ದೇವದುರ್ಗ: ಬೆಳಗಾವಿಗೆ ತೆರಳಿದ್ದ ಸಾರಿಗೆ ಸಂಸ್ಥೆ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಪುಂಡರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಜಯ ಕರ್ನಾಟಕ ಸಂಘಟನೆ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಬಾಳೆಕುಂದ್ರಿಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕ ಅಲ್ಲಿನ ಪ್ರಯಾಣಿಕರಿಗೆ ಟಿಕೆಟ್ ಪಡೆಯುವಂತೆ ಕೇಳಿದಾಗ ಅಲ್ಲಿನ ಪುಂಡರು ಮರಾಠಿಯಲ್ಲಿ ಮಾತನಾಡಲು ಆಗ್ರಹಿಸಿ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅದೇ ಗ್ರಾಮದಲ್ಲಿ ಜನರನ್ನು ಸೇರಿಸಿ ಬಸ್ ಮೇಲೆ ಮರಾಠಿ ಪದಗಳನ್ನು ಬರೆಯುವ ಜತೆಗೆ ಚಾಲಕ, ನಿರ್ವಾಹಕನ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿ ದುಂಡಾವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಗಡಿಪಾರು ಮಾಡಬೇಕು. ಕನ್ನಡಿಗರ ಮೇಲೆ ಹಲ್ಲೆ ಮಾಡುವ ಪುಂಡರಿಗೆ ಶಿಕ್ಷಿಸಲು ಕಠಿಣ ಕಾನೂನು ಜಾರಿಗೊಳಿಸಬೇಕು. ಹಲ್ಲೆಗೊಳಗಾದ ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಆತ್ಮವಿಶ್ವಾಸ ತುಂಬಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.