More

    ಕಾಲ ಹೊಸದು, ಕದನವೂ ಹೊಸದು, ತಂತ್ರ ಮಾತ್ರ ಅದೇ!

    ಕಾಲ ಹೊಸದು, ಕದನವೂ ಹೊಸದು, ತಂತ್ರ ಮಾತ್ರ ಅದೇ!ಪಾಕಿಸ್ತಾನಿ, ಚೀನೀ ಸೇನೆಗಳು ಮಾಡಿದ್ದಂತೆ ಕೂಲಿ ಸೈನಿಕರನ್ನು ಬಳಸಿ ಕೈ ಕೆಸರು ಮಾಡಿಕೊಳ್ಳದೇ ಬಾಯಿ ಮೊಸರು ಮಾಡಿಕೊಳ್ಳುವ ತಂತ್ರವನ್ನು ಕಾಲು ಶತಮಾನದ ಹಿಂದೆ ಅಮೆರಿಕಾ ರಹಸ್ಯವಾಗಿ ತೆಗೆದುಕೊಂಡಿತೆಂದು ಧಾರಾಳವಾಗಿ ಹೇಳಬಹುದು. ಇದಕ್ಕೆ ಸಾಕ್ಷಿ ಆ ದಿನಗಳಲ್ಲಿ ನಾಯಿಕೊಡೆಗಳಂತೆ ಎದ್ದ ಡಜನ್​ಗಟ್ಟಲೆ ಕೂಲಿ ಸೇನೆಗಳು. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಬ್ಲಾಕ್ ವಾಟರ್ಸ್.

    ಇತಿಹಾಸ ಮರುಕಳಿಸುತ್ತದೆ!
    ಕೂಲಿ ಸೇನೆಗಳ ವಿಷಯದಲ್ಲೂ ಜಗತ್ತಿನ ಗಮನ ಸೆಳೆಯುವಷ್ಟು ದೊಡ್ಡದಾಗಿ ಹೀಗಾಗಲು ಆರಂಭವಾದದ್ದು1990ರ ದಶಕದಲ್ಲಿ. ಹಾಗೆ ನೋಡಿದರೆ 20ನೇ ಶತಮಾನದಲ್ಲಿ ಇದು ಇರಲಿಲ್ಲವೆಂದಲ್ಲ. ಕೆಲವು ದೇಶಗಳು ನೆರೆನಾಡಿನ ನೆಲ ಕಬಳಿಸಲು ಕೂಲಿ ಸೈನಿಕರ ಮೊರೆ ಹೋದದ್ದುಂಟು. ನಮ್ಮ ವಿರುದ್ಧವೇ ಅಂತಹ ಪ್ರಕರಣವೊಂದು ಘಟಿಸಿಹೋದದ್ದುಂಟು. ಪಾಕಿಸ್ತಾನ ಅಕ್ಟೋಬರ್ 22, 1947ರ ರಾತ್ರಿ ಕಾಶ್ಮೀರದ ಮೇಲೆ ದಾಳಿಯೆಸಗಿದ್ದೇ ಕೂಲಿ ಸೇನೆ ಬಳಸಿಕೊಂಡಿತು. ಗಡಿನಾಡು ಪ್ರಾಂತ್ಯದ ಯುದ್ಧಕೋರ ಬುಡಕಟ್ಟುಗಳ ಅಂದಾಜು ಐದು ಸಾವಿರ ಮುಸ್ಲಿಮರನ್ನು ಒಟ್ಟುಗೂಡಿಸಿ ಮೇಜರ್ ಜನರಲ್ ಅಕ್ಬರ್ ಖಾನ್ ಕಾಶ್ಮೀರದ ಮೇಲೆ ದಾಳಿಯೆಸಗಿದ್ದೇ ಆ ಜನರಿಗೆ ಹಣ ಹಾಗೂ ಹೆಣ್ಣುಗಳ ಆಮಿಷವೊಡ್ಡುವ ಮೂಲಕ. ‘ಕಾಶ್ಮೀರದ ಮುಸ್ಲಿಂ ಸಹೋದರರನ್ನು ಕಾಫಿರ ಅರಸನ ಕಪಿಮುಷ್ಟಿಯಿಂದ ಕಾಪಾಡಲು ನೀವೆಲ್ಲರೂ ಶ್ರಮಿಸಬೇಕು’ ಎಂಬ ಕರೆಯೊಂದಿಗೆ ಮೊದಲಿಗೆ ಅವರನ್ನೆಲ್ಲಾ ಕಲೆಹಾಕಿದರೂ, ಮುಝಾಫರಾಬಾದ್​ನತ್ತ ಮುಖ ಮಾಡಿ ನಿಂತ ಆ ಕೂಲಿ ಸೈನಿಕರಿಗೆ ಅಕ್ಬರ್​ಖಾನ್ ಹೇಳಿದ್ದು ಹೀಗೆ: ‘ಶ್ರೀನಗರ ತಲುಪುವವರೆಗೆ ಎಲ್ಲೂ ನಿಲ್ಲಬೇಡಿ. ರಾಜಧಾನಿ ತಲುಪಿ ಅಲ್ಲಿ ಪಾಕಿಸ್ತಾನಿ ಧ್ವಜ ಹಾರಿಸಿದ ಮೇಲೆ ಕಾಶ್ಮೀರದ ನೆಲ ಪಾಕಿಸ್ತಾನಕ್ಕೆ, ಅಲ್ಲಿನ ಸಂಪತ್ತು ಮತ್ತು ಹೆಣ್ಣುಗಳು ನಿಮಗೆ’.

    ನಂತರ ನಡೆದದ್ದೂ ಕೂಲಿ ಸೈನಿಕರು ಇತಿಹಾಸದುದ್ದಕ್ಕೂ ಆಗಾಗ ಪ್ರದರ್ಶಿಸಿದ್ದ ಅವಿಧೇಯತೆಯೇ. ಪಾಕ್ ಕೂಲಿ ಸೈನಿಕರು ಶ್ರೀನಗರ ತಲುಪುವ ಮೊದಲೇ ಬಾರಾಮುಲ್ಲಾದಲ್ಲೇ ಲೂಟಿ ಮತ್ತು ಅತ್ಯಾಚಾರಗಳನ್ನು ಆರಂಭಿಸಿಬಿಟ್ಟರು. ಶ್ರೀನಗರದ ಮೇಲೆ ಪಾಕಿಸ್ತಾನಿ ಧ್ವಜ ಹಾರುವುದು ಹೀಗೆ ತಪ್ಪಿಹೋಯಿತು. ಕೆಲಸ ಕೆಟ್ಟಿತು ಎಂದರಿತ ಪಾಕ್ ಸೇನೆ ಸಣ್ಣ ಪ್ರಮಾಣದಲ್ಲಿ ತನ್ನ ಸೈನಿಕರನ್ನು ಕಾರ್ಯಾಚರಣೆಗೆ ಕಳುಹಿಸಿ, ಅದೂ ವಿಫಲವಾಗುವಂತೆ ಕಂಡಾಗ ಮಾರ್ಚ್ 1948ರಲ್ಲಿ ನೇರವಾಗಿ ಕದನಕ್ಕೆ ಕಾಲಿಟ್ಟಿತು. ಇಂತಹದೇ ಪ್ರಕರಣ ಒಂದೂವರೆ ವರ್ಷದ ನಂತರ ನಂತರ ಚೀನಾದಲ್ಲಿ ಘಟಿಸಿತು. ಅಕ್ಟೋಬರ್ 1, 1949ರಂದು ಪೀಕಿಂಗ್​ನಲ್ಲಿ ತಮ್ಮ ಸರ್ಕಾರವನ್ನು ಸ್ಥಾಪಿಸಿದ ಕಮ್ಯುನಿಸ್ಟರು ವಿಶಾಲ ಸಿಂಕಿಯಾಂಗ್ ಕಬಳಿಸಲು ಮೊದಲಿಗೆ ಕೂಲಿ ಸೈನಿಕರನ್ನೇ ಬಳಸಿದರು. ಆಮೇಲೆ ಆ ಉಯ್ಘರ್ ನಾಡಿನ ನೇತಾರರೆಲ್ಲರನ್ನೂ ಒಟ್ಟಿಗೇ ‘ವಿಮಾನಾಫಘಾತ’ದ ಮೂಲಕ ಹತೈಗೈದು ತಮ್ಮ ವಿರುದ್ಧದ ದನಿಯನ್ನೇ ಪೂರ್ಣವಾಗಿ ಅಡಗಿಸಿದ ನಂತರ ಸೇನೆಯನ್ನೇ ಕಳುಹಿಸಿ ಸಿಂಕಿಯಾಂಗ್ ಆಕ್ರಮಿಸಿಕೊಂಡರು. ಆಮೇಲೆ ಚೀನಾ ಎಲ್ಲ ಕಾರ್ಯಾಚರಣೆಗಳಿಗೂ ತನ್ನ ಅಧಿಕೃತ ಪೀಪಲ್ಸ್ ಲಿಬರೇಶನ್ ಆರ್ವಿುಯನ್ನೇ ಕಳುಹಿಸತೊಡಗಿತು.

    ಹೀಗೆ ಸಣ್ಣ ರಾಷ್ಟ್ರಗಳು ತಮ್ಮ ನೆಲದಾಹಕ್ಕಾಗಿ ಕೂಲಿ ಸೈನಿಕರನ್ನು ಸೀಮಿತವಾಗಿ ಬಳಸುವುದು ಅಲ್ಲಲ್ಲಿ ನಡೆದರೂ ಬೃಹತ್ ರಾಷ್ಟ್ರಗಳು ಅಂದರೆ ಅಮೆರಿಕಾ, ಸೋವಿಯೆತ್ ಯೂನಿಯನ್ ಮತ್ತವುಗಳ ಯೂರೋಪಿಯನ್ ಸಹಯೋಗಿಗಳು ಕೂಲಿ ಸೈನಿಕರ ಬಳಕೆಗೆ ತೊಡಗಲಿಲ್ಲ. ಮಹಾಶಕ್ತಿಗಳಾದ ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್​ಗಳೆರಡೂ ಅಣ್ವಸ್ತ್ರಗಳನ್ನು ರಾಶಿ ಹಾಕಿಟ್ಟುಕೊಂಡಿದ್ದರಿಂದಾಗಿ ತಮ್ಮ ನಡುವಿನ ನೇರ ಘರ್ಷಣೆಯಲ್ಲಿ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಸಹಜವಾಗಿಯೇ ಅರಿತಿದ್ದವು. ಅದರಿಂದಾಗಿಯೇ ಅವು ನೇರ ಕಾದಾಟದ ಸನ್ನಿವೇಶಗಳು ಎದುರಾದಾಗಲೂ ಹಿಂದೆ ಸರಿದುಬಿಡುವ ವಿವೇಕವನ್ನು ಪ್ರದರ್ಶಿಸಿಬಿಡುತ್ತಿದ್ದವು. ಆದರೆ, ಕೈ ತುರಿಸುವಿಕೆ ಶಮನಗೊಳಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ಅವು ಹುಡುಕಿಕೊಂಡ ವಿಧಾನ ಅಲ್ಲಿ ಇಲ್ಲಿ ಒಳಸಂಚು ಮತ್ತು ಬೇಹುಗಾರಿಕಾ ಕಳ್ಳಾಟಗಳ ಮೂಲಕ ಸಣ್ಣಪುಟ್ಟ ದೇಶಗಳಲ್ಲಿ ತಮ್ಮ ಪರವಾದ ಸರ್ಕಾರ ಸ್ಥಾಪಿಸಿ ತಮ್ಮ ಪ್ರಭಾವ ವಲಯಗಳನ್ನು ವಿಸ್ತರಿಸಿಕೊಳ್ಳುವುದು. ಅಂದರೆ, ಸಣ್ಣ ದೇಶಗಳನ್ನು ಪರಸ್ಪರರರ ವಿರುದ್ಧ ದಾಳಗಳಾಗಿ ಬಳಸುವುದು. ಇಂತಹ ಸಂದರ್ಭಗಳಲ್ಲಿ ಪ್ರಭಾವ ಕಳೆದುಕೊಂಡು, ಅದು ತನಗಾದ ಹಿನ್ನಡೆ ಎಂದು ಕನಲಿ ಕ್ರೋಧಗೊಂಡ ಬೃಹತ್ ರಾಷ್ಟ್ರ ನೇರವಾಗಿ ತನ್ನ ಸೇನೆಯನ್ನೇ ಎದುರಾಳಿಯ ಕಾಲಾಳಾದ ಸಣ್ಣ ದೇಶದ ವಿರುದ್ಧ ಬಳಸುತ್ತಿತ್ತು ಮತ್ತು ಹಾಗೆ ಮಾಡುವುದು ತನ್ನ ಹಕ್ಕು, ಹಿತಾಸಕ್ತಿಗೆ ಅಗತ್ಯ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿತ್ತು. ತನ್ನ ಸಂಚನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗದ ಪ್ರತಿಸ್ಪರ್ಧಿ ಬೃಹತ್ ರಾಷ್ಟ್ರಕ್ಕೆ ಆಗ ಕೈ ಕೈ ಹಿಸುಕಿಕೊಳ್ಳದೇ ಬೇರೆ ದಾರಿಯೇ ಇರುತ್ತಿರಲಿಲ್ಲ. ನೇರವಾಗಿ ತನ್ನ ಸೇನೆಯನ್ನೂ ಕಳಿಸಿ ಮೂರನೆಯ ಮಹಾಯುದ್ಧಕ್ಕೆ ನಾಂದಿ ಹಾಡುವುದಕ್ಕೆ ಯಾವ ದೇಶವೂ, ಅದು ಎಷ್ಟೇ ಬಲಶಾಲಿಯಗಿದ್ದರೂ ತಯಾರಿರುತ್ತಿರಲಿಲ್ಲ. ಅಣ್ವಸ್ತ್ರ ಯುದ್ಧದಲ್ಲಿ ವಿಜಯಿಗಳು ಇರುವುದಿಲ್ಲ ಎಂದು ವಿಜ್ಞಾನಿಗಳು ಮತ್ತು ವಿದ್ವಾಂಸರು ಬಾಯಿ ಬಡಿದುಕೊಂಡದ್ದನ್ನು ರಾಜಕಾರಣಿಗಳು ನಂಬಿದ್ದು ನಮ್ಮ ಪುಣ್ಯ. ಹೀಗಾಗಿ ಮೊದಲಿಗೆ ಒಳಸಂಚು ಹೂಡಿದ ದೇಶ ತನ್ನ ಪರವಾದ ಸಣ್ಣ ದೇಶಕ್ಕೆ ಅಥವಾ ತನ್ನ ಪರವಾದ ಅಲ್ಲಿನವರಿಗೆ ತುಂಡುಗೋವಿ ತುಪಾಕಿ ಮದ್ದು ಗುಂಡು ಒದಗಿಸಿ ವಿರೋಧಿ ಬೃಹತ್ ರಾಷ್ಟ್ರ ತನ್ನ ಒಂದಷ್ಟು ಸಹಸ್ರ ಸೈನಿಕರನ್ನೂ, ಒಂದಷ್ಟು ಬಿಲಿಯನ್ ಡಾಲರ್​ಗಳನ್ನೂ ಕಳೆದುಕೊಳ್ಳುವಂತೆ ಮಾಡುವುದರ ಹೊರತಾಗಿ ಅದಕ್ಕೆ ಬೇರಾವ ಮಾರ್ಗವೂ ಇರುತ್ತಿರಲಿಲ್ಲ. 1950-53ರ ಕೊರಿಯಾ ಯುದ್ಧ, 1965-73ರ ವಿಯೆಟ್ನಾಂ ಯುದ್ಧ, 1980-88ರ ಅಫ್ಘನ್ ಯುದ್ಧಗಳು ವರ್ಷಾನುಗಟ್ಟಲೆ ನಡೆದದ್ದು ಹೀಗೆ.

    ಬೃಹತ್ ರಾಷ್ಟ್ರದ ಪ್ರಭಾವದೊಳಗೇ ಇರುವ ಸಣ್ಣ ರಾಷ್ಟ್ರವೊಂದು ತನ್ನದೇ ನಾಯಕ ರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳಹೊರಟ ಪ್ರಸಂಗಗಳೂ, ಅಂತಹ ಸನ್ನಿವೇಶಗಳಲ್ಲಿ ‘ಹಾನಿಗೊಳಗಾದ’ ಬೃಹತ್ ರಾಷ್ಟ್ರ ತನ್ನ ಪ್ರತಿಸ್ಪರ್ಧಿ ಬೃಹತ್ ರಾಷ್ಟ್ರದ ಯಾವುದೇ ಬಗೆಯ ಮಧ್ಯಪ್ರವೇಶದ ಭಯವೂ ಇಲ್ಲದೇ ಹದ್ದುಮೀರ ಹೊರಟ ಸಣ್ಣ ರಾಷ್ಟ್ರದ ವಿರುದ್ಧ ಯಾವ ಹಿಂಜರಿಕೆಯೂ ಇಲ್ಲದೇ ನೇರವಾಗಿ ತನ್ನ ಅಧಿಕೃತ ಸೇನೆಯನ್ನೇ ಕಳುಹಿಸಿ ಕೆಲಸ ಸಾಧಿಸಿಕೊಂಡದ್ದೂ ಒಂದಕ್ಕಿಂತ ಹೆಚ್ಚು ಬಾರಿ ಆಗಿಹೋಗಿದೆ. ಸೋವಿಯೆತ್ ಯೂನಿಯನ್ 1952ರಲ್ಲಿ ಪೂರ್ವ ಜರ್ಮನಿ, 1956ರಲ್ಲಿ ಹಂಗೇರಿ, 1968ರಲ್ಲಿ ಝೆಕೊಸ್ಲೊವೇಕಿಯಾದಲ್ಲಿ ಹಾಗೂ ಅಮೆರಿಕಾ 1983ರಲ್ಲಿ ಗ್ರೆನಡಾದಲ್ಲಿ, 1996ರಲ್ಲಿ ಪನಾಮಾದಲ್ಲಿ ನಡೆಸಿದ ಕಾರ್ಯಾಚರಣೆಗಳು ಕೆಲವು ಉದಾಹರಣೆಗಳಷ್ಟೇ.

    ಆದರೆ, 1990-91ರಲ್ಲಿ ಬೃಹದ್ ರಾಷ್ಟ್ರಗಳ ನಡುವಿನ ಶೀತಲ ಸಮರ ಅಂತ್ಯವಾಗುತ್ತಿದ್ದಂತೆ ಪರಿಸ್ಥಿತಿ ಬದಲಾಗಿಹೋಯಿತು. ಇರಾಕಿ ಆಕ್ರಮಣದಿಂದ ಕುವೈತ್ ಅನ್ನು ವಿಮೋಚನೆಗೊಳಿಸಲು ಅಮೆರಿಕಾ ಮತ್ತದರ ನ್ಯಾಟೋ ಸಹಯೋಗಿಗಳು 1991ರ ಜನವರಿಯಲ್ಲಿ ಕೈಗೊಂಡ ಸೇನಾ ಕಾರ್ಯಾಚರಣೆಯನ್ನು ಮಿಖಾಯಿಲ್ ಗೋರ್ಬಚೆವ್ ನಾಯಕತ್ವದ ಸೋವಿಯೆತ್ ಯೂನಿಯನ್ ಬೆಂಬಲಿಸಿದಾಗ ಕಂಡು ಕೇಳರಿಯದ ಹೊಸ ವಾಸ್ತವಗಳು ನಮ್ಮ ಮುಂದೆ ಅನಾವರಣಗೊಳ್ಳತೊಡಗಿದವು. ಆ ವರ್ಷಾಂತ್ಯದ ಹೊತ್ತಿಗೆ ಪೂರ್ವ ಯೂರೋಪ್​ನಲ್ಲಿ ಕಮ್ಯೂನಿಸಂನ ಪತನ ಮತ್ತು ಸೋವಿಯತ್ ಛಿದ್ರೀಕರಣದಿಂದಾಗಿ ಸೃಷ್ಟಿಯಾದ ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಅಮೆರಿಕಾಗೆ ಪ್ರತಿಸ್ಪರ್ಧಿಯೇ ಉಳಿದಿರಲಿಲ್ಲ. ಅಂದರೆ ಯುದ್ಧ ಮಾಡುವ, ದೂರ ದೇಶಗಳಲ್ಲಿ ಸೇನಾ ಕಾರ್ಯಾಚರಣೆಗಿಳಿಯುವ ಪ್ರಚೋದನೆ ಹಾಗೂ ಅಗತ್ಯ ಅಮೆರಿಕಾಗೆ ಎದುರಾಗಲಿಲ್ಲ ಎಂದು ಅಂದುಕೊಂಡರೆ ನಾವೆಷ್ಟು ಮುಗ್ಧರು ಎಂದು ನಾವು ನಮ್ಮ ಬಗ್ಗೇ ಮರುಕ ಪಡಬೇಕಾಗುತ್ತದೆ.

    ಶೀತಲ ಸಮರ ಅಂತ್ಯವಾಗಿ ತನ್ನ ಪ್ರತಿಸ್ಪರ್ಧಿ ಹಲವು ಅರ್ಥಗಳಲ್ಲಿ ತನ್ನ ಮೇಲೇ ಅವಲಂಬಿತವಾದರೂ, ಅಂದರೆ ‘ಎನ್ನಯ ಸರಿಸಮರಾರೈ?’ ಎಂದು ಬೀಗುವಂತಾದಾಗಲೂ ತಾನು ಹಿಂದೆ ಎಸಗಿದ್ದ ಕೆಲವು ಕುಕೃತ್ಯಗಳು ಅಮೆರಿಕಾವನ್ನು ದುಃಸ್ವಪ್ನದಂತೆ ಕಾಡತೊಡಗಿದವು. ಅವುಗಳಲ್ಲಿ ಮುಖ್ಯವಾದುದು ಇರಾಕ್​ಗೆ

    ಒದಗಿಸಿದ್ದ ರಾಸಾಯನಿಕ ಅಸ್ತ್ರಗಳು ಮತ್ತು ಬಹುಶಃ ಅಣ್ವಸ್ತ್ರ ತಂತ್ರಜ್ಞಾನ. ಅಮೆರಿಕಾವನ್ನು ಮಹಾ ಸೈತಾನ ಎಂದು ಜರೆದ ಇರಾನ್​ನ ಮೂಲಭೂತವಾದಿ ಸರ್ಕಾರವನ್ನು ಅಸ್ಥಿರಗೊಳಿಸಲೆಂದು ಆ ಅಸ್ತ್ರಗಳು ಮತ್ತು ತಂತ್ರಜ್ಞಾನವನ್ನು ಅಮೆರಿಕಾ1980ರ ದಶಕದಲ್ಲಿ ಇರಾಕ್​ಗೆ ನೀಡಿತ್ತು. ಈಗ ಬದಲಾದ ಸನ್ನಿವೇಶದಲ್ಲಿ ಅದೇ ಅಸ್ತ್ರಗಳನ್ನು ಇರಾಕಿ ಅಧ್ಯಕ್ಷ ಸದ್ದಾಂ ಹುಸೇನ್ ಅಮೆರಿಕಾದ ವಿರುದ್ಧವೇ ಬಳಸುವ ಅಥವಾ ಅಲ್-ಖಯೀದಾಗೆ ನೀಡುವ ಅಪಾಯ ಎದುರಾಗಾಗ ಅವೆಲ್ಲವನ್ನೂ ಹುಡುಕಿ ನಾಶಪಡಿಸುವುದು ತನ್ನ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ಅಮೆರಿಕಾ ತೀರ್ವನಿಸಿತು. ಆದರೆ, ಇಲ್ಲಿ ಅದು ಎದುರಿಸಿದ್ದು ಒಂದಕ್ಕಿಂತ ಹೆಚ್ಚು ಇಕ್ಕಟ್ಟುಗಳು. ತನ್ನ ಉದ್ದೇಶವನ್ನು ಜಗತ್ತಿಗೆ ಸಾರಿ ಇರಾಕ್​ಗೆ ಸೇನೆ ಕಳುಹಿಸಿದರೆ ತನ್ನ ಹಿಂದಿನ ಕುಕೃತ್ಯಕ್ಕೆ ಜಾಗತಿಕವಾಗಿ ಛೀಮಾರಿ ಎದುರಿಸಬೇಕಾಗುತ್ತದೆ ಎನ್ನುವುದು ಒಂದು ಚಿಂತೆಯಾದರೆ ಏನೂ ಮಾಡದೇ ಕೂತರೆ ತನಗೇ ಅಪಾಯವೊದಗುವ ಚಿಂತೆ ಇನ್ನೊಂದು ಕಡೆ. ಹೀಗಾಗಿಯೇ, ಇರಾಕ್​ನಲ್ಲಿ ಯಾವುದೇ ಸಮೂಹನಾಶಕ ಶಸ್ತ್ರಾಸ್ತ್ರಗಳು ಇಲ್ಲವೆಂದು ವಿಶ್ವಸಂಸ್ಥೆಯ ನಿಯೋಗವೇ ಹೇಳಿದರೂ ಅಮೆರಿಕಾ ಆ ದೇಶದ ಮೇಲೆ ಮಾರ್ಚ್ 2003ರಲ್ಲಿ ಆಕ್ರಮಣ ಎಸಗಿದ್ದು. ಇರಾಕ್​ನಲ್ಲಿ ಏನಿದೆಯೆಂದು ಅಮೆರಿಕಾಗೆ ಚೆನ್ನಾಗಿಯೇ ಗೊತ್ತಿತ್ತು.

    ಆದರೆ, ಇಲ್ಲಿ ಅಮೆರಿಕಾ ಎದುರಿಸಿದ್ದು ಇನ್ನೊಂದು ಬಗೆಯ ಇಕ್ಕಟ್ಟು. ತಮ್ಮ ಮಕ್ಕಳು ದೂರ ದೇಶದಲ್ಲಿ ಪ್ರಾಣ ತೆರುವುದನ್ನು ವಿಯೆಟ್ನಾಂ ಯುದ್ಧದ ದಿನಗಳಲ್ಲೇ ಅಮೆರಿಕನ್ನರು ಉಗ್ರವಾಗಿ ವಿರೋಧಿಸಿದ್ದರು. ಆ ಕಾರಣದಿಂದಲೇ ಏಶಿಯಾದಲ್ಲಿನ ಮುಂದಿನ ಯುದ್ಧಗಳಲ್ಲಿ ಅಮೆರಿಕಾ ತನ್ನ ಪಾತ್ರವನ್ನು ಶಸ್ತ್ರಾಸ್ತ್ರಗಳ ಪೂರೈಕೆಗಷ್ಟೇ ಸೀಮಿತಗೊಳಿಸುತ್ತದೆ, ರಣರಂಗದಲ್ಲಿ ಸೆಣಸುವುದು ಆಯಾ ದೇಶಗಳ ಸೇನೆಯಷ್ಟೇ ಎಂದು ಅಧ್ಯಕ್ಷ ರಿಚರ್ಡ್ ನಿಕ್ಸನ್ 1969ರಲ್ಲಿ ಘೊಷಿಸುವ ಒತ್ತಡಕ್ಕೊಳಗಾದರು. ಮುಂದಿನ ದಿನಗಳಲ್ಲಿ ಅದು ಜಗತ್ತಿಗೇ ಅನ್ವಯವಾಗುವಂತೆ ಬದಲಾಯಿತು. ಜತೆಗೆ, ಅಮೆರಿಕನ್ ಸೈನಿಕರು ಹೋರಾಡಲೇಬೇಕಾದ ಪರಿಸ್ಥಿತಿ ಒದಗಿದರೆ ಅವರ ಪ್ರಾಣಹಾನಿಯನ್ನು ಸಾಧ್ಯವಾದಷ್ಟು ಸೀಮಿತಗೊಳಿಸುವಂತಹ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಯಿತು. ಇರಾಕ್​ನಲ್ಲಿ ಅಮೆರಿಕಾ ಸೇನಾ ಕಾರ್ಯಾಚರಣೆಯನ್ನು ಆರಂಭಿಸಬೇಕಾದ್ದು ಈ ಹಿನ್ನೆಲೆಯಲ್ಲಿ. ಜತೆಗೆ ಕಾರ್ಯಾಚರಣೆ ಆರಂಭವಾದ ಮೇಲೆ ಎದುರಾದ ಇನ್ನೊಂದು ತೊಡಕೆಂದರೆ ಕಾನೂನುಬಾಹಿರ ಶಸ್ತ್ರಾಸ್ತ್ರಗಳು ಅಥವಾ ತಂತ್ರಜ್ಞಾನಗಳ ಶೋಧನೆ ಮತ್ತು ನಾಶದ ಕಾರ್ಯಗಳು ವಿಯೆನ್ನಾ ಒಪ್ಪಂದ, ಜಿನೀವಾ ಒಪ್ಪಂದ ಮುಂತಾದ ಜಾಗತಿಕ ಒಪ್ಪಂದಗಳಿಗನುಗುಣವಾದ ಯುದ್ಧ ನಿಯಮಗಳು ಮತ್ತು ಮಾನವ ಹಕ್ಕುಗಳ ನಿಯಮಗಳ ಕಟ್ಟುನಿಟ್ಟಾದ ಪಾಲನೆಯಿಂದ ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಅಮೆರಿಕಾಗೆ ಆಯುಧವಾಗಿ ಒದಗಿಬಂದದ್ದು ಕೂಲಿ ಸೇನೆ.

    1991ರ ಕುವೈತ್ ವಿಮೋಚನಾ ಕಾರ್ಯಾಚರಣೆ, 1995ರ ಸರ್ಬಿಯಾ ಮೇಲಿನ ದಾಳಿ ಮುಂತಾದ ಶೀತಲಸಮರೋತ್ತರ ಕಾರ್ಯಾಚರಣೆಗಳ ಹಿಂದೆ ಮತ್ತು ಮುಂದೆ ತನ್ನ ಸೈನಿಕರ ಪ್ರಾಣಹಾನಿಯನ್ನು ಮತ್ತು ನಿಯಮಬಾಹಿರ ಕೃತ್ಯಗಳಲ್ಲಿ ತನ್ನ ಸೈನಿಕರು ತೊಡಗುವ ಒತ್ತಡಗಳನ್ನೂ ಕಡಿಮೆಗೊಳಿಸಲು 1990ರ ದಶಕಗಳಲ್ಲಿ ಹಿರಿಯ ಜಾರ್ಜ್ ಬುಷ್ ಮತ್ತು ಬಿಲ್ ಕ್ಲಿಂಟನ್ ಸರ್ಕಾರಗಳು ತೆಗೆದುಕೊಂಡ ಎಲ್ಲ ನಿರ್ಣಯಗಳ ವಿವರ ಲಭ್ಯವಿಲ್ಲ. ಆದರೂ, ಹಿಂದಿನ ಈಜಿಪ್ಷಿಯನ್ ಫೆರೋಗಳು, ರೋಮನ್ ಚಕ್ರವರ್ತಿಗಳು, ಇಂದಿನ ಪಾಕಿಸ್ತಾನಿ ಮತ್ತು ಚೀನೀ ಸೇನೆಗಳು ಮಾಡಿದ್ದಂತೆ ಕೂಲಿ ಸೈನಿಕರನ್ನು ಬಳಸಿ ಕೈ ಕೆಸರು ಮಾಡಿಕೊಳ್ಳದೇ ಬಾಯಿ ಮೊಸರು ಮಾಡಿಕೊಳ್ಳುವ ತಂತ್ರವನ್ನು ಕಾಲು ಶತಮಾನದ ಹಿಂದೆ ಅಮೆರಿಕಾ ರಹಸ್ಯವಾಗಿ ತೆಗೆದುಕೊಂಡಿತೆಂದು ಧಾರಾಳವಾಗಿ ಹೇಳಬಹುದು. ಇದಕ್ಕೆ ಸಾಕ್ಷಿ ಆ ದಿನಗಳಲ್ಲಿ ನಾಯಿಕೊಡೆಗಳಂತೆ ಎದ್ದ ಡಜನ್​ಗಟ್ಟಲೆ ಕೂಲಿ ಸೇನೆಗಳು. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಬ್ಲಾಕ್ ವಾಟರ್ಸ್.

    1997ರಲ್ಲಿ ಬ್ಲಾ್ಯಕ್ ವಾಟರ್ಸ್ ಕೂಲಿ ಸೇನೆಯನ್ನು ಸ್ಥಾಪಿಸಿದ್ದು ಎರಿಕ್ ಪ್ರಿನ್ಸ್ ಎಂಬಾತ. ಈತ ಅಮೆರಿಕಾದ ನೌಕಾದಳದಲ್ಲಿ ಸೇವೆ ಸಲ್ಲಿಸಿದ್ದಾತ ಎನ್ನುವುದು ಬ್ಲಾ್ಯಕ್ ವಾಟರ್ಸ್ ಕೇವಲ ಜೀವನೋಪಾಯಕ್ಕಾಗಿ ನಿರುದ್ಯೋಗಿಗಳು ಸೃಷ್ಟಿಸಿಕೊಂಡ ಕೂಲಿ ಸೇನೆಯಲ್ಲ ಎಂದು ಹೇಳುತ್ತದೆ. ಮತ್ತೆ, ಅದಕ್ಕೆ ಆ ಹೆಸರು ಬಂದದ್ದಕ್ಕೆ ಕಾರಣ ನಾರ್ತ್ ಕೆರೋಲಿನಾದಲ್ಲಿ ಅದರ ಮುಖ್ಯಾಲಯವಿದ್ದ ಪ್ರದೇಶದಲ್ಲಿನ ಅಂತರ್ಜಲ ತುಸು ಕಪ್ಪು ಬಣ್ಣ ಇರುವುದರಿಂದ. ಕಳೆದೊಂದು ತಿಂಗಳಿಂದೀಚಿಗೆ ಎಲ್ಲರೂ ರಶಿಯಾದ ವ್ಯಾಗ್ನರ್ ಗ್ರೂಪ್​ನ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ, ಬ್ಲಾಕ್ ವಾಟರ್ಸ್ ಇತಿಹಾಸವನ್ನು ಕೆದಕಿದರೆ ಗಾತ್ರ, ಕಾರ್ಯಾಚರಣೆ ಹಾಗೂ ಧನದಂಧೆಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಾಗ್ನರ್ ಗ್ರೂಪ್​ಗಳು ನಮ್ಮೆದುರು ಮೈತೆರೆದುಕೊಳ್ಳುತ್ತವೆ. ಈ ವಿವರಗಳು ಮತ್ತು ವ್ಯಾಗ್ನರ್ ಗ್ರೂಪ್​ನ ಇತಿಹಾಸ ಹಾಗೂ ಅದರ ಭವಿಷ್ಯವೇನು ಎನ್ನುವ ವಿಚಾರಗಳನ್ನು ಮುಂದಿನ ವಾರ ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ ನೋಡೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts