ಹಾನಗಲ್ಲ: ಕಾಶ್ಮೀರದಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಯೋಧ ರವಿಕುಮಾರ ಕೆಳಗಿನಮನಿ (33) ಸೋಮವಾರ ವೀರಮರಣ ಅಪ್ಪಿದ್ದಾರೆ.
ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ಯೋಧನ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಬಾಂಬ್ ದಾಳಿ
ಮಾ. 30ರಂದು ಕಾಶ್ಮೀರ ಸಮೀಪದ ಪಾಂಡೆ ಮುರುಗಾ ಎಂಬ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಯೋಧ ರವಿಕುಮಾರ ತೀವ್ರ ಗಾಯಗೊಂಡು, ಕಾಲು ಕೈ ಕಳೆದುಕೊಂಡಿದ್ದರು.
ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಕುಮಾರ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ರಾಮಪ್ಪ ಹಾಗೂ ಶಾಂತವ್ವ ದಂಪತಿಯ ಒಬ್ಬನೇ ಪುತ್ರನಾಗಿದ್ದ ರವಿಕುಮಾರ 2013ರಲ್ಲಿ ಸೇನೆಗೆ ಸೇರಿದ್ದರು.
ಸೈನ್ಯದಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಳೆದ 2 ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ರವಿಕುಮಾರ, ಅವರಿಗೆ ಪತ್ನಿ, ಮೂವರು ಸಹೋದರಿಯರಿದ್ದಾರೆ. \
ರವಿಕುಮಾರ ಗಾಯಗೊಂಡ ಸುದ್ದಿ ತಿಳಿದು ದೆಹಲಿಗೆ ತೆರಳಿದ ಸಹೋದರಿ ಹಾಗೂ ಅವರ ಭಾವ ಆಸ್ಪತ್ರೆಯಲ್ಲಿದ್ದು, ಉಪಚಾರದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.
ರವಿಕುಮಾರ ಫೆ. 21ರಿಂದ 27 ದಿನಗಳ ರಜೆಗೆ ಬ್ಯಾತನಾಳ ಗ್ರಾಮಕ್ಕೆ ಆಗಮಿಸಿದ್ದರು. ಮಾ. 19ರಂದು ಸೇವೆಗೆ ಮರಳಿದ್ದರು. ಆದರೆ, ಮಾ. 30ರಂದು ಬಾಂಬ್ ದಾಳಿ ನಡೆದಿತ್ತು.
ರವಿಕುಮಾರ ಅವರ ಮೃತದೇಹವನ್ನು ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಗೆ ತರಲಾಗುತ್ತಿದ್ದು, ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮಕ್ಕೆ ತರಲಾಗುತ್ತದೆ.
ನಂತರ ಯೋಧ ರವಿಕುಮಾರ ಕುಟುಂಬದ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಾನಗಲ್ಲ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಸಿದ್ಧತೆಗಳು ನಡೆಯುತ್ತಿವೆ.