ಬಾಯಲ್ಲಿ ಇಟ್ಟರೆ ಕರಗುವಷ್ಟು ಮೃದು, ರುಚಿಯಂತೂ ಆಹಾ… ಧಾರವಾಡ ಪೇಡಾಕ್ಕೆ ಸರಿಸಾಟಿ ಉಂಟೆ? ಯಾವುದೇ ಒಳ್ಳೆಯ ಸಮಾಚಾರ ತಿಳಿಸುವಾಗ ‘ತಗೋಳ್ರೀ, ಮೊದಲು ಪೇಡಾ ತಗೊಂಡು ಬಾಯಿ ಸಿಹಿ ಮಾಡ್ರಿ, ಛಲೋ ಸುದ್ದಿ ಅದ’ ಎಂದೇ ಸಂಭ್ರಮಾಚರಣೆ ಶುರುವಾಗುವಷ್ಟು ಸಾಂಪ್ರದಾಯಿಕ ಬಂಧವೂ ಇದಕ್ಕಿದೆ. ಪರೀಕ್ಷೆಯಲ್ಲಿ ಪಾಸಾದರೆ, ನೌಕರಿ ಸಿಕ್ಕರೆ, ಮದುವೆ ನಿಶ್ಚಯವಾದರೆ ಹೀಗೆ ಎಲ್ಲ ಸಿಹಿ ಸಮಾಚಾರಗಳಿಗೂ ಧಾರವಾಡ ಪೇಡಾನೇ ಆಗಬೇಕು. ಧಾರವಾಡದ ಸಣ್ಣ ಗಲ್ಲಿಯಿಂದ ಆರಂಭವಾದ ಇದರ ಪಯಣ ಈಗ ಸಪ್ತಸಾಗರಗಳನ್ನು ದಾಟಿ ವಿದೇಶಕ್ಕೂ ತಲುಪಿದೆ. ಹಾಲಿನಿಂದ ತಯಾರಿಸುವ ಪದಾರ್ಥಗಳ ಪೈಕಿ ಹೆಚ್ಚು ಕಾಲ ಬಾಳಿಕೆ ಬರುವುದರಿಂದ ಧಾರವಾಡ ಪೇಡಾ ಜಿಐ ಟ್ಯಾಗ್ ಪಡೆದುಕೊಂಡಿದೆ. ಹೊರಗಿನ ವಾತಾವರಣದಲ್ಲಿ ಐದಾರು ದಿನಗಳ ಕಾಲ ಈ ಪೇಡಾ ಕೆಡದೆ, ಚೆನ್ನಾಗಿರುತ್ತದೆ. ಸ್ಥಳೀಯ ಜನರಿಗೆ ಕೆಲಸ ನೀಡುವ ಉದ್ಯಮವಾಗಿ, ಮಳಿಗೆ ಆರಂಭಿಸುವವರಿಗೆ ಸ್ವಾವಲಂಬನೆಯ ಶಕ್ತಿಯಾಗಿ ಧಾರವಾಡ ಪೇಡಾ ಪೊರೆಯುತ್ತಿದೆ.
ದೀರ್ಘ ಇತಿಹಾಸ: ಉತ್ತರ ಪ್ರದೇಶದ ಉನ್ನಾವೊದಲ್ಲಿ 19ನೇ ಶತಮಾನದ ಆರಂಭದಲ್ಲಿ ಪ್ಲೇಗ್ ಉಲ್ಬಣಗೊಂಡ ನಂತರ ಧಾರವಾಡಕ್ಕೆ ವಲಸೆ ಬಂದ ಠಾಕೂರ್ ಕುಟುಂಬ ಈ ಪೇಡಾವನ್ನು ತಯಾರಿಸಿ, ಮಾರಾಟ ಮಾಡಲು ಪ್ರಾರಂಭಿಸಿತು. ಮೊದಲ ತಲೆಮಾರಿನ ಮಿಠಾಯಿ ವ್ಯಾಪಾರಿ ರಾಮ್ ರತನ್ ಸಿಂಗ್ ಠಾಕೂರ್ ಅವರು ಸ್ಥಳೀಯವಾಗಿ ಪೇಡಾಗಳನ್ನು ಉತ್ಪಾದಿಸಿ ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ನಂತರ ಇದೇ ಕುಟುಂಬ ಈ ವ್ಯಾಪಾರವನ್ನು ವಿಸ್ತರಿಸಿಕೊಂಡು ಬಂದಿದೆ. ಅವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಧಾರವಾಡದ ಲೈನ್ ಬಜಾರ್ ಅಂಗಡಿಯಲ್ಲಿ ಕುಟುಂಬದ ವ್ಯವಹಾರವನ್ನು ಮತ್ತಷ್ಟು ಬೆಳೆಸಿದರು. ಈಗ ಇದೇ ಕುಟುಂಬದ 6ನೇ ತಲೆಮಾರು ಈ ಉದ್ಯಮವನ್ನು ನಡೆಸುತ್ತಿದೆ. ಮಿಶ್ರಾ ಕುಟುಂಬದ ಪೇಡಾ ಉದ್ಯಮ ಕೂಡ ಸಾಕಷ್ಟು ವಿಸ್ತಾರ ಕಂಡಿದೆ. ಹೀಗೆ ಧಾರವಾಡದಲ್ಲಿ 177 ವರ್ಷಗಳ ಹಿಂದೆ ಪುಟ್ಟದಾಗಿ ಆರಂಭಗೊಂಡ ಸಿಹಿ ಮಾರಾಟ, ಈಗ ದೊಡ್ಡ ಉದ್ಯಮದ ಸ್ವರೂಪ ತಳೆದಿರುವುದು, ಸ್ಥಳೀಯ ಉತ್ಪನ್ನಗಳ ಶಕ್ತಿಗೆ ಸಾಕ್ಷಿ. ಇಷ್ಟು ವರ್ಷವಾಗಿದ್ದರೂ ಧಾರವಾಡ ಪೇಡಾದ ಗುಣಮಟ್ಟ ಮತ್ತು ರುಚಿ ಬದಲಾಗಿಲ್ಲ. ಹಾಗಾಗಿಯೇ, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ, ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ.
ಬ್ರಿಟಿಷರಿಂದ ಗೌರವ: ಧಾರವಾಡ ಕೈಗಾರಿಕಾ ಪ್ರದರ್ಶನದಲ್ಲಿ ಪೇಡಾ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ (1913ರ ನವೆಂಬರ್ 17) ಆಗಿನ ಬಾಂಬೆ ಗವರ್ನರ್ ಎಚ್.ಇ ಲಾರ್ಡ್ ವಿಲ್ಲಿಂಗ್ಡನ್ ಅವರು ಬಾಬು ಸಿಂಗ್ ಠಾಕೂರ್ ಅವರಿಗೆ ಬೆಳ್ಳಿ ಪದಕ, ಪ್ರಮಾಣಪತ್ರ ನೀಡಿ ಗೌರವಿಸಿದ್ದರು. ಇದಲ್ಲದೆ, ಧಾರವಾಡ ಪೇಡಾಕ್ಕೆ ರಾಜೀವ್ ಗಾಂಧಿ ಶ್ರೇಷ್ಠ ಪ್ರಶಸ್ತಿ, ಪ್ರಿಯದರ್ಶಿನಿ ಇಂದಿರಾ ಗಾಂಧಿ ಪ್ರಶಸ್ತಿ ಮೊದಲಾದ ಮನ್ನಣೆ ಸಿಕ್ಕಿದೆ.
ರುಚಿಗೆ ಮನಸೋಲದವರಿಲ್ಲ…: ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾದ ಧಾರವಾಡ ಪೇಡಾವನ್ನು ಶುದ್ಧ ತುಪ್ಪ, ಖೋವಾ ಮತ್ತು ಸಕ್ಕರೆ ಬಳಸಿ ತಯಾರಿಸಲಾಗುತ್ತದೆ. ಧಾರವಾಡದ ಸ್ಥಳೀಯ ಪ್ರದೇಶಗಳಿಂದ ಸಂಗ್ರಹಿಸಿದ ಹಾಲನ್ನು ಬಳಸಿ ಖೋವಾವನ್ನು ತಯಾರಿಸಲಾಗುತ್ತದೆ. ಅಲ್ಲದೆ, ಹಾಲು, ಸಕ್ಕರೆಯ ಮಿಶ್ರಣವನ್ನು ಒಲೆಯಲ್ಲಿ ಕಾಯಿಸುವುದರಿಂದ ರುಚಿ ಹೆಚ್ಚು. ಇದನ್ನು ಸಿದ್ಧಪಡಿಸಲು, ಅಂದರೆ ಹಾಲು-ಸಕ್ಕರೆಯ ಮಿಶ್ರಣವನ್ನು ಪೇಡಾವಾಗಿಸಲು ಸರಾಸರಿ ನಾಲ್ಕರಿಂದ ಆರು ಗಂಟೆ ಬೇಕಾಗುತ್ತದೆ.
ವೈಶಿಷ್ಟ್ಯಗಳು
- ಸಿಹಿತಿನಿಸಿನ ಉದ್ಯಮದಲ್ಲಿ ಉತ್ಕೃಷ್ಟತೆ ಪಡೆದುಕೊಂಡಿರುವ ಧಾರವಾಡ ಪೇಡಾ ಕಳೆದ ವರ್ಷದ (2023) ದಸರಾ ಮತ್ತು ದೀಪಾವಳಿ ಹಬ್ಬದ ಋತುವಿನಲ್ಲಿ ದಾಖಲೆಯ 25 ಟನ್ನಷ್ಟು (25 ಸಾವಿರ ಕೆಜಿ) ಮಾರಾಟವಾಯಿತು. 2022ರಲ್ಲಿ 20 ಟನ್ ಮಾರಾಟವಾಗಿತ್ತು.
- ಪ್ರಸ್ತುತ ಪ್ರತಿದಿನ ಸರಾಸರಿ 9-10 ಸಾವಿರ ಕೆಜಿ ಧಾರವಾಡ ಪೇಡಾ ರಾಜ್ಯಾದ್ಯಂತ ಮಾರಾಟವಾಗುತ್ತಿದೆ.
- ಧಾರವಾಡ-ಹುಬ್ಬಳ್ಳಿ ಮಾತ್ರವಲ್ಲ ಬೆಂಗಳೂರು, ಬೆಳಗಾವಿಯಲ್ಲೂ ದೊಡ್ಡ ಮಳಿಗೆಗಳು ಎಲೆ ಎತ್ತಿದ್ದು, ಫ್ರಾಂಚೈಸಿ ಅಂಗಡಿಗಳ ಸಂಖ್ಯೆ ಸಾವಿರದ ಗಡಿ ದಾಟಿದೆ.
- ಹೈದರಾಬಾದ್, ಕೋಲ್ಕತ, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಪ್ರಮುಖ 150 ನಗರಗಳಲ್ಲಿ ಧಾರವಾಡ ಪೇಡಾ ಮಾರಾಟವಾಗುತ್ತದೆ. ಪ್ರಮುಖ ರೈಲು ಹಾಗೂ ಬಸ್ ನಿಲ್ದಾಣಗಳಲ್ಲೂ ಲಭ್ಯ.
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ