ನಿವೇಶನ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ರಾಜೀವಗಾಂಧಿ ಆವಾಸ ಯೋಜನೆಯ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀನಗರ ಉದ್ಯಾನವನ ಜೋಪಡಪಟ್ಟಿಯ ರಹವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಕಳೆದ 20 ವರ್ಷಗಳಿಂದ ವಂಟಮೂರಿ ಕಾಲೋನಿಯ ಶ್ರೀನಗರ ಜೋಪಡಪಟ್ಟಿಯಲ್ಲಿ ವಾಸಿಸುತ್ತಿದ್ದೇವೆ. ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ವಾಸ ಮಾಡಲು ರಾಜೀವ ಆವಾಸ ಯೋಜನೆಯಡಿಯಲ್ಲಿ ಜಿ+3 ನಿವೇಶನ ನಿರ್ಮಾಣ ಮಾಡಿದ್ದಾರೆ. ಕೂಡಲೇ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಎನ್.ಜಯರಾಂ ಅವರು ಅರ್ಹ ಪಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ವಸತಿ ಮನೆಗಳನ್ನು ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಸರಕಾರ ಹೇಳಿದ ಹಣವನ್ನು ಭರಿಸಲು ಸಿದ್ಧರಿದ್ದರೂ ಬೇರೆಯವರಿಗೆ ನಿವೇಶನ ಹಂಚಿಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಕೂಡಲೇ ನಿವೇಶನ ಹಂಚಿಕೆ ಮಾಡದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ. ಮಾರುತಿ ಗೊಡಚಿ, ಬಸಪ್ಪ ಕರಡಿಗುದ್ದಿ, ರಮೇಶ ಮಾದರ, ರಮೇಶ ಪ್ಯಾಟಿ, ಭೀರಪ್ಪ ಚೌಡಕಿ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *