More

    ವಿಜಯವಾಣಿ ಸಂಪಾದಕೀಯ: ಸ್ಪೀಕರ್​ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಿಸುವಂತೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು

    ದೇಶದ ವಿವಿಧ ರಾಜ್ಯಗಳ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸ್ಪೀಕರ್ ಅಧಿಕಾರವ್ಯಾಪ್ತಿ, ನಿರ್ಣಯಗಳ ಬಗ್ಗೆ ಚರ್ಚೆ ಗರಿಗೆದರಿರುವಾಗಲೇ ಮಂಗಳವಾರ ಸುಪ್ರೀಂಕೋರ್ಟ್ ಮಹತ್ವದ ಸಲಹೆ ನೀಡಿದೆ. ಶಾಸಕರು ಅಥವಾ ಸಂಸದರ ಅನರ್ಹತೆ ನಿರ್ಧರಿಸುವ ಹಕ್ಕು ಸ್ಪೀಕರ್ ಬದಲಿಗೆ ಸ್ವತಂತ್ರ ಸಂಸ್ಥೆ ಅಥವಾ ಸಮಿತಿಗೆ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಸಲಹೆ ಮಾಡಿದೆ. ಸ್ಪೀಕರ್ ಕೂಡ ರಾಜಕೀಯ ಹಿನ್ನೆಲೆ ಮತ್ತು ಪಕ್ಷಕ್ಕೆ ಸೇರಿದ ವ್ಯಕ್ತಿಯೇ ಆಗಿರುವುದರಿಂದ ಶಾಸಕರ ಅನರ್ಹತೆಯಂಥ ವಿಚಾರದಲ್ಲಿ ಅವರಿಗಿರುವ ಅಧಿಕಾರದ ಪುನರ್ ಪರಿಶೀಲನೆ ನಡೆಯಬೇಕು ಎಂಬ ನ್ಯಾಯಾಲಯದ ಆಶಯ ಸೂಕ್ತವೇ ಆಗಿದೆ. ಈ ನಿಟ್ಟಿನಲ್ಲಿ ಸಂಸತ್ ಸೂಕ್ತ ಚಿಂತನೆ ನಡೆಸಬೇಕಿದೆ.

    ಅರೆನ್ಯಾಯಿಕ ಸ್ಥಾನಮಾನ ಹೊಂದಿರುವ ಸ್ಪೀಕರ್​ಗೆ ತನ್ನದೇ ಆದ ಘನತೆ ಮತ್ತು ಮಹತ್ತರ ಜವಾಬ್ದಾರಿಗಳಿವೆ. ಯಾವುದೇ ರಾಜಕೀಯ ಪಕ್ಷದಿಂದ ಬಂದಿದ್ದರೂ ಸ್ಪೀಕರ್ ಆದ ಬಳಿಕ ಅವರು ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಿಸುವಂತೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು, ವಿವೇಚನೆಯಿಂದ ನಿರ್ಣಯಗಳನ್ನು ತಳೆಯಬೇಕು. ರಾಜಕೀಯೇತರ ವ್ಯಕ್ತಿಯಾಗಿ ಬದಲಾಗಬೇಕು. ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಣಯ ತೆಗೆದುಕೊಳ್ಳಲು ಸ್ಪೀಕರ್​ಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ವ್ಯವಸ್ಥೆಯಲ್ಲಿ ಒಂದೆಡೆ ರಾಜಕೀಯ ಮೌಲ್ಯಗಳು ಡೋಲಾಯಮಾನವಾಗುತ್ತಿರುವ ಸಂದರ್ಭದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಸ್ಪೀಕರ್ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಎಲ್ಲ ಪೂರ್ವಗ್ರಹಗಳನ್ನು ತ್ಯಜಿಸಬೇಕಾಗುತ್ತದೆ.

    ಕರ್ನಾಟಕದ್ದೇ ನಿದರ್ಶನ ತೆಗೆದುಕೊಳ್ಳುವುದಾದರೆ, ಹದಿನೇಳು ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿ, ಆದೇಶ ಹೊರಡಿಸಿದರು. ಇದನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದಾಗ ಅನರ್ಹತೆ ಕ್ರಮ ಸರಿಯೆಂದು ಹೇಳಿದರೂ ಚುನಾವಣೆಗೆ ಸ್ಪರ್ಧಿಸಲು ನ್ಯಾಯಾಲಯ ಅನುಮತಿ ಕೊಟ್ಟಿತು. ಎಲ್ಲ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಿಜಕ್ಕೂ ಒಂದು ಸ್ವತಂತ್ರ ಸಂಸ್ಥೆ ರಚಿಸುವ ಅಗತ್ಯವಿದೆಯೇ, ಹಾಗಿದ್ದರೆ ಅದಕ್ಕೇನು ಮಾನದಂಡಗಳು ಇರಲಿವೆ ಎಂಬ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದೆ. ಈ ಮೊದಲೇ ಹೇಳಿದಂತೆ, ಸ್ಪೀಕರ್ ಹುದ್ದೆ ಸಾಂವಿಧಾನಿಕ ಸ್ಥಾನಮಾನ ಹೊಂದಿರುವಂಥದ್ದು. ಹಾಗಾಗಿ, ಸ್ಪೀಕರ್ ಅಧಿಕಾರವನ್ನು ಮೊಟಕುಗೊಳಿಸುವಂಥ ಅಥವಾ ಅವರ ಕಾರ್ಯದಲ್ಲಿ ಹಸ್ತಕ್ಷೇಪ ಆಗುವಂಥ ಬೆಳವಣಿಗೆಗಳು ನಡೆಯಬಾರದು ಎಂಬ ಸೂಕ್ಷ್ಮವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸ್ಪೀಕರ್ ಪ್ರಭಾವ ಕುಗ್ಗಿಸುವ ಯತ್ನ ಮಾಡಿದರೂ ಹೊಸ ಸಮಸ್ಯೆಗಳು ತಲೆದೋರುತ್ತವೆ.

    ಈ ನಿಟ್ಟಿನಲ್ಲಿ ಸಮತೋಲಿತ ಮಾರ್ಗವೇ ಪರಿಹಾರ. ಶಾಸಕರ ಅನರ್ಹತೆ ಸೇರಿ ಯಾವುದೇ ವಿಷಯದಲ್ಲಿ ಪಕ್ಷಪಾತದ ನಿರ್ಧಾರಕ್ಕೆ ಅವಕಾಶವಾಗಬಾರದು. ಪಾರದರ್ಶಕ ಮತ್ತು ಗಟ್ಟಿ ನಿರ್ಧಾರ ತಳೆಯುವಂಥ ವಾತಾವರಣ ಬೇಕು. ಹಾಗೆಯೇ, ಸ್ಪೀಕರ್ ಸ್ಥಾನ-ಜವಾಬ್ದಾರಿಗೂ ಚ್ಯುತಿ ಬರಬಾರದು. ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಅಲ್ಲೋಲಕಲ್ಲೋಲಗಳನ್ನೆಲ್ಲ ಗಮನಿಸಿಯೇ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ರಾಜಕೀಯ ಪಕ್ಷಗಳು ಮುಂದಿನ ಹಾದಿಯನ್ನು ಕಂಡುಕೊಳ್ಳಬೇಕು. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿತವಾದರೆ ಇದು ಸಾಧ್ಯವಾಗಲು ಯಾವುದೇ ಅಡ್ಡಿ ಇಲ್ಲ ಎಂಬುದನ್ನು ಸಂಬಂಧಪಟ್ಟವರು ಅರ್ಥಮಾಡಿಕೊಳ್ಳಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts