ಅರಮನೆಗೆ ಪೊಲೀಸ್ ಸರ್ಪಗಾವಲು

ಮೈಸೂರು: ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ ಇರುವ ಕಾರಣ ಅರಮನೆಯಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿದೆ. ಪ್ರತಿಯೊಬ್ಬರನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಲಗೇಜ್ ತಪಾಸಣೆ ಮಾಡಲು ಮೆಟಲ್ ಡಿಟೆಕ್ಟರ್ ಹಾಗೂ ಲಗೇಜ್ ಸ್ಕ್ಯಾನರ್ ಯಂತ್ರವನ್ನು ಅರಮನೆಯ ವರಹಾ ದ್ವಾರದ ಟಿಕೆಟ್ ಕೌಂಟರ್‌ಬಳಿ ಅಳವಡಿಸಲಾಗಿದೆ.

ಅರಮನೆ ಭದ್ರತೆಗಾಗಿ ಸದಾಕಾಲ ಪೊಲೀಸರು ಇಲ್ಲಿ ಸನ್ನದ್ಧವಾಗಿರುತ್ತಾರೆ. ಪ್ರತ್ಯೇಕ ಎಸಿಪಿ ನೇತೃತ್ವದ ಭದ್ರತಾ ತಂಡವಿದ್ದು, ಈ ತಂಡದಲ್ಲಿ 70 ಜನ ಪೊಲೀಸ್ ಪೇದೆಗಳಿರುತ್ತಾರೆ. ಎಸಿಪಿ, ಇನ್ಸ್‌ಪೆಕ್ಟರ್ ಹಾಗೂ ಎಎಸ್‌ಐ ಒಬ್ಬರು ಒಳಗೊಂಡಿರುತ್ತಾರೆ. ಅರಮನೆಯ ದ್ವಾರಗಳಲ್ಲಿ ದಿನದ 24 ಗಂಟೆ 3 ಶಿಫ್ಟ್‌ಗಳಲ್ಲಿ ಪ್ರತಿ ಗೇಟ್‌ಗೆ ನಾಲ್ಕು ಜನ ಪೇದೆಗಳು, ಇಬ್ಬರು ಹೆಡ್ ಕಾನ್ಸ್‌ಟೆಬಲ್ ಕಾರ್ಯನಿರ್ವಹಿಸುತ್ತಾರೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಬಾಂಬ್ ನಿಷ್ಕ್ರಿಯದಳದವರು ಕಡ್ಡಾಯವಾಗಿ ಪರಿಶೀಲನೆ ಮಾಡುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಅರಮನೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ ನಿಯೋಜನೆಗೆ ಕಳೆದ ವರ್ಷ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ರಾಜವಂಶಸ್ಥರ ವಿರೋಧದಿಂದ ಈ ಪ್ರಸ್ತಾವನೆ ಕೈ ಬಿಡಲಾಗಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *