ಈ ಸ್ವಾವಲಂಬಿ ಮಹಿಳೆಯರಿಗೆ ಶ್ರಮವೇ ಬಂಡವಾಳ…

ಬದುಕು ನಾವಂದುಕೊಂಡಂತೆ ಅಲ್ಲ. ಹಲವಾರು ಅನಿರೀಕ್ಷಿತ ಕಷ್ಟಗಳು ಬಂದೆರಗುವುದು ಸಹಜ. ಹಾಗೆಯೇ, ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿ ಬದುಕು ಗೆದ್ದವರು ಸಾಕಷ್ಟು ಮಂದಿ. ಬಳ್ಳಾರಿ ಜಿಲ್ಲೆಯ ಬಹಳಷ್ಟು ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಹೆಗಲು ಕೊಟ್ಟು ಜೀವನಕ್ಕೆ ತಮ್ಮದೇ ಅರ್ಥ ಕಲ್ಪಿಸಿದ್ದಾರೆ. ಕೆಲವರ ಬದುಕಿನ ಯಶೋಗಾಥೆ ಇಲ್ಲಿದೆ.

ಏನು ಮಾಡಿದರೂ ನೆಮ್ಮದಿಯಿಂದ ಉಣ್ಣುವಷ್ಟು ಗಳಿಕೆ ಮಾಡಲು ಸಾಧ್ಯವಿಲ್ಲ ಎನ್ನುವ ಹತಾಶೆ ಈ ಮಹಿಳೆಯರ ಉತ್ಸಾಹವನ್ನು ಕಬಳಿಸಿತ್ತು. ಆದರೆ, ಅವೆಲ್ಲವನ್ನೂ ಎದುರಿಸಿ ಈಗ ಬ್ಯೂಟಿಪಾರ್ಲರ್, ರೊಟ್ಟಿ ಯಂತ್ರ, ಮಂಡಾಳ ಮಾರಾಟ…ಹೀಗೆ ಚಿಕ್ಕಪುಟ್ಟವೆಂದು ಅನಿಸುವ ಆದರೆ, ಬೆನ್ನುಲುಬಿನಂತೆ ಬದುಕಿಗೆ ದೃಢವಾದ ಆಧಾರ ನೀಡಿದ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಈ ಮಹಿಳೆಯರೆಲ್ಲ ಈಗ ಸ್ವಾವಲಂಬಿಗಳಾಗಿದ್ದಾರೆ. ಇದು ಬಳ್ಳಾರಿ ಜಿಲ್ಲೆಯ ಹಲವು ಮಹಿಳೆಯರ ಯಶೋಗಾಥೆ. ಜೀವನದಲ್ಲಿ ಧುತ್ತೆಂದು ಎದುರಾದ ಕಷ್ಟಗಳನ್ನು ಚಾಕಚಕ್ಯತೆಯಿಂದ ಎದುರಿಸಿದ ಇವರೆಲ್ಲ ಈಗ ನೆಮ್ಮದಿಯ ಬದುಕಿನತ್ತ ಮುಖ ಮಾಡಿದ್ದಾರೆ.

‘ಇನ್ನೇನು, ಜೀವನ ಮುಗಿದು ಹೋಯಿತಪ್ಪ, ಗಂಡ ತೀರಿಹೋದ ಮುಂದಿನ ಜೀವನ ಹೇಗೆ? ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? ಕಷ್ಟಕಾಲಕ್ಕೆ ಯಾರೂ ಸಹಾಯಕ್ಕೆ ಬರುತ್ತಿಲ್ಲ. ಮೂರು ಒಪ್ಪತ್ತಿನ ಊಟಕ್ಕೆ ಏನು ಮಾಡುವುದು..’ ಎಂದೆಲ್ಲ ಒಂದು ಕಾಲದಲ್ಲಿ ಚಿಂತಿಸಿದವರಿಂದು ನಗರ, ಗ್ರಾಮೀಣ ಭಾಗಗಳಲ್ಲಿ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗಿದ್ದಾರೆ. ಜೀವನವೂ ಸರಳವಾಗಿ, ನೆಮ್ಮದಿಯಿಂದ ಸಾಗುತ್ತಿದೆ. ಹೀಗೆ ಇವರೆಲ್ಲರಿಗೆ ಆಧಾರವಾಗಿದ್ದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ. ಸ್ವ-ಸಹಾಯ ಸಂಘ ಸ್ಥಾಪನೆ ಮಾಡಿ ಸಾಲ ಸೌಲಭ್ಯ ನೀಡಿ, ಸ್ವಾವಲಂಬಿ ಬದುಕು ಸಾಗಿಸಲು ಆಸರೆಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು, ತಾಲೂಕಿನಲ್ಲಿ 3250 ಹಾಗೂ ನಗರದಲ್ಲಿ 1600 ಸ್ವಸಹಾಯ ಸಂಘಗಳಿವೆ. ಈ ಎಲ್ಲ ಸಂಘಗಳಲ್ಲಿರುವ ಬಹುತೇಕ ಸದಸ್ಯರ ಬದುಕು ಒಂದಿಲ್ಲೊಂದು ರೀತಿಯಲ್ಲಿ ರೋಚಕ. ಬಳ್ಳಾರಿಯ ಲಾಲಾ ಕಮಾನ್ ಏರಿಯಾದ ಅನು ಎಂಬ ಮಹಿಳೆ ಜೀನ್ಸ್ ಫ್ಯಾಕ್ಟರಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಏಕಾಏಕಿ ಜೀನ್ಸ್ ಫ್ಯಾಕ್ಟರಿ ಬಂದಾಯಿತು. ಅದೇ ಸಮಯಕ್ಕೆ, ಮನೆಯ ಜವಾಬ್ದಾರಿಯ ನೊಗ ಹೊತ್ತಿದ್ದ ಪತಿ ಅನಾರೋಗ್ಯ ಹಿನ್ನಲೆಯಲ್ಲಿ ಮೃತಪಟ್ಟ. ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆ ಇವರನ್ನು ಕಾಡಲಾರಂಭಿಸಿತು. ಧೃತಿಗೆಡದೆ ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸಾಲ ಪಡೆದು ಟೇಲರಿಂಗ್ ಹಾಗೂ ಬ್ಯೂಟಿ ಪಾರ್ಲರ್ ಆರಂಭಿಸಿ ಈಗ ಆರು 6 ವರ್ಷಗಳಾಗಿವೆ. ದಿನಕ್ಕೆ ಇದೀಗ ಸಾವಿರದ ಲೆಕ್ಕದಲ್ಲಿ ಸಂಪಾದಿಸುತ್ತಿದ್ದಾರೆ. ವಾಣಿ ಎಂಬುವರು ಹಲವು ಸಂಕಷ್ಟದಲ್ಲಿ ಜೀವನ ಕಳೆದು ನಂತರ ಬಟಾಣಿ ಪ್ಯಾಕಿಂಗ್ ಮಷಿನ್ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಪುಷ್ಪಾವತಿ ಎಂಬುವರು ಹಾಲಿನ ವ್ಯಾಪಾರ ಮಾಡುತ್ತಾರೆ. ನಾಗಮಣಿ ಟೇಲರಿಂಗ್, ಸುಧಾ ಜೀನ್ಸ್ ಪ್ಯಾಂಟ್ ಟೇಲರಿಂಗ್ ಮಾಡುತ್ತಿದ್ದಾರೆ.

ಗಂಗೂ, ಎಚ್. ವನಜಾಕ್ಷಿ ಸೋಲಾರ್ ಅಳವಡಿಸಿಕೊಂಡು ಅದರ ಮೂಲಕ ರೊಟ್ಟಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಒಂದು ಹಂತದಲ್ಲಿ ನೆಲೆ ನಿಂತಿರುವ ಮಹಿಳೆಯರ ಪಟ್ಟಿ ಹನುಮಂತನ ಬಾಲ ಬೆಳೆದಂತೆ ಬೆಳೆಯುತ್ತಿದೆ.

ಕಷ್ಟಕಾಲದಲ್ಲಿ ಕೈ ಹಿಡಿದ ಚುರುಮುರಿ ಮಾರಾಟ: ಈ ವೃದ್ಧೆಗೆ ಇದೀಗ 60ರ ಹರೆಯ. ಆದರೂ ಮಾಡುವ ಕಾಯಕದಲ್ಲಿ ಉತ್ಸಾಹ ಕುಗ್ಗಿಲ್ಲ. ಬೆಳಗ್ಗೆ ಮತ್ತು ಸಂಜೆ ವಿವಿಧ ಪ್ರದೇಶಗಳಿಗೆ ತೆರಳಿ ಮಂಡಳ(ಚುರುಮುರಿ)ಮಾರಿ ಬರುತ್ತಾರೆ. 12ನೇ ವಯಸ್ಸಿಗೆ ಮದುವೆಯಾಗಿರುವ ತಾಲೂರು ರಸ್ತೆಯಲ್ಲಿರುವ 60 ವರ್ಷದ ಗಂಗಮ್ಮ ಎಂಬಾಕೆಯ ಕಥೆಯಿದು. ಕಳೆದ 18 ವರ್ಷಗಳಿಂದ ಆಕೆ ಈ ಕಾರ್ಯ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ 120 ರೂ.ವ್ಯಾಪಾರವಾಗುತ್ತಿದ್ದರೆ ಈಗ ದಿನಕ್ಕೆ 400ರಿಂದ 500ರೂ ವ್ಯಾಪಾರವಾಗುತ್ತಿದೆ. ಮೂವರು ಮಕ್ಕಳಿದ್ದಾರೆ. ಪತಿ ತೀರಿದ ಬಳಿಕ ಜೀವನವೇ ಮುಗಿದು ಹೋಯಿತು ಎಂದುಕೊಳ್ಳದೆ ಧರ್ಮಸ್ಥಳ ಸಂಸ್ಥೆಯಲ್ಲಿ ಸಾಲ ಪಡೆದು ಮಂಡಳ ಮಾರುವ ಕಾಯಕವನ್ನು ಶ್ರದ್ಧೆಯಿಂದ ಮಾಡಿರುವುದರಿಂದ ಮಕ್ಕಳೊಂದಿಗೆ ಈಗ ನೆಮ್ಮದಿಯ ಜೀವನ ಕಳೆಯುತ್ತಿದ್ದಾರೆ. ಮಕ್ಕಳು ದೊಡ್ಡವರಾಗಿ ವಿವಿಧೆಡೆ ಕೆಲಸ ಮಾಡುತ್ತಿದ್ದರೂ ಕಷ್ಟಕಾಲದಲ್ಲಿ ಕೈ ಹಿಡಿದ ಮಂಡಳ ಮಾರುವ ಕಾಯಕ ಜೀವ ಇರುವವರೆಗೂ ಬಿಡುವುದಿಲ್ಲ ಎನ್ನುತ್ತಿದ್ದಾಳೆ ಗಂಗಮ್ಮ.

ಕಷ್ಟದಲ್ಲಿರುವ ಹಲವು ಮಹಿಳೆಯರು ಸಂಸ್ಥೆಯಲ್ಲಿ ಸಾಲ ಪಡೆದು ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಕೃಷಿ, ಟೇಲರಿಂಗ್, ಬ್ಯೂಟಿ ಪಾರ್ಲರ್, ರೊಟ್ಟಿ ವ್ಯಾಪಾರ ಸೇರಿದಂತೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಬಳ್ಳಾರಿ ತಾಲೂಕು ಧರ್ಮಸ್ಥಳ ಸಂಸ್ಥೆಯ ಕೃಷಿ ಅಧಿಕಾರಿ ಶಂಕ್ರಯ್ಯ ಹಿರೇಮಠ.

ಬ್ಯಾಂಕನ್ನೇ ಮೀರಿಸುತ್ತೆ ಇವರ ವಹಿವಾಟು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪನೆ ಮಾಡಿರುವ ಒಂದು ಸ್ವಸಹಾಯ ಸಂಘದಲ್ಲಿ 12 ಜನ ಮಹಿಳಾ ಸದಸ್ಯರಿದ್ದಾರೆ. ವಾರಕ್ಕೆ 10 ರೂ. ಕಟ್ಟುವ ಮೂಲಕ ಹಣ ಸಂಗ್ರಹಣೆ ಮಾಡುತ್ತಾರೆ. ಯಾರಿಗೆ ಸಂಕಷ್ಟವಿದೆಯೋ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುತ್ತಾರೆ. ಈ ರೀತಿ ಬಳ್ಳಾರಿ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಸ್ವಸಹಾಯ ಸಂಘಗಳಿವೆ. ಒಂದು ಸ್ವಸಹಾಯ ಸಂಘದ ವಾರ್ಷಿಕ ವಹಿವಾಟು 1ಲಕ್ಷ ರೂ.ಗಿಂತ ಹೆಚ್ಚು ನಡೆಯುತ್ತೆ. ಅದರಂತೆ 20 ಸಾವಿರ ಸ್ವಸಹಾಯ ಗುಂಪಿನ ಲೆಕ್ಕ ಹಾಕಿದಾಗ ವರ್ಷದಲ್ಲಿ ಸಾಮಾನ್ಯ ಗ್ರಾಮೀಣ ಬ್ಯಾಂಕ್ ಶಾಖೆಯೊಂದು ಮಾಡದಷ್ಟು 200 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಈ ಗುಂಪುಗಳಲ್ಲಿ ನಡೆಯುತ್ತದೆ.

|ಶ್ರೀಕಾಂತ ಅಕ್ಕಿ ಬಳ್ಳಾರಿ

Leave a Reply

Your email address will not be published. Required fields are marked *