ಅಹಮದಾಬಾದ್: ಆಗ ಮಧ್ಯಾಹ್ನ ಸುಮಾರು ಒಂದೂ ಮುಕ್ಕಾಲು. ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ನ ಕೆಳಮಹಡಿಯಲ್ಲಿದ್ದ ಡೈನಿಂಗ್ ಹಾಲ್ನಲ್ಲಿ ಊಟ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಟ್ಟಡವೇ ಒಡೆದುಹೋಯ್ತೇನೋ ಎನ್ನುವಷ್ಟು ಭಾರಿ ಶಬ್ದವಾಯಿತು. ಏನಾಯ್ತು ಎಂದು ತಿಳಿದುಕೊಳ್ಳುವಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿತು. ಜೊತೆಗೆ ದಟ್ಟವಾದ ಹೊಗೆ…
ಇದು ಗುರುವಾರ ಅಹಮದಾಬಾದ್ನ ಬಿ.ಜೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ವಸತಿ ನಿಲಯದ ಮೇಲೆ ಏರ್ಇಂಡಿಯಾ ವಿಮಾನ ಬಂದಪ್ಪಳಿಸಿದಾಗಿನ ದೃಶ್ಯಾವಳಿ. ಈ ಘಟನೆಯಲ್ಲಿ 24 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇನ್ನೂ ಹಲವರು ತೀವ್ರಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಲ್ಲಿ ನಾಲ್ವರು ಪದವಿ ವಿದ್ಯಾರ್ಥಿಗಳು ಮತ್ತು ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದಾರೆ.
ಘಟನೆ ಬಳಿಕ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಅರ್ಧ ಊಟ ಮಾಡಿದ್ದ ಪ್ಲೇಟ್ಗಳು, ಕುಡಿಯುವ ನೀರಿನ ಗ್ಲಾಸ್ಗಳು ಅಲ್ಲೇ ಟೇಬಲ್ ಮೇಲೆ ಬಿದ್ದಿದ್ದವು. ಹಾಲ್ನ ಒಂದು ಪಾರ್ಶ್ವಕ್ಕೆ ವಿಮಾನ ಅಪ್ಪಳಿಸಿದ್ದು, ಮೆಸ್/ಕ್ಯಾಂಟೀನ್ನ ಗೋಡೆ ಸಂಪೂರ್ಣ ಹಾನಿಗೀಡಾಗಿದೆ. ಅಲ್ಲಿ ಡೈನಿಂಗ್ ಟೇಬಲ್ಗಳು ಮತ್ತು ಊಟದ ಪ್ಲೇಟ್ಗಳು ಚೆಲ್ಲಾಪಿಲ್ಲಿಯಾಗಿದ್ದ ದೃಶ್ಯ ಮನ ಕಲಕುವಂತಿತ್ತು. ಹಾಸ್ಟೆಲ್ ಗೋಡೆಯ ಇನ್ನೊಂದು ಬದಿಯಲ್ಲಿ ವಿಮಾನದ ಮೂತಿ ಹೊರನುಗ್ಗಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ವೈದ್ಯರು/ ವೈದ್ಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಈ ಕುರಿತು ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ವೈದ್ಯರ ಸಂಘಟನೆ ಎಫ್ಐಎಎಂಎ, ‘ಅಹಮದಾಬಾದ್ ವಿಮಾನ ದುರಂತ ಅತ್ಯಂತ ದುರದೃಷ್ಟಕರ. ಬಿಜೆಎಂಸಿ, ಹಾಸ್ಟೆಲ್ ಮೇಲೆ ವಿಮಾನ ಅಪ್ಪಳಿಸಿದ್ದು ಮತ್ತು ಹಲವಾರು ಎಂಬಿಬಿಎಸ್ ವಿದ್ಯಾರ್ಥಿಗಳು ಗಾಯಗೊಂಡಿರುವುದು ಆಘಾತ ತಂದಿದೆ’ ಎಂದು ಹೇಳಿದೆ. ಘಟನೆ ನಡೆದಾಗ ಸ್ಥಳದಲ್ಲಿಯೇ ಇದ್ದ ಡಾ. ಶ್ಯಾಮ್ ಗೋವಿಂದ್ ಮಾಧ್ಯಮಪ್ರತಿನಿಧಿಗಳ ಜೊತೆ ಮಾತನಾಡಿ, ‘ನಾನು ಮತ್ತು ನನ್ನ ಜೂನಿಯರ್ ಡಾಕ್ಟರ್ ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದೇವೆ. ಸುಮಾರು 30-40 ಕಿರಿಯ ವೈದ್ಯ ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಹೇಳಿದರು.
2ನೇ ಮಹಡಿಯಿಂದ ಜಂಪ್!
ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಯೊಬ್ಬನ ತಾಯಿ ರಮೀಲಾ ಮಾತನಾಡಿ, ‘ಈ ಘಟನೆ ನಡೆದಾಗ ನನ್ನ ಮಗ ಕೂಡ ಲಂಚ್ ಬ್ರೇಕ್ ಇದೆಯೆಂದು ಕಾಲೇಜಿನಿಂದ ಬಂದಿದ್ದ. ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಲ್ಲಿ ಇದ್ದ. ಹಾಸ್ಟೆಲ್ನ ಇನ್ನೊಂದು ಭಾಗಕ್ಕೆ ವಿಮಾನ ಅಪ್ಪಳಿಸಿ ಬೆಂಕಿ ಹತ್ತಿದ್ದನ್ನು ನೋಡಿ ಗಾಬರಿಯಿಂದ ಕೂಡಲೇ ಅಲ್ಲಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಅವನಿಗೆ ಗಾಯಗಳಾಗಿವೆ. ಆದರೆ ಪ್ರಾಣಾಪಾಯ ಇಲ್ಲ. ವಿಷಯ ತಿಳಿದ ತಕ್ಷಣ ನಾನು ಇಲ್ಲಿಗೆ ಧಾವಿಸಿ ಬಂದೆ’ ಎಂದು ತಿಳಿಸಿದರು.
ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 10 ಪ್ರಮುಖ ವಿಮಾನ ದುರಂತಗಳಿವು! ಇಲ್ಲಿದೆ ನೋಡಿ ಪಟ್ಟಿ | Plane Crash