ ತುಂಬಿ, ಎರಡು ತೂಬಿನಲ್ಲಿ ನೀರು ಹರಿಯುತ್ತಿದ್ದರಿಂದ ಕೆಳ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಸಮೃದ್ಧ ಫಸಲು ಪಡೆಯುತ್ತಿದ್ದರು.
ಒಂದು ಶತಮಾನದ ಇತಿಹಾಸವಿರುವ ಕೆರೆಯಲ್ಲಿ ಕಾಡಾನೆಗಳು ನೀರು ಕುಡಿಯಲು ಬರುತ್ತಿದ್ದು, ಈ ಕಾರಣದಿಂದ ಆನೆಕೆರೆ ಎಂದು ಹೆಸರು ಬಂದಿದೆ ಎನ್ನಲಾಗಿದೆ. ಕೆರೆ ತುಂಬಿ ಕೋಡಿ ಹರಿದರೆ, ಗ್ರಾಮಕ್ಕೆ ಸುಭೀಕ್ಷೆ ಎಂಬ ನಂಬಿಕೆಯಿದ್ದ ಕಾರಣ ಕೆರೆ ಬಗ್ಗೆ ಜನರಲ್ಲಿ ಇವತ್ತಿಗೂ ಪೂಜ್ಯ ಭಾವನೆಯಿದೆ. ಈಗಾಗಲೇ ಕೆರೆಯ ಸುತ್ತಮುತ್ತ ಕಾಡು ಬೆಳೆದಿದೆ. ರಾತ್ರಿ ವೇಳೆಯಲ್ಲಿ ಪುಂಡಪೋಕರಿಗಳು ಕೆರೆಯ ಅವರಣದಲ್ಲಿ ಕುಳಿತು ಮದ್ಯಪಾನ ಮಾಡಿ ಬಾಟಲ್‌ಗಳನ್ನು ಕೆರೆಯೊಳಕ್ಕೆ ಎಸೆಯುತ್ತಿದ್ದಾರೆ ಎಂಬ ಆರೋಪ ಇದೆ. ಇನ್ನಾದರೂ ಪಟ್ಟಣ ಪಂಚಾಯಿತಿ ಆನೆಕೆರೆಯ ಅಭಿವೃದ್ಧಿ ಮತ್ತು ಪಾವಿತ್ರ್ಯತೆ ಕಾಪಾಡುವತ್ತ ಗಮನ ಹರಿಸುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಹಿಂದೆ ಲೋಕೋಪಯೋಗಿ ಇಲಾಖೆ ಕೆರೆಗೆ ತಡೆಗೋಡೆ ನಿರ್ಮಿಸಿತ್ತು. ಸದ್ಯ ದುರಸ್ತಿಗೆ ಪತ್ರ ಬರೆಯಲಾಗಿದೆ. ಪಂಚಾಯಿತಿಯ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಆನೆಕೆರೆ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುವುದು.
| ನಾಚಪ್ಪ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

ಆನೆಕೆರೆ ಭರ್ತಿಯಾದರೆ ಇಲ್ಲಿನ ಜನರು ಸಂಭ್ರಮಿಸುತ್ತಾರೆ. ವರ್ಷವಿಡೀ ಕೆರೆಯಲ್ಲಿ ನೀರು ಬತ್ತದಂತೆ ಪಂಚಾಯಿತಿ ಆಡಳಿತ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಬೇಕು. ಆನೆಕೆರೆ ಸುತ್ತ ಸ್ವಚ್ಛತೆ ಕಾಪಾಡಬೇಕು.
| ಸಿ.ಸಿ.ನಂದಕುಮಾರ್ ಅಧ್ಯಕ್ಷರು, ವಾಹನ ಚಾಲಕರ ಸಂಘ