ಮಾಲಂಬಿ ದಿನೇಶ್ ಶನಿವಾರಸಂತೆ
ಜ್ಞಾನಿಗಳ ಭಂಡಾರವೇ ಇಂದಿನ ದೊಡ್ಡ ಭಂಡಾರ. ಗ್ರಾಮಕ್ಕೆ ಕೊಡಗಿನ ರಾಜ ಚಿಕ್ಕ ವೀರರಾಜೇಂದ್ರ ಒಡೆಯರ್ ಬಂದಿದ್ದರು. ಇನ್ನೊಂದೆಡೆ ಪಾಳೆಗಾರರ ವಾಸಸ್ಥಾನವಾಗಿತ್ತು. ಹಿಂದೆ ಪಾಳೆಗಾರರು ಒಡವೆ ಐಶ್ವರ್ಯ ಹಾಗೂ ದವಸ ಧಾನ್ಯಗಳನ್ನು ಶೇಖರಣೆ ಮಾಡಲು ಈ ಗ್ರಾಮವನ್ನು ಆಯ್ಕೆಮಾಡಿಕೊಂಡಿದ್ದರು ಹಾಗಾಗಿ ಭಂಡಾರ ಎಂಬ ಹೆಸರಿಡಲಾಗಿತ್ತು. ಈಗ ಅದು ದೊಡ್ಡ ಭಂಡಾರ ಗ್ರಾಮವಾಗಿ ಮಾರ್ಪಾಡಾಗಿದೆ ಎಂಬೂದು ಗ್ರಾಮದ ಹಿರಿಯರ ಮಾತು.
ಇನ್ನೊಂದೆಡೆ ಚಿಕ್ಕ ವೀರರಾಜೇಂದ್ರ ಓಡೆಯರ್ ಈ ಗ್ರಾಮದ ಜನರು ಬುದ್ಧಿವಂತರು, ಜ್ಞಾನಿಗಳು, ಎಲ್ಲಾ ವಿಚಾರಗಳನ್ನು ತಿಳಿದವರು ಜ್ಞಾನಭಂಡಾರ ಇವರಲ್ಲಿದೆ ಎಂದಿದ್ದರು ಹಾಗಾಗಿ ಈ ಗ್ರಾಮಕ್ಕೆ ದೊಡ್ಡ ಭಂಡಾರ ಎಂದು ಹೆಸರು ಬಂದಿದೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ. ಈ ಎಲ್ಲಾ ಕಥೆಗಳಿಗೆ ಸಾಕ್ಷಿ ಎಂಬಂತೆ ಅಲ್ಲಲ್ಲಿ ಮಾಸ್ತಿಗಲ್ಲು, ವೀರಗಲ್ಲು ಕಾಣಸಿಗುತ್ತವೆ.
ಈ ಗ್ರಾಮವು ಹೋಬಳಿ ಕೇಂದ್ರವಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ, ಈ ಭಾಗ್ಯ ಲಭಿಸಿಲ್ಲ. ಗ್ರಾಮ ಮುಖ್ಯ ರಸ್ತೆಯಿಂದ ಒಳಭಾಗದಲ್ಲಿರುವುದರಿಂದ ಸರ್ಕಾರಿ ಕಚೇರಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೆಸ್ಸೂರು ಮುಖ್ಯ ರಸ್ತೆಯ ಬದಿಯಲ್ಲಿ ಸರ್ಕಾರಿ ಕಚೇರಿ ಮಾಡಲಾಗಿದೆ ಎಂಬ ಮಾತು ಗ್ರಾಮಸ್ಥರದ್ದು.
ಸುಮಾರು 65ವರ್ಷಗಳನ್ನು ಕಂಡಿರುವ ಸರ್ಕಾರಿ ಪ್ರಾಥಮಿಕ ಶಾಲೆ ಗ್ರಾಮದಲ್ಲಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ಉನ್ನತ ಮಟ್ಟದ ಸರ್ಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿದ್ದಾರೆ. ಪಡಿತರ ಕೇಂದ್ರ, ಅಂಗನವಾಡಿ ಕೇಂದ್ರ ಗ್ರಾಮದಲ್ಲಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಪಟ್ಟಣಕ್ಕೆ ತೆರಳಬೇಕಾದರೆ 4 ಕಿ.ಮೀ ದೂರದ ಬೆಸ್ಸೂರು ಅಥವಾ 6 ಕಿ.ಮೀ ದೂರದ ಕೊಡ್ಲಿಪೇಟೆಗೆ ಬರಬೇಕಾಗಿದೆ.
ಉದ್ಯೋಗಕ್ಕೆ ತೆರಳುವವರು, ಶಾಲಾ ಕಾಲೇಜು ಮಕ್ಕಳು ನಿತ್ಯ ನಾಲ್ಕೈದು ಕಿಲೋ ಮೀಟರ್ ನಡೆದುಕೊಂಡು ಹೋಗಿ ಬಸ್‌ನಲ್ಲಿ ತೆರಳಬೇಕು. ಗ್ರಾಮದವರು ಪ್ರೌಢ ಶಾಲೆಗೆ ಬೆಸ್ಸೂರು, ಪದವಿಪೂರ್ವ ಶಿಕ್ಷಣಕ್ಕೆ ಕೊಡ್ಲಿಪೇಟೆ ಅಥವ ಶನಿವಾರಸಂತೆಗೆ ತೆರಳಬೇಕು.
ಕೃಷಿಕರೇ ಹೆಚ್ಚು: ಗ್ರಾಮದಲ್ಲಿ ಕೃಷಿಕರೇ ಹೆಚ್ಚು ನೆಲೆಸಿದ್ದು, ಭತ್ತ, ಜೋಳ, ಶುಂಠಿ, ಕಾಫಿ, ಕಾಳು ಮೆಣಸು, ಕಿತ್ತಳೆ, ಬಾಳೆ, ತೆಂಗು, ಅಡಕೆ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಜತೆಗೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಳ್ಳುತ್ತಾರೆ. ಗ್ರಾಮದಲ್ಲಿ ಹಾಲಿನ ಡೇರಿ ಪ್ರಾರಂಭಿಸಲು ಗ್ರಾಮಸ್ಥರು ಸಾಕಷ್ಟು ಪ್ರಯತ್ನಿಸಿದರು ಅದು ಫಲ ನೀಡದೆ ಬೆಸ್ಸೂರು ಗ್ರಾಮದಲ್ಲಿ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುತ್ತಿದ್ದು, ಗ್ರಾಮದಲ್ಲಿ ಡೇರಿ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಖಾಸಗಿಯವರಿಗೆ ಹಾಲು ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಒಗ್ಗೂಡಿಸುವ ಮಲ್ಲೇಶ್ವರ: ದೊಡ್ಡ ಭಂಡಾರ ಗ್ರಾಮದಲ್ಲಿ ಶ್ರೀ ಮಲ್ಲೇಶ್ವರ ದೇವಾಲಯವಿದ್ದು, ಗ್ರಾಮದ ಎಲ್ಲರೂ ಒಗ್ಗೂಡಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 75 ಮನೆಗಳಿದ್ದು, ಒಕ್ಕಲಿಗರು ಹೆಚ್ಚಿದ್ದಾರೆ. ಉಳಿದಂತೆ ವಿಶ್ವ ಕರ್ಮ ಹಾಗೂ ಇತರರು ಇದ್ದಾರೆ. ಗ್ರಾಮದಲ್ಲಿ ಗೌರಿ ಗಣೇಶ, ಶಿವರಾತ್ರಿ, ಯುಗಾದಿ, ದೀಪಾವಳಿ ಇತರೆ ಎಲ್ಲಾ ಹಿಂದು ಹಬ್ಬಗಳನ್ನು ಆಚರಿಸಲಾಗುತ್ತದೆ.
ಜನಪ್ರತಿನಿಧಿಗಳು ಅಭಿವೃದ್ಧಿಗೆ ಒತ್ತು ನೀಡಲಿ: ಗ್ರಾಮದ ಬಹುತೇಕ ರಸ್ತೆಗಳು ಡಾಂಬಾರು ಕಾಣದೆ ಜನ ಜಾನುವಾರು ತಿರುಗಾಡುವುದು ಕಷ್ಟ ಎಂಬಂತಾಗಿದೆ. ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದು ಗ್ರಾಮಸ್ಥರು, ವಿದ್ಯಾರ್ಥಿಗಳು ಪಟ್ಟಣಕ್ಕೆ ತೆರಳಲು ಕಷ್ಟ ಪಡುವಂತಾಗಿದೆ.
ಗ್ರಾಮದಲ್ಲಿರುವ ಮಾಸ್ತಿಗಲ್ಲು ವೀರಗಲ್ಲುಗಳನ್ನು ಪುರಾತತ್ವ ಇಲಾಖೆಯವರು ಪರಿಶೀಲನೆ ಮಾಡಿ, ಇವು ನಶಿಸಿ ಹೋಗದಂತೆ ಕಾಪಾಡಬೇಕು. ಸರ್ಕಾರ ಈ ಗ್ರಾಮಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಿ ಆ ನೀರನ್ನು ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ಕಾಡಂಚಿನ ಗ್ರಾಮ ಆಗಿರುವುದರಿಂದ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದೆ ಇದನ್ನು ನಿಯಂತ್ರಣಮಾಡಬೇಕು. ಮಹಿಳಾ ಸಮಾಜದ ಹಳೆಯ ಕಟ್ಟಡವನ್ನು ದುರಸ್ಥಿಗೊಳಿಸಬೇಕು ಎಂಬೂದು ಗ್ರಾಮಸ್ಥರ ಬೇಡಿಕೆಯಾಗಿದೆ.