ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್​ ಸ್ವತಂತ್ರರು: ಸಂವಿಧಾನ ದತ್ತ ಅಧಿಕಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್​

ಬೆಂಗಳೂರು: ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಷಯದಲ್ಲಿ ತೀರ್ಮಾನ ಕೈಗೊಳ್ಳಲು ಯಾವುದೇ ಕಾಲಮಿತಿ ನೀಡುವುದಿಲ್ಲ. ಅದನ್ನು ನಿರ್ಧರಿಸುವ ಪರಮಾಧಿಕಾರ ಸ್ಪೀಕರ್​ಗೆ ಇದೆ ಎಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಆದರೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ರಾಜೀನಾಮೆ ನೀಡಿದ 15 ಶಾಸಕರು ಸದನದಲ್ಲಿ ಪಾಲ್ಗೊಳ್ಳುವಂತೆ ಬಲವಂತ ಮಾಡುವಂತಿಲ್ಲ ಎಂದು ಕೋರ್ಟ್​ ಹೇಳಿದೆ.

ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದು ಸಾಂವಿಧಾನಿಕ ವಿರೋಧಿ ಧೋರಣೆ ಎಂದು ಅತೃಪ್ತ ಶಾಸಕರು ವಾರದ ಹಿಂದೆಯೇ ಸುಪ್ರೀಂಕೋರ್ಟ್​ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆಯನ್ನು ಸ್ಪೀಕರಿಸಬೇಕು ಎಂದು ಆದೇಶಿಸಿ ಕ್ರಮಕೈಗೊಳ್ಳಲು ಸೂಚಿಸಿತ್ತು. ಅದಕ್ಕೂ ಮೊದಲು ರಾಜೀನಾಮೆ ಪತ್ರ ಪರಿಶೀಲಿಸಿದ್ದ ಸ್ಪೀಕರ್ ಕೆಲ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ ಎಂದು ತಿಳಿಸಿದ್ದರು.

ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಜು.11ರಂದು ಮುಂಬೈನಿಂದ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿ ಸ್ಪೀಕರ್​ಗೆ ಹೊಸ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಂದು ಅತೃಪ್ತರೊಂದಿಗೆ ನಡೆಸಿದ ಕಲಾಪಗಳನ್ನು ವಿಡಿಯೋ ಮಾಡಿಸಿದ್ದ ಸ್ಪೀಕರ್​ ಅದೆಲ್ಲವನ್ನೂ ಕೋರ್ಟ್​ಗೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಸುಪ್ರೀಂ ಮಧ್ಯಪ್ರವೇಶದ ಬಗ್ಗೆ ಸಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.

ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್​ ನೇತೃತ್ವದ ತ್ರಿಸದಸ್ಯ ಪೀಠ ಕೂಡ ಸ್ಪೀಕರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ಪೀಕರ್​ಗೆ ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಅಧಿಕಾರ ಇಲ್ಲವೇ ಎಂದು ಪ್ರಶ್ನಿಸಿತ್ತು. ಹಾಗೇ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು.

ನಿನ್ನೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಶಾಸಕರ ರಾಜೀನಾಮೆಯನ್ನು ತಕ್ಷಣ ಏಕೆ ತೀರ್ಮಾನಿಸಲಿಲ್ಲ, ಜು.6ಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ನಂತರ ಜು.11ಕ್ಕೆ ಸುಪ್ರೀಂಕೋರ್ಟ್​ಗೆ ದೂರು ಸಲ್ಲಿಸುವ ತನಕವೂ ಸ್ಪೀಕರ್​ ಸುಮ್ಮನಿದ್ದುದು ಏಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಹಾಗೇ ತೀರ್ಪನ್ನು ಇಂದು ಬೆಳಗ್ಗೆಗೆ ಕಾಯ್ದಿರಿಸಿತ್ತು.

ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ, ಸ್ಪೀಕರ್ ಪರ ಅಭಿಷೇಕ್ ಮನುಸಿಂಘ್ವಿ ಹಾಗೂ ಸಿಎಂ ಪರ ಡಾ. ರಾಜೀವ್ ಧವನ್ ಅವರು ವಾದ ಮಂಡಿಸಿದ್ದರು.

ಇಂದು ಸುಪ್ರೀಂ ಕುತೂಹಲ: ಗೆಲುವು ಸ್ಪೀಕರ್​ಗೋ ಶಾಸಕರಿಗೋ?, ಬೆಳಗ್ಗೆ 10.30ಕ್ಕೆ ತೀರ್ಪು

Leave a Reply

Your email address will not be published. Required fields are marked *