ಶಾರದಾ ಚಿಟ್​ಫಂಡ್​ ಕೇಸ್​: ಮಾಜಿ ಪೊಲೀಸ್​ ಕಮಿಷನರ್​ ಬಂಧನಕ್ಕೆ ನೀಡಿದ್ದ ಮಧ್ಯಂತರ ರಕ್ಷಣೆ ವಾಪಸ್​ ಪಡೆದ ಸುಪ್ರೀಂ

ಕೋಲ್ಕತ: ಪಶ್ಚಿಮ ಬಂಗಾಳದ ಶಾರದಾ ಚಿಟ್​ಫಂಡ್​ ಹಗರಣ ಪ್ರಕರಣದಲ್ಲಿ ಕೋಲ್ಕತ ಮಾಜಿ ಪೊಲೀಸ್​ ಕಮಿಷನರ್​ ರಾಜೀವ್​ ಕುಮಾರ್​ ಅವರಿಗೆ ಸಿಬಿಐ ಬಂಧನದಿಂದ ನೀಡಿದ್ದ ಮಧ್ಯಂತರ ರಕ್ಷಣೆ ಆದೇಶವನ್ನು ಸುಪ್ರೀಂಕೋರ್ಟ್​ ಹಿಂಪಡೆದಿದೆ.

ಅಲ್ಲದೆ, ಸೂಕ್ತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ರಾಜೀವ್​ ಕುಮಾರ್​ ಅವರಿಗೆ ಏಳು ದಿನಗಳ ಕಾಲಾವಕಾಶ ನೀಡಿದೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಫೆ.5ರಂದು ರಾಜೀವ್​ಕುಮಾರ್​ ಬಂಧನಕ್ಕೆ ತಡೆಯಾಜ್ಞೆ ನೀಡಿತ್ತು. ಈಗ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್​ ನೇತೃತ್ವದ ಪೀಠ ಆ ಮಧ್ಯಂತರ ರಕ್ಷಣೆಯನ್ನು ವಾಪಸ್​ ಪಡೆದಿದೆ. ಜತೆಗೆ ಇನ್ನು ಏಳುದಿನಗಳಲ್ಲಿ ರಾಜೀವ್​ ಕುಮಾರ್​ಗೆ ಸೂಕ್ತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ಸಾಧ್ಯವಾಗದೆ ಇದ್ದಲ್ಲಿ ಅವರನ್ನು ಸಿಬಿಐ ಬಂಧಿಸಬಹುದು ಎಂದು ಆದೇಶ ನೀಡಿದೆ.

ಶಾರದಾ ಚಿಟ್​ ಫಂಡ್ ಹಗರಣದಲ್ಲಿ ರಾಜೀವ್​ ಕುಮಾರ್​ ಪಾತ್ರದ ಬಗ್ಗೆ ಸಾಕ್ಷಿ ನೀಡುವಂತೆ ಆದೇಶಿಸಿದ್ದ ಸುಪ್ರೀಂಕೋರ್ಟ್​ಗೆ 15 ದಿನಗಳ ಹಿಂದೆ ಸಿಬಿಐ ಮುಚ್ಚಿದ ಕವರ್​ನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಮೂರು ದಾಖಲೆಗಳನ್ನು ನೀಡಿತ್ತು. ಲೋಕಸಭೆ ಚುನಾವಣೆಯ ಕೊನೇ ಹಂತಕ್ಕೆ ಇನ್ನೆರಡು ದಿನ ಬಾಕಿ ಇರುವಾಗ ಈ ಚಿಟ್​ಫಂಡ್​ ಕೇಸ್​ ವಿಚಾರಣೆ ನಡೆಸಿ, ಆ ದಾಖಲೆಗಳನ್ನೆಲ್ಲ ಪರಿಶೀಲಿಸಿದ ನ್ಯಾಯಾಲಯ, ರಾಜೀವ್ ಕುಮಾರ್​ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆ ವಾಪಸ್​ ಪಡೆದಿದೆ.

ಪಶ್ಚಿಮಬಂಗಾಳ ಚಿಟ್​ಫಂಡ್​ ಹಗರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ 2013ರಲ್ಲಿ ರಚಿಸಿದ್ದ ತನಿಖಾ ಆಯೋಗವನ್ನು ಪೊಲೀಸ್​ ಕಮೀಷನರ್ ರಾಜೀವ್​ಕುಮಾರ್​ ಮುನ್ನಡೆಸಿದ್ದರು. ಆದರೆ ಕೇಸ್​ನ ಪ್ರಮುಖ ದಾಖಲೆ, ಕಡತಗಳ ನಾಪತ್ತೆಯಲ್ಲಿ ರಾಜೀವ್​ಕುಮಾರ್​ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ವಶಕ್ಕೆ ಪಡೆದಿತ್ತು.

Leave a Reply

Your email address will not be published. Required fields are marked *