ರಾಜ್ಯಸಭಾ ಪ್ರತ್ಯೇಕ ಉಪಚುನಾವಣೆ ವಿರೋಧಿಸಿ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಗುಜರಾತ್​ನಲ್ಲಿ ತೆರವಾದ ರಾಜ್ಯ ಸಭಾ ಎರಡು ಸ್ಥಾನಗಳಿಗೆ ಪ್ರತ್ಯೇಕ ಉಪಚುನಾವಣೆ ನಡೆಸಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್​ಗೆ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ.

ಗುಜರಾತ್​ನಲ್ಲಿ ಅಮಿತ್​ ಷಾ ಹಾಗೂ ಸ್ಮೃತಿ ಇರಾನಿ ಇಬ್ಬರೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಪುಟ ಸಚಿವರಾಗಿದ್ದಾರೆ. ಅದೆರಡು ಸೀಟುಗಳು ಈಗ ಖಾಲಿ ಇರುವುದರಿಂದ ಅಲ್ಲಿ ಪ್ರತ್ಯೇಕ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಜು.5ರಂದು ದಿನಾಂಕ ನಿಗದಿಪಡಿಸಿದೆ.
ಆದರೆ ಇದು ನಿಯಮಕ್ಕೆ ವಿರೋಧ ಎಂದು ಕಾಂಗ್ರೆಸ್​ನ ವಾದ. ಪ್ರತ್ಯೇಕ ಚುನಾವಣೆ ನಡೆಸುವ ಬದಲು ಒಟ್ಟಾಗಿ ಉಪಚುನಾವಣೆ ನಡೆಸುವಂತೆ ಆಗಬೇಕು ಎಂದು ಸುಪ್ರೀಂಕೋರ್ಟ್​ಗೆ ಗುಜರಾತ್​ ವಿಧಾನಸಭೆಯ ಕಾಂಗ್ರೆಸ್​ ನಾಯಕ, ಶಾಸಕ ಪರೇಶ್​ಭಾಯ್ ಧನಾನಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ತಿರಸ್ಕರಿಸಿದ ಕೋರ್ಟ್​, ಚುನಾವಣಾ ಆಯೋಗದಿಂದ ಒಂದು ಬಾರಿ ಸೂಚನೆ ಬಂದಮೇಲೆ ಅದರಲ್ಲಿ ಸುಪ್ರೀಂಕೋರ್ಟ್​ ಹಸ್ತಕ್ಷೇಪ ಮಾಡಲು ಸಾಧ್ಯವೇ ಇಲ್ಲ. ಅರ್ಜಿದಾರರು ಬೇಕಾದರೆ ಚುನಾವಣಾ ಅರ್ಜಿಯನ್ನು ಆಯೋಗಕ್ಕೆ ಸಲ್ಲಿಸಬಹುದು. ಅಷ್ಟಕ್ಕೂ ಇದರಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಏನಾಗಿದೆ ಎಂದು ನ್ಯಾಯಾಧೀಶರಾದ ​ಸಂಜೀವ್​ ಖನ್ನಾ ಮತ್ತು ಬಿಆರ್​. ಗವೈ ಪ್ರಶ್ನಿಸಿದ್ದಾರೆ.

ಹಾಗೇ ಕಾಂಗ್ರೆಸ್​ನ ಮನವಿಯನ್ನು ಚುನಾವಣಾ ಆಯೋಗ ಕೂಡ ತಿರಸ್ಕರಿಸಿದೆ.