ಕೊಯ್ನ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಿ

ಬೆಳಗಾವಿ: ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಕೃಷ್ಣೆಗೆ ನೀರು ಬಿಡಿಸಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ಮತ್ತು ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಹಿಡಕಲ್ ಜಲಾಶಯದಿಂದ 94 ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸಲು ಮುಂದಾಗಿರುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಾರಾಷ್ಟ್ರಕ್ಕೆ ಸರ್ವಪಕ್ಷೀಯ ನಿಯೋಗ ಕಳುಹಿಸಿ, ಕೊಯ್ನ ಡ್ಯಾಂನಿಂದ ನೀರು ಬಿಡಿಸಲು ಪ್ರಯತ್ನಿಸಬೇಕು. ಕೇವಲ ಮಹಾರಾಷ್ಟ್ರಕ್ಕೆ ಪತ್ರ ಬರೆಯುವುದರಿಂದ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಸಿದ್ದಗೌಡ ಮೋದಗಿ, ಕೊಯ್ನದಿಂದ ಕೃಷ್ಣೆಗೆ ಹರಿಸುವಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಲು ನೀರಾವರಿ ಇಲಾಖೆ ಸಚಿವರು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿವಪ್ಪ ಶಮರಂತ, ದೀಪಕ ಗುಡಗನಟ್ಟಿ, ಸಾಗರ ಬೋರಗಲ್ಲ, ಗೌರಿ ಲಮಾಣಿ, ರಾಜು ಕುಸೋಜಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಪ್ರಾದೇಶಿಕ ಹೆಚ್ಚುವರಿ ಆಯುಕ್ತ ರಮೇಶ ಕಳಸದ ಅವರಿಗೂ ಮುಖಂಡರು ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *