ಅರಸೀಕೆರೆ: ದೇಶದಲ್ಲಿ ಅತಿ ಹೆಚ್ಚು ಶಾಸನಗಳನ್ನು ಹೊಂದಿರುವ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಸಂಶೋಧಕ ಪ್ರೊ.ಮುರುಗೇಶ್ ಹೇಳಿದರು.
ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಕುವೆಂಪು ಕನ್ನಡ ವೇದಿಕೆ ವತಿಯಿಂದ ಬುಧವಾರ ಶಾಸನಗಳ ಓದು ಮತ್ತು ಸಾಂಸ್ಕೃತಿಕ ಮಹತ್ವ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಜ್ಯ ಅತಿ ಹೆಚ್ಚು ಶಾಸನ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದೆ. ಹಲ್ಮಿಡಿ ಶಾಸನ ಕನ್ನಡದ ಮೊದಲ ಶಾಸನವಾಗಿದ್ದು, ಕನ್ನಡ ಲಿಪಿಯ ಉಗಮ ವಿಕಾಸ ಹಾಗೂ ಐದನೇ ಶತಮಾನದಲ್ಲಿ ಪೂರ್ವದ ಹಳಗನ್ನಡ ಬಳಕೆಯಾಗುತ್ತಿದ್ದ ಬಗೆಯನ್ನು ತಿಳಿಸುವ ಮಹತ್ವದ ಶಾಸನವಾಗಿದೆ. ಶಾಸನಗಳು ಪ್ರಾಚೀನ ಕಾಲದ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಸುವ ದಾಖಲೆಗಳಾಗಿವೆ. ಪಾಶ್ಚಾತ್ಯ ವಿದ್ವಾಂಸರು ಮೊದಲ ಬಾರಿಗೆ ಅಧ್ಯಯನ ಮಾಡಿ ಕನ್ನಡದ ಸಾಂಸ್ಕೃತಿಕ ಜಗತ್ತಿನ ಶ್ರೀಮಂತಿಕೆಯನ್ನು ಅನಾವರಣ ಮಾಡಿದ್ದಾರೆ. ಶಾಸನಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಡಾ.ಹರೀಶ್ ಕುಮಾರ್ ಮಾತನಾಡಿ, ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರ ಕಾಲದ 380 ಶಾಸನಗಳು ತಾಲೂಕಿನಲ್ಲಿ ಲಭ್ಯವಾಗಿವೆ. ಪ್ರೊ.ಮುರುಗೇಶ ಸೇರಿದಂತೆ ಹಲವರು ಹೊಸ ಶಾಸನಗಳನ್ನು ಪತ್ತೆಹಚ್ಚಿ ಶೋಧನೆ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದರು.
ಉದ್ಯಮಿ ಉಂಡಿಗನಾಳು ಶಾಂತಕುಮಾರ, ಪ್ರಾಂಶುಪಾಲರಾದ ಡಾ.ಎಸ್.ನಾರಾಯಣ ಮಾತನಾಡಿದರು. ಉಪನ್ಯಾಸಕ ರವಿ, ಐಕ್ಯೂಎಸಿ ಸಂಚಾಲಕ ಡಾ.ಸುನೀಲ್, ಮಲ್ಲಿಕಾರ್ಜುನ, ಹರೀಶ್, ರಾಘವೇಂದ್ರ ಬಜಂತ್ರಿ, ಎಲ್ಲ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.