More

    ಶಾಲಾ ಮಾಸ್ತರನಿಗಿಂತ ಬದುಕೆಂಬ ಶಿಕ್ಷಕನೇ ಭಾರಿ ಖಡಕ್!

    ಶಾಲಾ ಮಾಸ್ತರನಿಗಿಂತ ಬದುಕೆಂಬ ಶಿಕ್ಷಕನೇ ಭಾರಿ ಖಡಕ್!ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮೊದಲು ಪಾಠ ಹೇಳಿ ತದನಂತರ ಪರೀಕ್ಷೆಗಳನ್ನು ನಡೆಸುತ್ತಾರೆ. ಆದರೆ ಬದುಕೆಂಬ ಶಿಕ್ಷಕ ಮೊದಲು ಪರೀಕ್ಷೆ ನಡೆಸಿ, ನಂತರ ಮರೆಯಲಾಗದ ದುಬಾರಿ ಪಾಠವನ್ನು ಹೇಳಿಕೊಡುತ್ತಾನೆ. ಕಾರಣ ಶಾಲಾ ಕಾಲೇಜುಗಳಲ್ಲಿ ಅನುಸರಿಸುವ ಪಠ್ಯಕ್ರಮವೇ ಬೇರೆ; ಜೀವನದಲ್ಲಿ ಅನುಸರಿಸಬೆಕಾದ ಪಠ್ಯಕ್ರಮವೇ ಬೇರೆ. ಜೀವನವೆಂಬ ಪರೀಕ್ಷೆಯಲ್ಲಿ ಎಲ್ಲರಿಗೂ ಒಂದೇ ತೆರನಾದ ಪ್ರಶ್ನೆ ಪತ್ರಿಕೆಗಳು ಇರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆಗಳು. ಅವರವರ ಪ್ರಶ್ನೆಗಳಿಗೆ ಅವರವರೇ ಉತ್ತರಿಸಬೇಕು. ಕಾಪಿ ಹೊಡೆದರೆ ಫೇಲಾಗೋದು ಖಂಡಿತ. ಬದುಕೆಂದರೆ ಬರೀ ಹಾರಾಟವೂ ಅಲ್ಲ; ಹೋರಾಟವೂ ಅಲ್ಲ, ಅದು ಒಂದು ಚದುರಂಗದ ಆಟವಿದ್ದಂತೆ.

    ಆಟವನ್ನು ಗೆಲ್ಲಬೇಕಾದರೆ ಕಾಯಿಗಳನ್ನು ಬರೇ ಹಿಂದಕ್ಕೆ ಮುಂದಕ್ಕೆ ಇಲ್ಲವೇ ಆ ಕಡೆ ಈ ಕಡೆ ಮಾತ್ರವಲ್ಲ. ಎಲ್ಲಾ ಕಡೆ ಚಲಾಯಿಸಬೇಕಾಗುತ್ತದೆ. ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದವರು ಜೀವನವೆಂಬ ಪರೀಕ್ಷೆಯಲ್ಲಿ ಫೇಲಾಗಿದ್ದು ಉಂಟು. ಕಾರಣ ಅಧ್ಯಯನದಿಂದ ಪಡೆದ ಜ್ಞಾನ ಬೇರೆ; ಅನುಭವದಿಂದ ಪಡೆದ ಜ್ಞಾನ ಬೇರೆ. ಮೊದಲನೆಯದು ಪುಸ್ತಕದ ಬದನೆಕಾಯಿ; ಎರಡನೆಯದು ಬಲಿತು ಮಾಗಿದ ಹಣ್ಣು. ಅನುಭವವೆನ್ನುವುದು ಅತ್ಯುತ್ತಮ ಶಿಕ್ಷಕ;

    ಗುರುವಿಗೂ ಗುರು; ಆದರೆ ಶುಲ್ಕ ಮಾತ್ರ ದುಬಾರಿ. ಅನುಭವವೆಂದರೆ ತಡವಾಗಿ ಅರಿತುಕೊಂಡ ತಿಳಿವಳಿಕೆ; ತಲೆ ಬೋಳಾದ ಮೇಲೆ ಸಿಗುವ ಬಾಚಣಿಗೆಯಂತೆ! ಪ್ರಮಾದಗಳು ನಮ್ಮ ಅನುಭವವನ್ನು ಹೆಚ್ಚಿಸುತ್ತವೆ; ಆದರೆ ಅನುಭವಗಳು ಮುಂದೆ ನಡೆಯಬಹುದಾದ ಪ್ರಮಾದಗಳನ್ನು ತಪ್ಪಿಸುತ್ತವೆ. ಪುಸ್ತಕ ಜ್ಞಾನ ಬೇರೆ, ಮಸ್ತಕ ಜ್ಞಾನ ಬೇರೆ. ಈ ಸತ್ಯವನ್ನರಿತೇ ಡಿ.ವಿ.ಜಿ. ಯವರು ಬರೆದರು. ‘ಪುಸ್ತಕದಿ ದೊರೆತರಿವು, ಮಸ್ತಕದಿ ತಳೆದ ಮಣೆ; ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ.’ ಅಂತೆಯೇ ವಿಷಯ ಜ್ಞಾನ ಬೇರೆ; ಸಾಮಾನ್ಯ ಜ್ಞಾನ ಹಾಗೂ ವ್ಯವಹಾರ ಜ್ಞಾನ ಬೇರೆ. ಪಠ್ಯಜ್ಞಾನವೇ ಬೇರೆ. ಪಠ್ಯೇತರ ಜ್ಞಾನವೇ ಬೇರೆ.

    ಕ್ಲಾಸ್ ರೂಮ್ಂದ ಪಡೆದ ಜ್ಞಾನ ಬೇರೆ, ಲೋಕಜ್ಞಾನ ಬೇರೆ, ಥಿಯರಿ ಬೇರೆ ಪ್ರಾಕ್ಟಿಕಾಲಿಟಿ ಹಾಗೂ ಗ್ರೌಂಡ್ ರಿಯಾಲಿಟಿಗಳು ಬೇರೆ. ಈಜುವುದನ್ನು ಕಲಿಯಲು ಹೊರಟವನಿಗೆ ಅವನನ್ನು ನೀರಿನೊಳಗೆ ತಳ್ಳದ ಹೊರತು, ಎಷ್ಟೇ ಪಾಠ-ಪ್ರವಚನಗಳನ್ನು ಹೇಳಿದರೂ ಅದು ನೆರವಾಗದು. ಅಂತೆಯೇ ಜೀವನರಂಗಕ್ಕೆ ಧುಮುಕದ ಹೊರತು, ಬದುಕಿ ಬಾಳುವ ಕಲೆಯನ್ನು ಕರಗತ ಮಾಡಿಕೊಳ್ಳಲಾಗದು. ಓರ್ವ ನ್ಯಾಯವಾದಿ ಕುಟುಂಬದೊಳಗಿನ ವ್ಯಾಜ್ಯಗಳನ್ನು ಗೆಲ್ಲಿಸಿಕೊಡಬಹುದು. ಆದರೆ ಸಂಸಾರವಂದಿಗರ ಮನಸ್ಸನ್ನು ಹೇಗೆ ಗೆಲ್ಲಬೇಕೆಂಬುದನ್ನು ಹೇಳಿಕೊಡಲಾರ. ಸಂಸಾರದಲ್ಲಿ ಸೋತು ಗೆಲ್ಲಬೇಕು; ಗೆದ್ದು ಸೋಲಬಾರದು. ಒಬ್ಬ ಬಿಸಿನೆಸ್ ಮ್ಯಾನೇಜ್​ವೆುಂಟ್ ಪ್ರಾಧ್ಯಾಪಕ ಹಣವಂತನಾಗೋದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಾನೆ; ಆದರೆ ಗುಣವಂತನಾಗೋದು ಹೇಗೆ ಎಂಬುದನ್ನು ತಿಳಿಹೇಳಲಾರ. ಸಿವಿಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಮನೆಗಳನ್ನು ಹೇಗೆ ಕಟ್ಟಬೇಕೆಂಬುದನ್ನು ಹೇಳಿಕೊಡುತ್ತಾನೆ;

    ಆದರೆ ಮನೆ ನಡೆಸುವುದು ಹೇಗೆ ಎಂಬುನ್ನು ತಿಳಿ ಹೇಳಲಾರ. ಮನೆಗಳ ಕಟ್ಟಲು ಇಡಬೇಕು ಇಟ್ಟಿಗೆಗಳ ಒಟ್ಟಿಗೆ; ಆದರೆ ಮನೆಗಳ ನಡೆಸಲು ಇರಬೇಕು ಮನಗಳು ಒಟ್ಟಿಗೆ. ಓರ್ವ ವೈದ್ಯ ನಮಗಾಗಿ ಬದುಕುವುದು ಹೇಗೆ ಎಂಬುದನ್ನು ತಿಳಿ ಹೇಳುತ್ತಾನೆ; ಆದರೆ ಇತರರಿಗಾಗಿಯು ಬದುಕುವುದು ಹೇಗೆ ಎಂಬುದನ್ನು ತಿಳಿಹೇಳಲಾರ. ಲಗ್ನದ ವೇಳೆ ಪುರೋಹಿತರು ವಧೂವರರನ್ನು ಗಂಡ – ಹೆಂಡತಿ ಎಂದು ಘೊಷಿಸಿ ಬಿಡುತ್ತಾರೆ. ಆದರೆ ಬಾಳಸಂಗಾತಿಗಳಾಗುವುದು ಹೇಗೆ ಎಂಬುದನ್ನು ತಿಳಿಸಿಕೊಡುವುದಿಲ್ಲ. ಲಗ್ನದ ವೇಳೆ ಒಬ್ಬರಿನ್ನೊಬ್ಬರ ಕೈ ಹಿಡಿದವರು ಗಂಡಹೆಂಡತಿ; ಆದರೆ ಲಗ್ನದ ನಂತರವೂ ಜೀವನ ಪರ್ಯಂತ ಒಬ್ಬರಿನ್ನೊಬ್ಬರ ಕೈ ಬಿಡದವರು, ಕೈ ಕೊಡದವರು ಬಾಳ ಸಂಗಾತಿಗಳು.

    ಒಟ್ಟಿನಲ್ಲಿ ಏಳು-ಬೀಳು ಗೋಳುಗಳ ನಡುವೆ ಬಾಳುವುದೇ ಬದುಕುವ ಕಲೆ, ಈ ಕಲೆ ಬದುಕು ಎಂಬ ಶಿಕ್ಷಕನಿಂದ ಪ್ರಾಪ್ತವಾಗಬೇಕೇ ಹೊರತು, ಉಪದೇಶ ಉಪನ್ಯಾಸಗಳಿಂದ ಅಲ್ಲ. ಇದು ಬೆಂಕಿ, ಮುಟ್ಟಬೇಡ ಎಂದು ತಾಯಿ ಹೇಳಿದ ಮೇಲೂ, ಅದನ್ನು ಮುಟ್ಟಿ ಕೈ ಸುಟ್ಟುಕೊಂಡ ಅನುಭವವೇ ಮಗುವಿಗೆ ಗುರು. ಬದುಕು ಪಾಠದ ಜೊತೆ ಎಂದೂ ಮರೆಯದ ಏಟನ್ನು ಕೊಟ್ಟು ಕಲಿತ ಪಾಠವನ್ನು ಎಂದೂ ಮರೆಯದಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸರ್ವಶಕ್ತ ಶಿಕ್ಷಕನಾದ ಈ ಬದುಕಿಗೂ ಧನ್ಯವಾದ, ಒಂದು ದೊಡ್ಡ ನಮಸ್ಕಾರ.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts