ಮಲೆನಾಡಿನಲ್ಲಿ ಗೋಪೂಜೆ ಸಂಭ್ರಮ

ಶಿವಮೊಗ್ಗ: ಬಲಿಪಾಡ್ಯಮಿಯಂದು ಜಿಲ್ಲಾದ್ಯಂತ ಜನತೆ ಸಂಭ್ರಮ, ಸಡಗರದಿಂದ ಗೋಪೂಜೆ ನೆರೆವೇರಿಸಿದರು. ಗ್ರಾಮೀಣ ಭಾಗದಲ್ಲಿ ಎತ್ತು ಹಾಗೂ ಹಸುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರ ಹಾಗೂ ಪಟ್ಟಣದ ಕೆಲ ಗೋಶಾಲೆಗಳಲ್ಲಿಯೂ ಸಾಮೂಹಿಕ ಗೋಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ನಗರದ ಕೆಲ ಮನೆಗಳಲ್ಲಿ ಒಳಗಡೆ ಗೋವುಗಳನ್ನು ಕರೆತಂದು ಅವುಗಳಿಗೆ ಪೂಜೆ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲಿ ಎತ್ತು ಹಾಗೂ ಹಸುಗಳಿಗೆ ಚೆಂಡು ಹೂವಿನೊಂದಿಗೆ ಪಚ್ಚೆತೆನೆ, ಹಿಂಗಾರ, ವೀಳ್ಯದೆಲೆ, ಹಣ್ಣು ಅಡಕೆ ಮುಂತಾದವುಗಳನ್ನು ಸೇರಿಸಿದ ಮಾಲೆ ಸಿದ್ಧಪಡಿಸಿ ಸಿಂಗರಿಸಲಾಗಿತ್ತು. ಎತ್ತುಗಳಿಗೆ ಹೂವುಗಳಿಂದ ಸಿಂಗರಿಸಿ ಅವುಗಳ ಕೊಂಬಿಗೆ ಬಣ್ಣ ಹಚ್ಚಿ ಮತ್ತಷ್ಟು ಸುಂದರಗೊಳಿಸಲಾಗಿತ್ತು. ಸಿಂಗಾರಗೊಂಡ ಎತ್ತುಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ಸುತ್ತಲೂ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಬಳಿಕ ಎತ್ತುಗಳೊಂದಿಗೆ ಗ್ರಾಮದೇವತೆಗೆ ಪೂಜೆ ಸಲ್ಲಿಸಲಾಯಿತು.