More

    ಸ್ಪೀಕರ್​ಗೆ ಜನಪ್ರತಿನಿಧಿಗಳ ಅನರ್ಹತೆ ಅಧಿಕಾರ ಬೇಡ

    ನವದೆಹಲಿ: ಸಂಸತ್ ಸದಸ್ಯರು ಮತ್ತು ಶಾಸಕರನ್ನು ಅನರ್ಹಗೊಳಿಸುವ ಪರಮಾಧಿಕಾರ ಸ್ಪೀಕರ್​ಗೆ ಇರುವುದು ಬೇಡ. ಅನರ್ಹತೆ ನಿರ್ಧರಿಸಲು ಕಾಯಂ ಅಥವಾ ಸ್ವತಂತ್ರ ಸಂಸ್ಥೆಯೊಂದನ್ನು ರಚಿಸುವುದು ಉತ್ತಮ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಸಂಸತ್ ಚಿಂತಿಸಿ, ಕಾಯ್ದೆ ಮಾರ್ಪಡಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.

    ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳ ಸ್ಪೀಕರ್ ರಾಜಕೀಯ ಪಕ್ಷದ ಟಿಕೆಟ್ ಮೇಲೆಯೇ ಗೆದ್ದು ಬಂದಿರುತ್ತಾರೆ. ಹೀಗಾಗಿ ಅವರು ಕೈಗೊಳ್ಳುವ ತೀರ್ವನದ ಬಗ್ಗೆ ಅನುಮಾನ ಹುಟ್ಟಿಕೊಳ್ಳುತ್ತಲೇ ಇರುವುದರಿಂದ ಇಂಥದ್ದೊಂದು ವ್ಯವಸ್ಥೆ ರೂಪಿಸುವ ಬಗ್ಗೆ ಸಂಸತ್ ಚಿಂತನೆ ನಡೆಸಬೇಕಿದೆ ಎಂದಿದೆ.

    ಮಣಿಪುರದ ಅರಣ್ಯ ಮತ್ತು ಪರಿಸರ ಸಚಿವ ತೌನಾವೊಜಮ್ ಶ್ಯಾಮಕುಮಾರ್ ಅವರ ಅನರ್ಹತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ತ್ರಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

    ನ್ಯಾಯಪೀಠ ಹೇಳಿದ್ದೇನು?

    ಸ್ಪೀಕರ್​ಗಳ ನಿರ್ಣಯದ ಮೇಲೆ ಅವರ ಪಕ್ಷದ ಒಲವು-ನಿಲುವು ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಶಾಸನಸಭೆಯ ಸದಸ್ಯರ ಅನರ್ಹತೆಯ ಸಂಪೂರ್ಣ ಅಧಿಕಾರವನ್ನು ನೀಡಬೇಕೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆದ್ದರಿಂದ ಅನರ್ಹತೆಯ ವಿಚಾರವನ್ನು ಸ್ಪೀಕರ್ ನಿರ್ಣಯಕ್ಕೆ ಬಿಡದೆ, ಸ್ವತಂತ್ರ ಇಲ್ಲವೆ ಕಾಯಂ ಸಂಸ್ಥೆಯೊಂದು ತೀರ್ವನಿಸುವುದು ನ್ಯಾಯೋಚಿತವಾಗುತ್ತದೆ ಮತ್ತು ಹೆಚ್ಚು ಪಾರದರ್ಶಕವಾಗಿರುತ್ತದೆ. ಇದನ್ನು ಸಂಸತ್ ಪರಾಮಶಿಸುವುದು ಒಳಿತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪಕ್ಷಾಂತರದಂಥ ವಿಷಯಗಳಲ್ಲಿ ಅನರ್ಹರಾಗುವ ಸಂಸದರು ಅಥವಾ ಶಾಸಕರು ಒಂದು ದಿನವೂ ಆ ಸ್ಥಾನದಲ್ಲಿ ಮುಂದುವರಿಯಲು ಬಿಡಬಾರದು ಎಂದು ಪೀಠ ಸ್ಪಷ್ಟಪಡಿಸಿತು.

    ಏನಿದು ಪ್ರಕರಣ?

    ಕಾಂಗ್ರೆಸ್​ನಿಂದ ಆಯ್ಕೆಯಾಗಿ ನಂತರ ಬಿಜೆಪಿ ಸೇರಿ ಸಚಿವರಾಗಿದ್ದ ಶ್ಯಾಮಕುಮಾರ್​ರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಕೋರಿತ್ತು. ಕಾಂಗ್ರೆಸ್ ಮನವಿಯನ್ನು ಮಣಿಪುರ ವಿಧಾನಸಭೆ ಸ್ಪೀಕರ್ ದೀರ್ಘ ಕಾಲದವರೆಗೆ ಇತ್ಯರ್ಥ ಪಡಿಸಲಿಲ್ಲ. ನಂತರ ಹೈಕೋರ್ಟ್, ಸ್ಪೀಕರ್ ನಡೆಯನ್ನು ಟೀಕಿಸಿತೆ ಹೊರತು, ಅರ್ಜಿ ಇತ್ಯರ್ಥ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆಹೋಗಿತ್ತು.

    ಕರ್ನಾಟಕದ ಪ್ರಕರಣ

    ಕಾಂಗ್ರೆಸ್ ಮತ್ತು ಜೆಡಿಎಸ್​ನ ಬಂಡಾಯ ಶಾಸಕರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ಕೆ.ಆರ್. ರಮೇಶ್​ಕುಮಾರ್ ಅಂಗೀಕರಿಸುತ್ತಿಲ್ಲ ಎಂದು ದೂರಿದ್ದ ಪ್ರಕರಣವನ್ನು ನ್ಯಾಯಪೀಠ ಇತ್ತೀಚೆಗೆ ಇತ್ಯರ್ಥಪಡಿಸಿತ್ತು. ನಂತರ ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವನ್ನೂ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts