More

    ಈ ಅಣ್ಣತಮ್ಮಂದಿರ ಕಥೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ!

    ಈ ಅಣ್ಣತಮ್ಮಂದಿರ ಕಥೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ!ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳನ್ನು ನೋಡಿದಾಗ, ಅವುಗಳ ವಹಿವಾಟಿನ ಮೊತ್ತವನ್ನು ಕೇಳಿದಾಗ ನಾವು ಆಶ್ಚರ್ಯ ಪಡುತ್ತೇವೆ. ಇದೊಂದು ರಾತ್ರಿ ಬೆಳಗಾಗುವುದರಲ್ಲಿ ಘಟಿಸಿದ ಅದ್ಭುತ ಎಂದೇ ಅಂದುಕೊಳ್ಳುತ್ತೇವೆ. ಆದರೆ ರೋಮ್ ಒಂದು ದಿನದಲ್ಲಿ ಕಟ್ಟಲ್ಪಟ್ಟಿಲ್ಲ ಅಷ್ಟೇ ಅಲ್ಲ, ಯಾವ ಕಟ್ಟುವಿಕೆಯೂ ಒಂದು ದಿನದಲ್ಲಿ ಆಗುವುದಿಲ್ಲ. ಮಹತ್ವದ ಸಂಗತಿಗಳೆಲ್ಲವೂ ದೀರ್ಘ ಶ್ರಮವನ್ನು ಬೇಡುತ್ತವೆ. ಈ ವಿಷಯ ದೊಡ್ಡ ಕಂಪನಿಗಳ ವಿಚಾರದಲ್ಲೂ ಸತ್ಯ. ಹಗಲುಗನಸುಗಳ ಮಹಾಸೌಧಗಳನ್ನು ಮಾತ್ರ ಕ್ಷಣಾರ್ಧದಲ್ಲಿ ಕಟ್ಟಿಬಿಡಬಹುದು. ಆದರೆ ಈ ಎಲ್ಲ ಕಂಪನಿಗಳು ದೊಡ್ಡ ಮಟ್ಟದಲ್ಲಿ ಬೆಳೆಯುವುದರ ಹಿಂದೆ ನಿದ್ದೆಯಿರದ ರಾತ್ರಿಗಳಿವೆ, ಸೊನ್ನೆಗೆ ಇಳಿದ ಬ್ಯಾಂಕ್ ಬ್ಯಾಲನ್ಸ್ ಇದೆ, ಹತಾಶೆಯ ಗಳಿಗೆಗಳಿವೆ, ಬಿದ್ದರೂ ಹಲ್ಲು ಕಚ್ಚಿ ಎದ್ದುನಿಂತ ಛಲವಿದೆ ಎಲ್ಲಕ್ಕೂ ಮಿಗಿಲಾಗಿ ಮುಗಿಲು ಚುಂಬಿಸುವ ಕನಸುಗಳಿವೆ.

    ಆದರೆ ಇದೊಂದು ವಿಶೇಷವಾದ ಕಥೆ. ಒಟ್ಟಿಗೆ ವ್ಯವಹಾರ ಶುರುಮಾಡಿದ ಸಹೋದರರು ಬದ್ಧವೈರಿಗಳಾದ ಕಥೆ. ಸಂಬಂಧದಲ್ಲಿ ಒಟ್ಟಿಗೆ ವ್ಯವಹಾರ ಮಾಡಿದವರಿಗೆ ಅದರ ಏಳುಬೀಳುಗಳು ಗೊತ್ತಿರುತ್ತವೆ. ಮಾಮೂಲಿಯಾಗಿ ವೈರತ್ವ ವ್ಯಕ್ತಿಗಳನ್ನು ಸೋಲಿಸುತ್ತದೆ, ಪಾತಾಳಕ್ಕಿಳಿಸಿ ತಮಾಷೆ ನೋಡುತ್ತದೆ. ಆದರೆ ಈ ಸಹೋದರರ ವೈರತ್ವ ಅವರಿಬ್ಬರನ್ನೂ ಕೊಂಡೊಯ್ದ ಎತ್ತರ ಮಾತ್ರ ನಂಬಲಸಾಧ್ಯವಾದದ್ದು. ಬನ್ನಿ, ಈ ಡಾಸ್ಲರ್ ಸಹೋದರರ ಬಗ್ಗೆ ತಿಳಿದುಕೊಳ್ಳೋಣ.

    ಅಡಾಲ್ಪ್ ಡಾಸ್ಲರ್ ಮತ್ತು ರುಡಾಲ್ಪ್ ಡಾಸ್ಲರ್ ಹುಟ್ಟಿ ಬೆಳೆದದ್ದು ಬಡ ಜರ್ಮನ್ ಕುಟುಂಬವೊಂದರಲ್ಲಿ. ರುಡಾಲ್ಪ್ ಹುಟ್ಟಿದ್ದು 1898ರಲ್ಲಿ. ಅಡಾಲ್ಪ್ 1900ರಲ್ಲಿ. ಆಡಿ ಮತ್ತು ರೂಡಿ ಎಂದೇ ಕರೆಸಿಕೊಳ್ಳುತ್ತಿದ್ದ ಈ ಸಹೋದರರದ್ದು ಮೂಲತಃ ನೇಕಾರರ ಕುಟುಂಬ. ಆದರೆ ಜವಳಿ ಉದ್ಯಮದಲ್ಲಿ ಯಂತ್ರಗಳ ಪ್ರವೇಶವಾದುದರಿಂದ ತಂದೆ ಶೂ ತಯಾರಿಸುವ ಕಲೆಯನ್ನು ಕಲಿತರು. ತಾಯಿಯದೊಂದು ಪುಟ್ಟ ಲಾಂಡ್ರಿ ಅಂಗಡಿ. ಜತೆಗೆ ಮನೆಯಲ್ಲೇ ಶೂ, ಚಪ್ಪಲಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.

    ಆಡಿ 1913ರಲ್ಲಿ ಬೇಕರಿಯೊಂದರಲ್ಲಿ ಸಹಾಯಕನಾಗಿ ಕೆಲಸ ಪ್ರಾರಂಭಿಸಿದರೂ ಅಥ್ಲೆಟಿಕ್ಸ್​ನಲ್ಲಿ ಆಸಕ್ತಿ ಇದ್ದುದರಿಂದ ತಂದೆಯ ಜತೆ ಶೂ ತಯಾರಿಸುವ ಕೆಲಸ ಪ್ರಾರಂಭಿಸಿದ. ಬೇರೆ ಬೇರೆ ಕೀಡೆಗಳಲ್ಲಿ ಕ್ರೀಡಾಪಟುಗಳ ಉಪಯೋಗಕ್ಕೆ ವಿವಿಧ ರೀತಿಯ ಶೂಗಳನ್ನು ಹೇಗೆ ತಯಾರಿಸಬಹುದು ಎಂದು ಪ್ರಯೋಗ ಮಾಡತೊಡಗಿದ. ಮೊದಲ ವಿಶ್ವಯುದ್ಧದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ವಾಪಾಸಾದ ಆಡಿಗೆ ಕ್ರೀಡಾಪಟುಗಳು ಧರಿಸುವ ವಿಶೇಷ ಶೂಗಳ ತಯಾರಿಕೆ ಮತ್ತು ಮಾರಾಟದ ಯೋಚನೆ ಹೊಳೆಯಿತು. ಜಗತ್ತಿನ ಶೂ ಇತಿಹಾಸದಲ್ಲಿ ಅಪೂರ್ವ ಸಂಗತಿಯೊಂದರ ಬೀಜ ಬಿತ್ತಲ್ಪಟ್ಟಿತು.

    ಎಲ್ಲ ದೊಡ್ಡ ಸಂಗತಿಗಳೂ ಸರಳವಾಗಿಯೇ ಶುರುವಾಗುತ್ತವೆ! ಅಡಾಲ್ಪ್ ತನ್ನ ಕೆಲಸ ಪ್ರಾರಂಭಿಸಿದ್ದು ತಾಯಿಯ ಲಾಂಡ್ರಿಯಲ್ಲಿ! ಮೊದಲ ವಿಶ್ವಯುದ್ಧದ ನಂತರ ಜರ್ಮನಿಯ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಆತ ಬಹಳ ಸವಾಲುಗಳನ್ನು ಎದುರಿಸಬೇಕಾಯಿತು. ಕಚ್ಚಾವಸ್ತುಗಳಿಗೆ, ಯಂತ್ರಗಳಿಗೆ ಕೊರತೆಯಿತ್ತು. ಆದರೆ ಆಡಿ ಹೊಸ ಹೊಸ ಉಪಾಯಗಳನ್ನು ಕಂಡುಹಿಡಿದ. ಸೇನೆಯ ಹೆಲ್ಮೆಟ್ಟುಗಳ ಚರ್ಮವನ್ನು ಚಪ್ಪಲಿಯ ಸೋಲ್​ಗೆ ಬಳಸಿದ, ಪ್ಯಾರಾಶೂಟ್ ಚಪ್ಪಲಿಗಳಿಗೆ ಬಟ್ಟೆ ಒದಗಿಸುತ್ತಿತ್ತು. ನಿಲ್ಲಿಸಿದ ಸೈಕಲ್​ನ ಪೆಡಲ್ ತುಳಿದರೆ ಚರ್ಮ ಹದ ಮಾಡುವ ಯಂತ್ರವೊಂದನ್ನೂ ಆತನೇ ಕಂಡುಹಿಡಿದ. ಅಡಾಲ್ಪ್ ಡಾಸ್ಲರ್ ತನ್ನ ಶೂ ಕಂಪನಿಯ ಬಗ್ಗೆ ನಿರ್ದಿಷ್ಟ ದೃಷ್ಟಿಕೋನ ಹೊಂದಿದ್ದ. ಕ್ರೀಡಾಪಟುಗಳ ಶೂ ವಿನ್ಯಾಸದಲ್ಲಿ ನಿರಂತರವಾಗಿ ಪ್ರಯೋಗಗಳನ್ನು ಮಾಡುತ್ತಿದ್ದ. ಶಾರ್ಕ್​ನ ಚರ್ಮ, ಕಾಂಗರೂವಿನ ಚರ್ಮಗಳನ್ನೂ ಬಳಸಿದ!

    ಇತ್ತ ರುಡಾಲ್ಪ್ ಮೊದಲ ವಿಶ್ವಯುದ್ಧದ ನಂತರ ಪೊಲೀಸ್ ಅಧಿಕಾರಿಯಾಗಬಯಸಿದ್ದ. ಆದರೆ ತಮ್ಮನ ಶೂ ವ್ಯವಹಾರದಲ್ಲಿ ಆತನಿಗೆ ಭವಿಷ್ಯ ಕಂಡಿತು. ಹಾಗಾಗಿ ಆತನೂ ಜತೆ ಸೇರಿದ. 1924ರಲ್ಲಿ ಇಬ್ಬರೂ ಸೇರಿ ‘ಡಾಸ್ಲರ್ ಬ್ರದರ್ಸ್ ಸ್ಪೋರ್ಟ್ಸ್ ಶೂ ಕಂಪನಿ’ ಪ್ರಾರಂಭಿಸಿದರು. ಅಡಾಲ್ಪ್ ಶೂಗಳ ಡಿಸೈನ್ ಮಾಡಿ ಅವನ್ನು ತಯಾರಿಸುವ ಕೆಲಸ ಮಾಡುತ್ತಿದ್ದ ನಿಪುಣ ಕೆಲಸಗಾರ. ರುಡಾಲ್ಪ್ ಹುಟ್ಟಾ ಮಾರಾಟಗಾರ. 1926ರಲ್ಲಿ ಮನೆಯಿಂದ ಹೊರಗೆ 25 ಕೆಲಸಗಾರರ ಜತೆ ಹೊಸ ಯುನಿಟ್ ಪ್ರಾರಂಭಿಸಿದರು. 1933ರಲ್ಲಿ ಇಬ್ಬರೂ ಹಿಟ್ಲರ್​ನ ನಾಝಿ ಪಕ್ಷದ ಸದಸ್ಯರಾದರು. ಹಿಟ್ಲರ್​ನ ಯುವ ಚಳುವಳಿಯಲ್ಲಿ ತನ್ನ ಶೂಗಳ ಮಾರುಕಟ್ಟೆಯನ್ನು ವಿಸ್ತರಿಸಲು ಅಡಾಲ್ಪ್ ಯೋಜನೆ ಹಾಕಿಕೊಂಡ.

    1936ರಲ್ಲಿ ಬರ್ಲಿನ್ ಒಲಿಂಪಿಕ್ಸ್ ಡಾಸ್ಲರ್ ಸಹೋದರರಿಗೆ ದೊಡ್ಡ ಬ್ರೇಕ್ ನೀಡಿತು. ಒಲಿಂಪಿಕ್ಸ್ ಜರ್ಮನಿಯಲ್ಲೇ ನಡೆದುದರಿಂದ ಕ್ರೀಡಾಪಟುಗಳು ಇವರ ಶೂ ಧರಿಸಿದ್ದರಿಂದ ತಾಯ್ನಾಡಿನಲ್ಲಿ ಶೂಗಳಿಗೆ ವ್ಯಾಪಕ ಪ್ರಚಾರ ಸಿಕ್ಕಿತು. ಅದರಲ್ಲೂ ನಾಝಿಯಾದ ಅಡಾಲ್ಪ್ ಅಮೆರಿಕದ ಜೆಸ್ಸಿ ಓವನ್ಸ್​ರನ್ನು ತಮ್ಮ ಶೂ ಧರಿಸಲು ಮನವೊಲಿಸುತ್ತಾನೆ! (ಆರ್ಯನ್ನರೇ ಶ್ರೇಷ್ಠರೆಂಬ ಹಿಟ್ಲರನ ಪೊಳ್ಳು ಮೇಲರಿಮೆಯ ಬಲೂನಿಗೆ ಬಲವಾದ ಸೂಜಿ ಚುಚ್ಚಿದ ಹೀರೋ ಈ ಜೆಸ್ಸಿ ಓವನ್ಸ್ !) 1936ರ ಒಲಿಂಪಿಕ್ಸ್​ನಲ್ಲಿ ಜೆಸ್ಸಿ ಇವರ ಕಂಪನಿಯ ಶೂ ಧರಿಸಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ವಿುಸಿದರು! ಈ ಗೆಲುವು ಡಾಸ್ಲರ್ ಶೂಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿತು. 1938ರಲ್ಲಿ ಕಂಪನಿ ದಿನಕ್ಕೆ ಸಾವಿರ ಜತೆ ಶೂಗಳನ್ನು ತಯಾರಿಸಲು ಪ್ರಾರಂಭಿಸಿತು. ಹನ್ನೊಂದು ಕ್ರೀಡೆಗಳಿಗೆ ಹನ್ನೊಂದು ಥರದ ಶೂಗಳು ತಯಾರಾಗುತ್ತಿರುತ್ತವೆ!

    ಆದರೆ ಅಷ್ಟರಲ್ಲಿ ಎರಡನೇ ಮಹಾಯುದ್ಧ ಶುರುವಾಯಿತು. ರೂಡಿ ಸೈನ್ಯ ಸೇರಿದ. ತಾನಿಲ್ಲದಿದ್ದಾಗ ಪೂರ್ತಿ ಕಂಪನಿಯನ್ನು ತಮ್ಮನೇ ತೆಗೆದುಕೊಂಡುಬಿಟ್ಟರೆ ಎಂಬ ಚಿಂತೆ ರೂಡಿಗೆ ಕಾಡುತ್ತದೆ. ಈ ಕಾರಣಕ್ಕೆ ಸೋದರರ ನಡುವೆ ಭಿನ್ನಾಭಿಪ್ರಾಯವೂ ಬಂತು. ಕಂಪನಿಯನ್ನು ಮುಚ್ಚಿ ಆಡಿ ಕೂಡ ಯುದ್ಧಕ್ಕೆ ಹೋಗಲಿ ಎಂದು ರೂಡಿ ಬಯಸಿದ. ಆದರೆ ಆಡಿ ಶೂ ತಯಾರಿಸುತ್ತಲೇ ಇದ್ದ. ಅಡಾಲ್ಪ್​ಗೆ ಅತ್ಯತ್ತಮ ದರ್ಜೆಯ ಶೂಗಳನ್ನು ಮಾಡಬೇಕೆಂಬ ಹಂಬಲ, ರುಡಾಲ್ಪ್​ಗೆ ಹೆಚ್ಚುಹೆಚ್ಚು ಲಾಭ ಮಾಡುವ ಬಯಕೆ. ಹಾಗಾಗಿ ಎರಡನೇ ವಿಶ್ವಯುದ್ಧದ ನಂತರ ಕಂಪನಿ ಎರಡು ಹೋಳಾಯಿತು. ನಂತರ ಅಣ್ಣ-ತಮ್ಮ ಇಬ್ಬರೂ ಮತ್ತೆಂದೂ ಮಾತನಾಡಲಿಲ್ಲ!

    ಅಡಾಲ್ಪ್ ಡಾಸ್ಲರ್ ತನ್ನ ಕಂಪನಿಗೆ ತನ್ನದೇ ಹೆಸರನ್ನು ಶಾರ್ಟ್ ಮಾಡಿ ‘ಅಡಿಡಾಸ್’ ಎಂದು ಹೆಸರಿಟ್ಟ, ರುಡಾಲ್ಪ್ ಕೂಡ ಅದೇ ರೀತಿ ಮಾಡಲು ಹೊರಟು ‘ರುಡಾ’ ಎಂದು ಹೆಸರಿಟ್ಟ. ಆದರೆ ಅದು ಇಷ್ಟವಾಗದೆ ‘ಪ್ಯೂಮಾ’ ಎಂಬ ಹೆಚ್ಚು ಆಕರ್ಷಕ ಹೆಸರಿಟ್ಟ. ಮಜವೆಂದರೆ ಈ ಅಣ್ಣ ತಮ್ಮಂದಿರ ಜತೆಗೆ ಅವರ ಸಣ್ಣ ಊರೂ ಎರಡು ಪಂಗಡವಾಯಿತು. ಯಾಕೆಂದರೆ ಹೆಚ್ಚೂ ಕಡಿಮೆ ಆ ಊರಿನ ಪ್ರತಿಯೊಬ್ಬರೂ ಇವರಿಬ್ಬರಲ್ಲಿ ಒಬ್ಬರ ಕಂಪನಿಯಲ್ಲಿ ಕೆಲಸಕ್ಕಿದ್ದರು. ಒಬ್ಬರ ಕಂಪನಿಯಲ್ಲಿ ಕೆಲಸ ಮಾಡುವವರು ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡುವವರ ಹತ್ತಿರ ಬೆರೆಯುವಂತಿರಲಿಲ್ಲ! ‘ಟೌನ್ ಆಫ್ ಬೆಂಟ್ ನೆಕ್ಸ್’ ಎಂದು ಆ ಊರಿನ ಜನರನ್ನು ಕರೆಯುತ್ತಿದ್ದರು! ಯಾಕೆಂದರೆ ಜನರು ಒಬ್ಬರಿಗೊಬ್ಬರು ಎದುರಾದಾಗ ಮೊದಲು ಅವರ ಶೂ ನೋಡುತ್ತಿದ್ದರು. ಎದುರಿಗಿದ್ದವರ ಶೂ ತಮ್ಮದೇ ಕಂಪನಿಯದ್ದಾದರೆ ವಿಶ್ ಮಾಡುತ್ತಿದ್ದರು, ಬೇರೆ ಕಂಪನಿಯಾದರೆ ಹಾಗೇ ಮುಂದೆ ಹೋಗುತ್ತಿದ್ದರು! ಎರಡೂ ಕಂಪನಿಗಳು 1989ರಲ್ಲಿ ಬೇರೆಯವರಿಗೆ ಮಾರಾಟವಾದವು. ಆದರೂ 2009 ಸೆಪ್ಟೆಂಬರ್ 21 ರವರೆಗೂ ಕಂಪನಿಗಳ ಸಂಬಂಧ ಕಹಿಯಾಗಿಯೇ ಇತ್ತು. ಅಂದು ಎರಡೂ ಕಂಪನಿಗಳ ಕೆಲಸಗಾರರ ಮಧ್ಯೆ ಫುಟ್​ಬಾಲ್ ಪಂದ್ಯವೊಂದನ್ನು ಏರ್ಪಡಿಸಲಾಯಿತು! ದಶಕಗಳ ವೈರತ್ವವನ್ನು ತೊಡೆದು ಹಾಕಲು ಪ್ರಯತ್ನಗಳು ನಡೆದವು. ಸ್ನೇಹದ ಹೊಸ ಅಧ್ಯಾಯವೊಂದು ಶುರುವಾಯಿತು.

    ವ್ಯಾವಹಾರಿಕವಾಗಿ ಅಡಾಲ್ಪ್ ಜಯಶಾಲಿಯಾದ. 1972ರ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಶೇಕಡ ಎಂಬತ್ತು ಕ್ರೀಡಾಪಟುಗಳು ಅಡಿಡಾಸ್ ಶೂ ಧರಿಸಿದ್ದರು! 1978ರಲ್ಲಿ ಸಾಯುವ ಮೊದಲು ಅಡಾಲ್ಪ್ ನೂರಾರು ಶೂ ವಿನ್ಯಾಸಗಳಿಗೆ ಪೇಟೆಂಟ್ ಪಡೆದುಕೊಂಡಿದ್ದ! ಪ್ಯೂಮಾ ಕೂಡ ಅಂತಾರಾಷ್ಟ್ರೀಯವಾಗಿ ಹೆಸರು ಮಾಡಿತು. ಆದರೆ ಅಡಿಡಾಸ್ ಏರಿದ ಎತ್ತರವನ್ನು ತಲುಪಲಾಗಲಿಲ್ಲ. ಕಾರಣ ರುಡಾಲ್ಪ್ ಲಾಭಕ್ಕಾಗಿ ದುಡಿದ. ಆದರೆ ಅಡಾಲ್ಪ್ ಗುಣಮಟ್ಟವನ್ನು ನಿರಂತರವಾಗಿ ಹೆಚ್ಚಿಸಲು, ಹೊಸ ವಿನ್ಯಾಸಗಳ, ಅತ್ಯುತ್ತಮ ಶೂಗಳ ತಯಾರಿಕೆಗೆ ಗಮನ ಕೊಟ್ಟಿದ್ದ. ಹಾಗಾಗಿ ಲಾಭವೂ ಹಿಂಬಾಲಿಸಿ ಅಡಿಡಾಸ್ ಈ ಎತ್ತರಕ್ಕೇರಿತು! ಈ ಅಣ್ಣತಮ್ಮಂದಿರ ಕಥೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ! ನಿಮಗೆ ಬೇಕಾದುದನ್ನು ನೀವೇ ಹೆಕ್ಕಿಕೊಳ್ಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts