ಶೃಂಗೇರಿ ಕ್ಷೇತ್ರ ಶಾಸಕರಿಂದ ಬರೀ ಸುಳ್ಳು ಭರವಸೆ

ಶೃಂಗೇರಿ: ಅಕ್ರಮ- ಸಕ್ರಮ ಸಮಿತಿ ರಚನೆಗೊಂಡಿಲ್ಲ. ಸ್ಥಿರೀಕರಣಗೊಂಡ ಫಾರಂ 50, 53ರಡಿ ಕೃಷಿಕರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ ಶಾಸಕರ ವಿರುದ್ಧ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಸಂತೆ ಮಾರ್ಕೆಟ್ ಬಳಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್, ಸಚಿವ ಎಚ್.ಡಿ.ರೇವಣ್ಣ ಅವರು ಶೃಂಗೇರಿ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ. ಹಾಲಿ ಶಾಸಕರು ಸರ್ಕಾರದಿಂದ ತಾನು ಹಣ ತಂದು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಜೆಡಿಎಸ್ ಏಕೆ ಮೌನವಹಿಸಿದೆ? ಎಂದು ಪ್ರಶ್ನಿಸಿದರು.

ಪಪಂ ಅಧ್ಯಕ್ಷ ಹಾಗೂ ಸದಸ್ಯರ ಗಮನಕ್ಕೆ ಬಾರದೆ ಪಪಂ ವ್ಯಾಪ್ತಿಯಲ್ಲಿ ಗುದ್ದಲಿ ಪೂಜೆ ನಡೆಸುವ ಶಾಸಕರ ದ್ವೇಷದ ರಾಜಕಾರಣ ಎಲ್ಲೇ ಮೀರುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಸಲ್ಲದು. ಹಾಗೆಯೇ ಅಧಿಕಾರಿಗಳಿಗೂ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಸ್ವಾರ್ಥ ಚಿಂತನೆಗಳಿಂದ ಸಮಾಜದ ಕಟ್ಟಕಡೆಯ ಜನರನ್ನು ಹಾದಿತಪ್ಪಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.

ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಮಕ್ಕಳ ಓದಿಗೆ ಹಾಗೂ ತೋಟಕ್ಕೆ ನೀರು ಪೂರೈಕೆಗೆ ವಿದ್ಯುತ್ ವ್ಯತ್ಯಯದಿಂದ ತೊಂದರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ರೈತರ ಮನೆ ಪಕ್ಕದಲ್ಲೇ ಟ್ರಂಚ್ ಹೊಡೆದು ಅಧಿಕಾರದ ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹುಲಿ ಯೋಜನೆಗೆ ಒಳಪಡುವ ಪ್ರದೇಶದ ನಿವಾಸಿಗಳು ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದು ಅವರಿಗೆ ಸೂಕ್ತ ಪರಿಹಾರ ದೊರಕಿಲ್ಲ. 94ಸಿ ಹಾಗೂ 94ಸಿಸಿ ಯೋಜನೆಯಡಿ ಮನೆ ನಿರ್ವಿುಸಿಕೊಂಡವರ ಸ್ಥಿತಿ ಅತಂತ್ರವಾಗಿದೆ. ಶಾಸಕ ರಾಜೇಗೌಡ ಗುದ್ದಲಿ ಪೂಜೆ ಬದಿಗಿಟ್ಟು ಜನಸಾಮಾನ್ಯರ ಸಮಸ್ಯೆ ಅರ್ಥೈಸಿಕೊಳ್ಳಬೇಕು ಎಂದು ಆಗ್ರಹಿಸಿದರು.