ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಇಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದ್ದರೆ, ಕೆಪಿಸಿಸಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಇದ್ದರು.
ಮುಕುಲ್ ರೊಹಟಗಿ ವಾದ ಮಂಡನೆ ಮಾಡಿದ ಬಳಿಕ ಕಪಿಲ್ ಸಿಬಲ್ ಪ್ರತಿವಾದ ಮಾಡಿ ಕಾಲಾವಕಾಶ ಕೇಳಿದರು. ಅಲ್ಲದೆ, ಮಧ್ಯಂತರವಾಗಿ ಯಾವುದೇ ತಡೆ ನೀಡಬೇಡಿ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ತ್ರಿಸದಸ್ಯ ಪೀಠ, ಬುಧವಾರ ಮುಕುಲ್ ರೊಹಟಗಿ ವಾದ ಮಂಡಿಸಲಿ. ಗುರುವಾರ ಕೆಪಿಸಿಸಿ ಪರ ಕಪಿಲ್ ಸಿಬಲ್ ಪ್ರತಿವಾದ ಮಾಡಲಿ ಎಂದು ಹೇಳಿದೆ.
ಮೊದಲು ವಾದ ಮಂಡಿಸಿದ ಅನರ್ಹ ಪರ ವಕೀಲ ಮುಕುಲ್ ರೋಹಟಗಿ, ಶಾಸಕರ ರಾಜೀನಾಮೆ ವಿಚಾರದಲ್ಲಿ ಅಂದಿನ ಸ್ಪೀಕರ್ ಅವರು ನ್ಯಾಯಬದ್ಧವಾಗಿ ನಡೆದುಕೊಂಡಿಲ್ಲ. ರಾಜೀನಾಮೆ ಅಂಗೀಕಾರ ಮಾಡದೆ ಅನರ್ಹ ಮಾಡಿದ್ದಾರೆ. ಹಾಗಾಗಿ ಸುಪ್ರೀಂಕೋರ್ಟ್ಗೆ ಶಾಸಕರೆಲ್ಲ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇದ್ದಂತೆಯೇ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೇ ದಿನ. ಹಾಗಾಗಿ ಮಧ್ಯಂತರ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಎಲ್ಲ ಅನರ್ಹ ಶಾಸಕರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದರು.
ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಬೆಂಗಳೂರಿನಲ್ಲಿ ಚುನಾವಣಾ ಆಯುಕ್ತರು ಹೇಳಿದ್ದಾರೆ. ಈ ಮೂಲಕ ಅವರೆಲ್ಲರ ಹಕ್ಕನ್ನೇ ಕಸಿಯಲಾಗಿದೆ. ಹಾಗಾಗಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಲೇಬೇಕು ಎಂದು ಹೇಳಿದರು.
ಶಾಸಕರ ರಾಜೀನಾಮೆ ಸ್ವಯಂಪ್ರೇರಿತ ಹಾಗೂ ವೈಯಕ್ತಿಕ. ಆದರೆ, ಅಂದಿನ ಸ್ಪೀಕರ್ ಅದನ್ನು ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲಿಲ್ಲ. ಶಾಸಕರನ್ನು ಅನರ್ಹಗೊಳಿಸಿದ್ದೇ ಕಾನೂನು ಬಾಹಿರ. ಆತುರದ ನಿರ್ಧಾರ ಎಂದು ಮುಕುಲ್ ರೋಹಟಗಿ ತಿಳಿಸಿದರು.
ಸ್ಪೀಕರ್ ನೋಟಿಸ್ ನೀಡಿದ ಬಳಿಕ ಅದಕ್ಕೆ ಉತ್ತರಿಸಲು ಏಳು ದಿನ ಕಾಲಾವಕಾಶ ನೀಡಬೇಕು. ಆದರೆ, ಮೂರು ದಿನ ಮಾತ್ರ ನೀಡಲಾಗಿತ್ತು. ಸ್ಪೀಕರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಂಡಾಯವೆದ್ದಿದ್ದ ಈ ಶಾಸಕರ ಮನವಿಯನ್ನು ಪುರಸ್ಕಾರ ಮಾಡಲಿಲ್ಲ. ಇದು ವಿಪ್ ಉಲ್ಲಂಘನೆಯ ಪ್ರಕರಣವಲ್ಲವೇ ಅಲ್ಲ ಎಂದು ವಕೀಲರು ವಾದಿಸಿದ್ದಾರೆ. ಅಲ್ಲದೆ, ಹಳೇ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಅದರಂತೆ ನಿರ್ಧಾರ ತೆಗೆದುಕೊಳ್ಳಿ ಎಂದೂ ಮನವಿ ಮಾಡಿದರು.
ಇಂದಿನ ವಿಚಾರಣೆ ವೇಳೆ ಅನರ್ಹ ಶಾಸಕ ಮುನಿರತ್ನ ಹಾಗೂ ಎಂ.ಟಿ.ಬಿ.ನಾಗರಾಜ್ ಪುತ್ರ ಇದ್ದರು.
ಮೈತ್ರಿ ಸರ್ಕಾರದಿಂದ ಬಂಡಾಯವೆದ್ದು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರನ್ನು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.ಈ ಕ್ರಮವನ್ನು ಪ್ರಶ್ನಿಸಿ 17 ಶಾಸಕರೂ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಂದು ತುರ್ತು ವಿಚಾರಣೆಯನ್ನು ನ್ಯಾಯಾಲಯ ನಿರಾಕರಿಸಿತ್ತು.
ಬಳಿಕ ಸೆಪ್ಟೆಂಬರ್ 11ರಂದು ವಿಚಾರಣೆ ಮಾಡುವುದಾಗಿ ಕೋರ್ಟ್ ಹೇಳಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ವಿಚಾರಣೆ ಪಟ್ಟಿಯಿಂದ ಅಳಿಸಿಹಾಕಲಾಗಿತ್ತು. ನಂತರ 17ಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು. ಅಂದು ನ್ಯಾ.ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡರೂ ಕರ್ನಾಟಕ ಮೂಲದ ನ್ಯಾ.ಮೋಹನ್ ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದ ಕಾರಣ ಇವತ್ತಿಗೆ ಮುಂದೂಡಲಾಗಿತ್ತು.