ಹಾಡಹಗಲೇ ಚಿನ್ನದ ಅಂಗಡಿ ಲೂಟಿಗೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು: ಮಾಲೀಕರ ಪತ್ನಿ ಮಾಡಿದ್ದೇನು ಗೊತ್ತಾ?

ಬೆಂಗಳೂರು: ವಿನಾಯಕ ಸರ್ಕಲ್​ ಬಳಿಯ ಸಾಮ್ರಾಟ್ ಜ್ಯುವೆಲರ್ಸ್​ ಚಿನ್ನದ ಅಂಗಡಿಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಫೈರಿಂಗ್​ ನಡೆಸಿದ್ದಾರೆ.

ಮಧ್ಯಾಹ್ನ 2.30ರ ವೇಳೆಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಈ ಕೃತ್ಯ ನಡೆಸಿದ್ದಾರೆ. ಕಪ್ಪುಬಣ್ಣದ ಪಲ್ಸರ್​ನಲ್ಲಿ ಬಂದಿದ್ದ ಮೂವರಲ್ಲಿ ಓರ್ವ ಹೆಲ್ಮೆಟ್​ ಧರಿಸಿದ್ದರೆ, ಇನ್ನಿಬ್ಬರು ಮಂಕಿಕ್ಯಾಪ್​ ಧರಿಸಿಕೊಂಡಿದ್ದರು. ದರೋಡೆಗೆಂದು ಬಂದವರು ಮೊದಲು ಗನ್​ ತೆಗೆದು ಹೆದರಿಸಿದ್ದಾರೆ. ಅದನ್ನು ನೋಡುತ್ತಲೇ ಮಳಿಗೆಯ ಮಾಲೀಕ ಕೂಗಿಕೊಂಡಿದ್ದಾರೆ. ತಕ್ಷಣವೇ ದುಷ್ಕರ್ಮಿಗಳು ಮಳಿಗೆಯ ಗೋಡೆಗೆ ಒಂದು ಸುತ್ತು ಗುಂಡು ಹಾರಿಸಿದರು. ಅದನ್ನು ನೋಡಿದ ಮಾಲೀಕರ ಪತ್ನಿ ಆ ದುಷ್ಕರ್ಮಿಗಳ ಮೇಲೆ ಕುರ್ಚಿಗಳನ್ನು ಎಸೆದು ಚೀರಿಕೊಂಡಿದ್ದಾರೆ.

ಗಲಾಟೆ ಹೆಚ್ಚುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್‌ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು ಅಪರಾಧಿಗಳನ್ನು ಆದಷ್ಟು ಬೇಗ ಪತ್ತೆಹಚ್ಚುತ್ತೇವೆ. ಮಳಿಗೆಯಿಂದ ಅವರು ಏನನ್ನೂ ತೆಗೆದುಕೊಂಡು ಹೋಗಿಲ್ಲ ಎಂದು ಚೇತನ್​ ಸಿಂಗ್ ರಾಥೋಡ್​ ತಿಳಿಸಿದ್ದಾರೆ.

Leave a Reply

Your email address will not be published. Required fields are marked *