ಆದಾಯದ ಮೂಲವಾಯ್ತು ಗೋಮೂತ್ರ!

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಅಚ್ಚರಿ ಆದರೂ ಇದು ಸತ್ಯ. ಕೊಡಗಿನ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋದೂರು ಗ್ರಾಮದಲ್ಲಿ ನೆಲೆಸಿರುವ ಶಿವಶಂಕರ್​ರಾವ್ ಕುಟುಂಬಕ್ಕೆ ಗೋಮೂತ್ರ ಆದಾಯವೇ ಮೂಲ. ಪ್ರತಿತಿಂಗಳು 35ರಿಂದ 40 ಸಾವಿರ ರೂ. ಗೋಮೂತ್ರ ಮಾರಾಟದಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಕಾಫಿ ಫಸಲು ಮತ್ತು ಬೆಲೆ ಕೈಕೊಟ್ಟ ಸಮಯದಲ್ಲಿ ಗೋಮೂತ್ರ ನಮ್ಮ ಖರ್ಚು-ವೆಚ್ಚ ನಿಭಾಯಿಸುತ್ತಿದೆ ಎಂಬ ಸಂತೃಪ್ತಿ ಈ ಕುಟುಂಬಕ್ಕಿದೆ. ಕೃಷಿ ಚಟುವಟಿಕೆ, ಗೊಬ್ಬರಕ್ಕಾಗಿ ಜಾನುವಾರು ಸಾಕುವವರ ನಡುವೆ ಇವರು ಗೋಮೂತ್ರಕ್ಕಾಗಿಯೇ ಗೋವು ಸಾಕುತ್ತಿರುವುದು ವಿಶೇಷ. ತರಕಾರಿ ಬೆಳೆಯಲು, ಕಾಫಿ ತೋಟಕ್ಕೆ ಸಾವಯವ ಗೊಬ್ಬರವಾಗಿ ಸಗಣಿ ಗೊಬ್ಬರ ಬಳಸುತ್ತಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ತೀವ್ರ ಬರಗಾಲ ಎದುರಾಗಿದ್ದ ಸಮಯದಲ್ಲಿ ಅಲ್ಲಿನ ಗೋಶಾಲೆಯಿಂದ ಲಾರಿಗಳ ಮೂಲಕ ಗೋವುಗಳನ್ನು ವಿವಿಧೆಡೆಗೆ ಸಾಗಿಸಲಾಯಿತು. ಅದೇ ವೇಳೆ, ಶಿವಶಂಕರ್ ನಾಲ್ಕು ದೇಸಿ ಗೋವುಗಳನ್ನು ಸಾಕಲು ಮೋದೂರು ಗ್ರಾಮಕ್ಕೆ ತಂದರು. ಗುಜರಾತ್ ಮೂಲದ ದೇಸಿ ತಳಿಯಾಗಿರುವ ಕಾಂಕ್ರೇಜ್ ಕಾಡು ಪ್ರದೇಶದಲ್ಲಿ ಬೆಳೆಯುವ ಜಾನುವಾರು. ಕೊಡಗಿನ ವಾತಾವರಣಕ್ಕೆ ಪೂರಕವಾದ ಈ ಗೋವುಗಳು ಶಿವಶಂಕರ್ ಕುಟುಂಬಕ್ಕೆ ಇಂದು ಆದಾಯ ತಂದುಕೊಡುತ್ತಿವೆ. ಪ್ರಸ್ತುತ ಕರುಗಳು ಸೇರಿದಂತೆ ಒಟ್ಟು 23 ಜಾನುವಾರುಗಳಿವೆ. ನಿತ್ಯ ಮಧ್ಯರಾತ್ರಿ ಹಾಗೂ ಮುಂಜಾನೆ 6 ಗಂಟೆ ಹೊತ್ತಿಗೆ ಹಾಲು ಕರೆಯುವ ಗೋವುಗಳಿಂದ ಗೋಮೂತ್ರ ಸಂಗ್ರಹಿಸಲಾಗುತ್ತದೆ. ಒಂದು ಗೋವು 5-6 ಲೀಟರ್ ಗೋಮೂತ್ರ ನೀಡುತ್ತದೆ. ನಿತ್ಯ 40-45 ಲೀಟರ್​ನಷ್ಟು ಗೋಮೂತ್ರ ಸಂಗ್ರಹವಾಗುತ್ತದೆ. ಇದನ್ನು ಸಂಸ್ಕರಣಾ ಘಟಕದಲ್ಲಿ ವ್ಯವಸ್ಥಿತವಾಗಿ ಶುದ್ಧೀಕರಿಸಲಾಗುತ್ತದೆ.

18 ಲೀಟರ್​ನಷ್ಟು ಗೋಮೂತ್ರವನ್ನು ಗೋಬರ್ ಗ್ಯಾಸ್​ಗೆ ಬಳಸುತ್ತಾರೆ. 16-18 ಲೀಟರ್​ನಷ್ಟು ಗೋಮೂತ್ರವನ್ನು ಶುದ್ಧೀಕರಿಸಲಾಗುತ್ತದೆ. 16 ಲೀಟರ್​ನಲ್ಲಿ 10 ಹಾಗೂ 18 ಲೀಟರ್​ನಲ್ಲಿ 12 ಲೀಟರ್​ನಷ್ಟು ಆರ್ಕಾ ಸಿದ್ಧಪಡಿಸುತ್ತಾರೆ. 50 ಲೀಟರ್ ಕ್ಯಾನ್​ನಲ್ಲಿ ಪರಿಶುದ್ಧ ಗೋಮೂತ್ರ ಶೇಖರಿಸಲಾಗುತ್ತದೆ. ಇದು 2 ವರ್ಷಗಳ ಕಾಲ ಸುರಕ್ಷಿತವಾಗಿರುತ್ತದೆ. ಮಾಲೂರಿನ ಮಾಗೋ ಪ್ರಾಡಕ್ಟ್ ಇಂಡಸ್ಟ್ರಿಸ್​ಗೆ ಲೀಟರ್​ಗೆ 60 ರೂ.ಗಳಂತೆ ಪ್ರತಿ ತಿಂಗಳು 600 ಲೀಟರ್​ನಷ್ಟು ಮಾರಾಟ ಮಾಡುತ್ತಾರೆ. ಯಾರೇ ಪರಿಶುದ್ಧ ಗೋಮೂತ್ರ ಕೇಳಿದರೂ ಇದೇ ದರದಲ್ಲಿ ನೀಡುತ್ತಾರೆ. ಮನೆ ಸಮೀಪದಲ್ಲಿಯೇ ಕೊಟ್ಟಿಗೆ ಕಟ್ಟಿಕೊಂಡಿದ್ದಾರೆ. ಮನೆ ಮಕ್ಕಳಂತೆ ಗೋವುಗಳ ಲಾಲನೆ-ಪಾಲನೆ ಮಾಡುತ್ತಾರೆ. ಪ್ರತಿಯೊಂದು ಗೋವು ಮನೆ ಜನರನ್ನು ಗುರುತಿಸುತ್ತವೆ. ಜಮೀನಿನಲ್ಲಿ ನಿತ್ಯ ಜಾನುವಾರುಗಳನ್ನು ಮೇಯಲು ಬಿಡುತ್ತಾರೆ. ಇದರಿಂದ ಇಲ್ಲಿರುವ ಜಾನುವಾರುಗಳು ಗಟ್ಟಿಮುಟ್ಟಾಗಿವೆ.

ಹಾಲು ಸ್ವಂತ ಬಳಕೆಗೆ ಮಾತ್ರ

ಪ್ರಸ್ತುತ ಎಂಟು ಗೋವುಗಳು ಹಾಲು ನೀಡುತ್ತಿವೆ. ಈ ಹಾಲು ಮಾರಾಟ ಮಾಡದೆ, ಸ್ವಂತ ಬಳಕೆಗೆ ಮಾತ್ರ ಬಳಸುತ್ತಿದ್ದಾರೆ. ಮನೆ ಬಳಕೆಗೆ ನಿತ್ಯ 6 ಲೀಟರ್ ಹಾಲು ಉಪಯೋಗಿಸುತ್ತಿದ್ದಾರೆ. ತಮ್ಮಲ್ಲಿ ಕೆಲಸಕ್ಕೆ ಇರುವ ಕಾರ್ವಿುಕರಿಗೂ ಉಚಿತವಾಗಿ ಹಾಲು ನೀಡುತ್ತಾರೆ. ನಾಯಿ, ಬೆಕ್ಕಿಗೂ ನಿತ್ಯ ಬೇಕಾದಷ್ಟು ಹಾಲು ನೀಡಲಾಗುತ್ತಿದೆ. ಇದರೊಂದಿಗೆ ಪರಿಶುದ್ಧ ತುಪ್ಪ ತಯಾರಿಸುತ್ತಾರೆ. ಎರೆಹುಳ ಗೊಬ್ಬರ, ಸಗಣಿ ಗೊಬ್ಬರ ಬಳಸಿ ಸಾವಯವ ಮಾದರಿಯಲ್ಲಿ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಮನೆ ಬಳಕೆ, ಕಾರ್ವಿುಕರ ಬಳಕೆ ಹಾಗೂ ಸ್ನೇಹಿತರು-ಪರಿಚಿತರಿಗೆ ಉಚಿತವಾಗಿ ತರಕಾರಿ ನೀಡುತ್ತಾರೆ.

ಸಂತಸದಲ್ಲಿ ಕುಟುಂಬ

ಗೋವು ಸಾಕಾಣಿಕೆಯಲ್ಲಿ ಮನೆಯ ಸರ್ವ ಸದಸ್ಯರೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ವಿಶೇಷ. ಗೋವು ಸಾಕಾಣಿಕೆ ಅನುಭವವನ್ನು ಪ್ರತಿಯೊಬ್ಬರೂ ಹಂಚಿಕೊಳ್ಳುತ್ತಾರೆ. ವಿಜ್ಞಾನ ಸಾಹಿತಿ ಜಿ. ಟಿ. ನಾರಾಯಣ ರಾವ್, ಹಿರಿಯ ನಾಗರಿಕರಾದ ಜಿ. ಟಿ. ರಾಘವೇಂದ್ರ ಅವರ ಕಿರಿಯ ಸಹೋದರ ಆಗಿರುವ ಜಿ. ಟಿ. ದಿವಾಕರ್​ರಾವ್ ಅವರ ಪುತ್ರ ಜಿ. ಡಿ. ಶಿವಶಂಕರ್​ರಾವ್, ಅವರ ಪತ್ನಿ ಸೌಮ್ಯ ಕೂಡ ಗೋವು ಸಾಕಾಣಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ವಿಶೇಷ. ಜಾನುವಾರು ಸಾಕಾಣಿಕೆ ಕ್ರಮ ಮತ್ತು ದೇಶೀಯ ಗೋವುಗಳಿಂದ ಆಗುತ್ತಿರುವ ಪ್ರಯೋಜನದ ಕುರಿತು ಖುದ್ದು ಅರಿತುಕೊಳ್ಳಲು ಆಸಕ್ತರು ಮೋದೂರು ಗ್ರಾಮಕ್ಕೆ ಭೇಟಿ ನೀಡಬಹುದು. ಶಿವಶಂಕರ್ ಸಂಪರ್ಕ ಸಂಖ್ಯೆ- 9480083272.

ಹದಿನೆಂಟು ವರ್ಷಗಳ ಹಿಂದೆ ನಾವು ಗೋವು ಸಾಕುತ್ತಿದ್ದೆವು. ಈಗ ಗೋವುಗಳು ನಮ್ಮನ್ನು ಸಾಕುತ್ತಿವೆ. ಗೋಮೂತ್ರ ಮಾರಾಟದಿಂದ ಮಾಸಿಕ 35 ರಿಂದ 40 ಸಾವಿರ ರೂ. ದೊರೆಯುತ್ತಿದೆ. ತೋಟ, ಕೃಷಿ, ತರಕಾರಿ ಬೆಳೆಯಲು ಸಗಣಿ ಗೊಬ್ಬರ ಬಳಸುತ್ತಿದ್ದೇವೆ. ಕಾಫಿ ಕೈಕೊಟ್ಟ ವೇಳೆ ಗೋವುಗಳು ಆದಾಯ ತಂದುಕೊಟ್ಟಿವೆ.

| ಶಿವಶಂಕರ್​ರಾವ್ ಮೋದೂರು

ಪರಿಶುದ್ಧ ಗೋಮೂತ್ರ ಆರೋಗ್ಯಕ್ಕೆ ಒಳ್ಳೆಯದು. ಕ್ಯಾನ್ಸರ್ ನಿಯಂತ್ರಣಕ್ಕೂ ಗೋಮೂತ್ರ ರಾಮಬಾಣ. ಶ್ರೀರಾಮಚಂದ್ರಪುರ ಮಠದ ಮಾರ್ಗದರ್ಶನದನ್ವಯ ದೇಸಿ ಗೋವು ಸಾಕುತ್ತಿದ್ದೇವೆ. ಮಾಸಿಕ 600 ಲೀಟರ್ ಪರಿಶುದ್ಧ ಗೋಮೂತ್ರ ಸಿಗುತ್ತಿದೆ. ಗೋವುಗಳ ಲಾಲನೆ- ಪಾಲನೆಯಲ್ಲಿ ಕುಟುಂಬದ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ.

| ಜಯಲಕ್ಷ್ಮೀ ರಾವ್ ಮೋದೂರು

One Reply to “ಆದಾಯದ ಮೂಲವಾಯ್ತು ಗೋಮೂತ್ರ!”

Comments are closed.