ರಕ್ತ ಸೈನಿಕರ ಊರು ಅಕ್ಕಿಆಲೂರ

blank

ಅಕ್ಕಿಆಲೂರ: ರಕ್ತದಾನ ಮಹಾದಾನ. ರಕ್ತದಾನದಿಂದ ಅಮೂಲ್ಯ ಜೀವ ಉಳಿಸಬಹುದು. ಅಂತಹ ಜೀವ ಉಳಿಸುವ ಪುಣ್ಯದ ಕಾರ್ಯವನ್ನು ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಗ್ರಾಮದ ಯುವಜನರು ಶ್ರದ್ಧೆಯಿಂದ ಮಾಡುತ್ತ ಬಂದು, ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ರಕ್ತದಾನಿಗಳನ್ನು ಹೊಂದಿರುವ ಊರು ಎಂಬ ದಾಖಲೆ ಮಾಡಿದ್ದಾರೆ.

ಸರ್ಚ್ ಎಂಜಿನ್ ಗೂಗಲ್​ನಲ್ಲಿ ‘ಹೋಮ್ ಟೌನ್ ಆಫ್ ಬ್ಲಡ್ ಡೋನರ್ಸ್’ ಎಂದು ಟೈಪ್ ಮಾಡಿದರೆ ಜಗತ್ತಿನಲ್ಲಿ ಅತಿ ಹೆಚ್ಚು ರಕ್ತದಾನಿಗಳನ್ನು ಹೊಂದಿದ ಊರು ಅಕ್ಕಿಆಲೂರ ಎಂದು ತಿಳಿಸುತ್ತದೆ.

ಅಕ್ಕಿಆಲೂರ ಗ್ರಾಮವೊಂದರಲ್ಲಿಯೇ 1200ಕ್ಕೂ ಹೆಚ್ಚು ರಕ್ತದಾನಿಗಳಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಪಟ್ಟಣದ ಯುವಕರು ರಕ್ತದಾನ ಮಾಡುತ್ತಾರೆ. ಅಲ್ಲದೆ, 6700 ಮಕ್ಕಳು ತಾವೂ ಭವಿಷ್ಯದಲ್ಲಿ ರಕ್ತದಾನ ಮಾಡುವುದಾಗಿ ಸ್ಥಳೀಯ ಪೊಲೀಸ್ ಪೇದೆ ಕರಬಸಪ್ಪ ಗೊಂದಿ ಅವರ ನೇತೃತ್ವದ ಸ್ನೇಹಮೈತ್ರಿ ಬ್ಲಡ್ ಆರ್ವಿುಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಭಾವಿ ರಕ್ತ ಸೈನಿಕರಾಗಲು ಪ್ರತಿಜ್ಞೆ ಮಾಡಿದ್ದಾರೆ.

ರಾಜ್ಯದಲ್ಲಿ ಎಲ್ಲಿಯೇ ಅಪಘಾತ ಸಂತ್ರಸ್ತರು, ಗರ್ಭಿಣಿಯರು, ಕ್ಯಾನ್ಸರ್ ರೋಗಿಗಳು… ಹೀಗೆ ಯಾರಿಗೇ ರಕ್ತ ಅಗತ್ಯವಿದ್ದರೂ ಅಕ್ಕಿ ಆಲೂರಿನವರು ತೆರಳಿ ರಕ್ತ ನೀಡುತ್ತಾರೆ. ಇಲ್ಲಿನ ಯುವಕರು 173 ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದುವರೆಗೂ 7170 ಯೂನಿಟ್ ರಕ್ತವನ್ನು ಅಕ್ಕಿಆಲೂರು ಗ್ರಾಮದ ಜನರು ದಾನ ಮಾಡಿದ್ದಾರೆ.

2015ರಲ್ಲಿ ಪೊಲೀಸ್ ಪೇದೆ ಕರಬಸಪ್ಪ ಗೊಂದಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಸ್ನೇಹಮೈತ್ರಿ ಬ್ಲಡ್ ಆರ್ವಿು ಮೂಲಕ ಅಕ್ಕಿಆಲೂರಿನಲ್ಲಿ ಯಾವುದೇ ಸಾಮಾಜಿಕ, ಕೌಟುಂಬಿಕ ಸಮಾರಂಭಗಳಿದ್ದರೂ ರಕ್ತದಾನ ಶಿಬಿರ ಆಯೋಜಿಸುತ್ತಾರೆ. ರಕ್ತದಾನಿಗಳ ವ್ಯಾಟ್ಸ್​ಆಪ್ ಗ್ರುಪ್​ನಲ್ಲಿ ರಕ್ತದ ಬೇಡಿಕೆ ಬಂದರೆ ತಕ್ಷಣ ದೌಡಾಯಿಸುತ್ತಾರೆ.

ಹಾನಗಲ್ಲ ಹಾವೇರಿ ಬಸ್​ಅನ್ನು ರಕ್ತದಾನಿ ರಥವಾಗಿ ಪರಿವರ್ತಿಸಿ, ರಕ್ತದಾನದ ಮಾಹಿತಿ, ಉಪಯೋಗ, ರಕ್ತದ ಗುಂಪು, ಯಾರು ರಕ್ತ ನೀಡಬಹುದು ಎಂಬಿತ್ಯಾದಿ ಮಾಹಿತಿಯನ್ನು ಅಳವಡಿಸಲಾಗಿದೆ. ದಾವಣಗೆರೆ ಹಿಮೋಫಿಲಿಯಾ ಸೊಸೈಟಿ ಸಹಯೋಗದೊಂದಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕದ ಮೊದಲ ಥಲಸೇಮಿಯಾ ಹಿಮೋಫಿಲಿಯಾ ರೋಗಿಗಳ ಉಚಿತ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ. 100 ಬಾರಿ ರಕ್ತದಾನ ಮಾಡಿದ ಕರಬಸಪ್ಪ ಗೊಂದಿ ಹಾವೇರಿ ಜಿಲ್ಲೆಯ ಮೊದಲ ಶತಕದ ರಕ್ತದಾನಿ ಎನಿಸಿಕೊಂಡಿದ್ದಾರೆ.

ನೇತ್ರ, ಕೇಶ ದಾನಕ್ಕೂ ಸೈ:

ಪಟ್ಟಣದಲ್ಲಿ ಇದುವರೆಗೂ ನಿಧನರಾದ 27 ಜನರ ಕಣ್ಣುಗಳನ್ನು ಅಂಧರಿಗೆ ನೀಡಿದ ಶ್ರೇಷ್ಠತೆ ಅಕ್ಕಿಆಲೂರಿಗೆ ಸಲ್ಲುತ್ತದೆ. ಅಲ್ಲದೆ, 4 ಜನರ ನಿಧನ ನಂತರ ಅವರ ಕುಟುಂಬದವರು ದೇಹದಾನ ಮಾಡಿದ್ದಾರೆ. 19 ಯುವಕ-ಯುವತಿಯರು ಪ್ರತಿ ಮೂರು ತಿಂಗಳಿಗೊಮ್ಮೆ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುತ್ತಿದ್ದಾರೆ!

ನಾಮಫಲಕ ಅಳವಡಿಕೆಗೆ ಒತ್ತಾಯ

ರಕ್ತದಾನಕ್ಕೆ ದೊಡ್ಡ ಹೆಸರು ಮಾಡಿರುವ ಅಕ್ಕಿಆಲೂರಿಗೆ ಆಗಮಿಸುವ ಎಲ್ಲ ಹೆದ್ದಾರಿಯಲ್ಲಿ ಜಗತ್ತಿನ ಮೊದಲ ರಕ್ತ ಸೈನಿಕರ ಊರಿಗೆ ಸ್ವಾಗತ ಎಂಬ ನಾಮಫಲಕ ಅಳವಡಿಸಬೇಕು ಎನ್ನುವುದು ಇಲ್ಲಿಯ ಜನರ ಬಹುದಿನದ ಬೇಡಿಕೆಯಾಗಿದೆ. ಸರ್ಕಾರ ಕೊಡಲೇ ಇದರ ಬಗ್ಗೆ ಗಮನ ಹರಿಸಿದರೆ, ಮತ್ತಿಷ್ಟು ಜನರಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಸಮಾರಂಭ ಇಂದು

ವಿಶ್ವ ರಕ್ತದಾನ ದಿನಾಚರಣೆ ಪ್ರಯುಕ್ತ ಪಟ್ಟಣದ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ. 15ರಂದು ರಕ್ತದಾನ ಕ್ರಾಂತಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಉದ್ಘಾಟಿಸುವರು. ಪ್ರಾಚಾರ್ಯ ಡಾ. ವೀರೇಶ ಕುಮ್ಮೂರ ಅಧ್ಯಕ್ಷತೆ ವಹಿಸುವರು. ಎಸ್ಪಿ ಲಕ್ಷ್ಮಣ ಶಿರೋಳ ವಿಡಿಯೋ ಬಿಡುಗಡೆ ಮಾಡುವರು. ಆರೋಗ್ಯ ಇಲಾಖೆಯ ಅನೇಕರು ಭಾಗಿಯಾಗಲಿದ್ದಾರೆ.

ಸಮಾಜ ಸೇವೆ, ಪರೋಪಕಾರವೇ ಅಕ್ಕಿಆಲೂರ ಮಂದಿ ಜೀವನ ಪದ್ಧತಿ. ಯಾರ್ಯಾರೋ ಯಾವುದಕ್ಕೋ ಸಾಧನೆ ಮಾಡಿದರೆ, ಅಕ್ಕಿಆಲೂರ ರಕ್ತದಾನಕ್ಕಾಗಿ ದೇಶ-ವಿದೇಶದ ಗಮನ ಸೆಳೆದಿದೆ. ಯಾರೇ ನಿಧನ ಹೊಂದಿರರೂ ಅವರ ಮನೆಗೆ ತೆರಳಿ, ಕಣ್ಣುಗಳನ್ನು ಮಣ್ಣಾಗಿಸದೆ, ನೇತ್ರದಾನ ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ರಕ್ತದಾನಕ್ಕಾಗಿಯೇ ಜಗತ್ತಿನ ಗಮನ ಸೆಳೆದಿದೆ ಎಂದರೆ ಅದು ಅಕ್ಕಿಆಲೂರ ಮಾತ್ರ. ಇದು ಎಲ್ಲ ಗ್ರಾಮಗಳಿಗೂ ಆದರ್ಶ.

| ಗುರುಮಹೇಶ್ವರ ಶಿವಾಚಾರ್ಯ, ಶ್ರೀ ಗುರು ನಂಜುಂಡೇಶ್ವರ ಮಠ, ಕೂಡಲ

Share This Article

ಬೇಯಿಸಿದ ಮತ್ತು ಹಸಿ ಬೀಟ್ರೂಟ್: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಗೊತ್ತಾ? Beetroots

Beetroots: ಬೀಟ್‌ರೂಟ್‌ಗಳನ್ನು ಹಸಿಯಾಗಿ ಅಥವಾ ಕುದಿಸಿ ಸೇವಿಸುವ ಅತ್ಯುತ್ತಮ ಮಾರ್ಗವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.…

ನೀವು ರಾತ್ರಿಯಲ್ಲಿ ಪದೇ ಪದೇ ನೀರು ಕುಡಿಯುತ್ತಿದ್ದೀರಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿವೆ.. ನಿರ್ಲಕ್ಷಿಸಬೇಡಿ Drinking Water

Drinking Water : ಮಾನವನ ಆರೋಗ್ಯಕ್ಕೆ ನೀರು ಅತ್ಯಗತ್ಯ. ಆದರೆ, ನಾವು ಅದನ್ನು ಯಾವಾಗ ಕುಡಿಯುತ್ತೇವೆ…