ಜಲವಳ್ಳಿ ಮೇಳ 2ನೇ ವರ್ಷದ ತಿರುಗಾಟ ಆರಂಭ

ಕಾರವಾರ: ಉತ್ತರ ಕನ್ನಡದ ಏಕೈಕ ಟೆಂಟ್ ಯಕ್ಷಗಾನ ಮೇಳವಾದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ತನ್ನ ಎರಡನೇ ವರ್ಷದ ತಿರುಗಾಟವನ್ನು ಗುರುವಾರ ಇಡಗುಂಜಿಯಲ್ಲಿ ಸೇವೆಯ ಪ್ರದರ್ಶನ ನೀಡುವ ಮೂಲಕ ಆರಂಭಿಸಿದೆ.

ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ನೇತೃತ್ವದಲ್ಲಿ ಪ್ರಾರಂಭವಾದ ಕಲಾಧರ ಯಕ್ಷರಂಗ ಬಳಗದ ವಾರ್ಷಿಕೋತ್ಸವ, ಜಲವಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ, ‘ಅಪೂರ್ವ ಅರ್ಧಾಂಗಿ’ ಎಂಬ ನೂತನ ಪ್ರಸಂಗ ಬಿಡುಗಡೆ ಹೊನ್ನಾವರ ಕವಲಕ್ಕಿಯ ಅಯ್ಯಪ್ಪ ಸನ್ನಿಧಿಯ ಪಕ್ಕದಲ್ಲಿ ನ. 16 ರಂದು ರಾತ್ರಿ 9 ಗಂಟೆಗೆ ಆಯೋಜನೆಯಾಗಿದೆ. ಈ ಮೂಲಕ ಮೇಳದ ಸಂಚಾರಕ್ಕೂ ಚಾಲನೆ ದೊರೆಯಲಿದೆ.

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿ ಸಾನ್ನಿಧ್ಯ ವಹಿಸುವರು. ಭಟ್ಕಳ ಶಾಸಕ ಸುನೀಲ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಯಕ್ಷಗಾನ ಅಕಾಡೆಮಿ ಸದಸ್ಯೆ ಅಶ್ವಿನಿ ಕೊಂಡದಕುಳಿ, ಉಪನ್ಯಾಸಕ ವಿ.ದತ್ತಮೂರ್ತಿ ಭಟ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ ಆಶಯ ನುಡಿಯಾಡಿದರೆ, ಜಲವಳ್ಳಿ ವೆಂಕಟೇಶ ರಾವ್ ಗೌರವ ಉಪಸ್ಥಿತರಿರುವರು.

ಪ್ರಸಂಗ ಬಿಡುಗಡೆ: ಪ್ರಸಾದಕುಮಾರ್ ಮೊಗೆಬೆಟ್ಟು ವಿರಚಿತ 23 ನೇ ಪ್ರಸಂಗ ಅಪೂರ್ವ ಅರ್ಧಾಂಗಿ ಬಿಡುಗಡೆಗೊಂಡು ಈ ವೇಳೆ ಪ್ರದರ್ಶನಗೊಳ್ಳಲಿದೆ. ಬಳ್ಕೂರು ಕೃಷ್ಣ ಯಾಜಿ, ಉಪ್ಪುಂದ ನಾಗೇಂದ್ರ ರಾವ್, ಜಲವಳ್ಳಿ ವಿದ್ಯಾಧರ, ನೀಲ್ಕೋಡು ಶಂಕರ ಹೆಗಡೆ ಹಿರಿಯ ಕಲಾವಿದರು, ಕಾರ್ತಿಕ ಚಿಟ್ಟಾಣಿ, ವಿನಯ ಭಟ್ ಬೇರೊಳ್ಳಿ, ನಿರಂಜನ ಜಾಗನಳ್ಳಿ ಮತ್ತಿತರ ಯುವ ಕಲಾವಿದರು ಪಾತ್ರ ನಿರ್ವಹಿಸುವರು. ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ ಭಟ್ ಕಾಸರಕೋಡು ಹಾಸ್ಯ ಪಾತ್ರ ನಿರ್ವಹಿಸುವರು.

ಅಶೋಕ ಭಟ್ ಸಿದ್ದಾಪುರಗೆ ಪ್ರಶಸ್ತಿ

ಅಶೋಕ ಭಟ್ ಸಿದ್ದಾಪುರ ಅವರಿಗೆ ಜಲವಳ್ಳಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅಶೋಕ ಭಟ್ ಅವರು ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿ ಹೇರಂಜಾಲು ವೆಂಕಟರಮಣ ಗಾಣಿಗ, ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತರ ಶಿಷ್ಯರಾಗಿ ಯಕ್ಷಗಾನ ಅಭ್ಯಾಸ ಮಾಡಿದವರು. 1978 ರಿಂದ ಐದಾರು ವರ್ಷಗಳ ಕಾಲ ಕೆರೆಮನೆ ಮೇಳದಲ್ಲಿ ಕಲಾವಿದರಾಗಿದ್ದರು. ನಂತರ ಸಾಲಿಗ್ರಾಮ ಮೇಳದಲ್ಲಿ ವೃತ್ತಿ ಬದುಕು ಮುಂದುವರಿಸಿದರು. ಪೀಠಿಕಾ ಸ್ತ್ರೀ ವೇಷದಿಂದ ಕಲಾ ಬದುಕನ್ನು ಆರಂಭಿಸಿದ ಭಟ್ಟರು ಇಂದು ಯಾವ ಪಾತ್ರವನ್ನು ತಮ್ಮದೇ ಆದ ಶೈಲಿಯಲ್ಲಿ ಮಾಡುವ ತಾಕತ್ತನ್ನು ರೂಢಿಸಿಕೊಂಡಿರುವುದು ವಿಶೇಷ. ಕಾಳಿಂಗ ನಾವಡರ ಗರಡಿಮನೆಗೆ ಸೇರಿದ ಭಟ್ಟರು ಯಾವ ಕಲಾವಿದನನ್ನು ಮತ್ತು ಪ್ರೇಕ್ಷಕರನ್ನು ಚಿತ್ ಮಾಡುವ ಪ್ರೌಢಿಮೆ ಪಡೆದಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಚುಟುಕು ಮತ್ತು ಚುರುಕು ಮಾತು, ತೀಕ್ಷ್ಣವಾದ ಹಾಸ್ಯ ಪ್ರಜ್ಞೆ, ಪ್ರತ್ಯುತ್ಪನ್ನ ಮತೀತ್ವ ಇವರ ಹಿರಿಮೆ.