ನ್ಯಾಯದಾನ ಪೂರಕ ಪ್ರಕ್ರಿಯೆಗೆ ವೇಗ

ವಿಜಯವಾಣಿ ಸುದ್ದಿಜಾಲ ಮಂಗಳೂರು
ನ್ಯಾಯದಾನದಲ್ಲಿ ವೇಗ ಆದ್ಯತೆಯಲ್ಲಿ ನಡೆಯಬೇಕಾದ ಕೆಲಸವಾಗಿದ್ದು, ಈ ದಿಕ್ಕಿನಲ್ಲಿ ಪೂರಕ ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ ಸಂಸದ ಡಾ.ಎಂ.ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟಿಸ್’ ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.

ಈಗಾಗಲೇ ತಾನು ಕೃತಿ ಓದಿದ್ದು, ರಾಷ್ಟ್ರ ಮಟ್ಟದ ಕಾನೂನು ಶಾಲೆಗಳಲ್ಲಿ ಪಠ್ಯವಾಗುವ ಅರ್ಹತೆ ಹೊಂದಿದೆ. ಜತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾರ್ಗದರ್ಶನ ಮಾಡುತ್ತದೆ ಎಂದರು.

ವಕೀಲನಾಗಿ, ಕಾನೂನು ಸಚಿವನಾಗಿ, ಮುಖ್ಯಮಂತ್ರಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಅನುಭವಗಳನ್ನು ಸಮೀಕರಿಸಿ, ಸಂಶೋಧನೆ ನಡೆಸಿ, ಅಂತಾರಾಷ್ಟ್ರೀಯ ಮಟ್ಟದ ಕಾನೂನು ತಜ್ಞರ ಜತೆ ಅಭ್ಯಾಸ ಮಾಡಿ, ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿ ಈ ಕೃತಿ ಬರೆದಿದ್ದೇನೆ. ಇದರಿಂದ ಇದು ಕೇವಲ ನನ್ನ ಕೊಡುಗೆ ಅಲ್ಲ. ಇದು ಜಗತ್ತಿನ ಕಾನೂನು ವಿದ್ವಾಂಸರ ಜ್ಞಾನ ಸಂಚಯ ಎಂದು ವೀರಪ್ಪ ಮೊಯ್ಲಿ ತಮ್ಮ ಕೃತಿಯನ್ನು ವ್ಯಾಖ್ಯಾನಿಸಿದರು.

ಜಿಲ್ಲಾ ನ್ಯಾಯಾಧೀಶ ನ್ಯಾ.ಕಡೂರು ಸತ್ಯನಾರಾಯಣ ಆಚಾರ್, ವಕೀಲ ಎಂ.ಕೆ.ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಕೀಲರಾದ ಪಿ.ಪಿ.ಹೆಗ್ಡೆ, ದಿನಕರ ಶೆಟ್ಟಿ ಮೊದಲಾದವರಿದ್ದರು.
ಮಂಗಳೂರು ವಕೀಲರ ಸಂಘ ಅಧ್ಯಕ್ಷ ಎಂ.ಆರ್.ಬಲ್ಲಾಳ್ ಸ್ವಾಗತಿಸಿದರು. ಜಿಲ್ಲಾ ನ್ಯಾಯಾಲಯಕ್ಕೆ ನೇರ ನೇಮಕಾತಿಗೊಂಡಿರುವ ನೂತನ ಜಿಲ್ಲಾ ನ್ಯಾಯಾಧೀಶ ಯಾದವ ಕರ್ಕೇರ ಅವರನ್ನು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅಭಿನಂದಿಸಿದರು. ಮಂಗಳೂರು ವಕೀಲರ ಸಂಘ ವತಿಯಿಂದ ಮೊಯ್ಲಿ ಅವರನ್ನು ಸನ್ಮಾನಿಸಲಾಯಿತು.

ಪ್ರಧಾನಿಯಾಗಲಿ ಮೊಯ್ಲಿ!: ವೀರಪ್ಪ ಮೊಯ್ಲಿ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಪ್ರಮುಖ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಾಹಿತಿಯಾಗಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾರೆ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಯಂತಹ ಪ್ರಮುಖ ಮೂರು ಸ್ಥಾನ ಹೊರತುಪಡಿಸಿ ಬಹುತೇಕ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆ ಸ್ಥಾನಗಳ ಅವಕಾಶವೂ ದೊರೆಯಲಿ ಎಂದು ಅಬ್ದುಲ್ ನಝೀರ್ ಹಾರೈಸಿದ್ದಾರೆ.

ನ್ಯಾಯಾಧೀಶರ ತುಳು ಪ್ರೇಮ: ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ‘ಮಾತೆರೆಗ್ಲಾ ನಮಸ್ಕಾರ’ ಎಂದು ತುಳುವಿನಲ್ಲಿ ಮಾತು ಆರಂಭಿಸಿ ಕರತಾಡನ ಗಿಟ್ಟಿಸಿದರು. ಇಂಗ್ಲಿಷ್ ಭಾಷಣದುದ್ದಕ್ಕೂ ಅವರು ಯಥೇಚ್ಛವಾಗಿ ತುಳು ಬಳಸಿದರು.