ಭಾರತೀಯ ಸಂಸ್ಕೃತಿ-ಆಚರಣೆಗಳು ಬಹು ವಿಶಿಷ್ಟವಾದುದು. ಜೀವನದ ಹಲವು ಕ್ಷಣ, ಸಂದರ್ಭಗಳನ್ನು ಸಂಸ್ಕೃತಿಯೊಂದಿಗೆ ಮಿಳಿತಗೊಳಿಸಿ ಮಾಡುವ ಆಚರಣೆಗಳು ಬದುಕಿಗೆ ಮತ್ತಷ್ಟು ಉಲ್ಲಾಸ, ಹುರುಪನ್ನು ನೀಡುವಂಥವುಗಳಾಗಿವೆ. ಮನೆಯಲ್ಲಿ ಮಗುವಿನ ಜನನವಾದಾಗ ಆ ಮಗುವಿಗೆ ಹೆಸರನ್ನು ಇಡುವ ಅಂದರೆ ನಾಮಕರಣದ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಎಲ್ಲರೂ ಆಚರಿಸುತ್ತಾರೆ. ನಾಮಕರಣದಂದು ಕುಟುಂಬ, ಬಂಧು-ಮಿತ್ರರು, ಊರವರನ್ನೆಲ್ಲ ಕರೆದು ಹಬ್ಬದಂತೆ ಸಿಹಿಯೂಟ ಮಾಡುತ್ತಾರೆ. ಇದು ಮಗುವಿಗೆ ಹೆಸರಿಡುವ ಕಾರ್ಯಕ್ರಮವಾದರೂ ಅದರ ಹಿಂದಿನ ಆಸೆ, ಆಕಾಂಕ್ಷೆಗಳು, ಉದ್ದೇಶ-ಆಶಾಭಾವನೆಗಳು ಸಾಕಷ್ಟು ಇರುತ್ತವೆ. ಮಗುವಿನ ತಂದೆ-ತಾಯಿಯು ನಮ್ಮ ಮಗ ಅಥವಾ ಮಗಳು ಬೆಳೆದು ದೊಡ್ಡವಳಾಗಿ ಉತ್ತಮ ಜೀವನ ನಡೆಸಿ ಕೀರ್ತಿ ಗಳಿಸಲಿ. ನಮ್ಮ ಮನೆ, ಮನೆತನಕ್ಕೆ, ಊರಿಗೆ ಹೆಸರನ್ನು ತರುವಂತಾಗಲಿ ಎಂದು ಆಶಿಸುತ್ತಾರೆ. ಅಜ್ಜ-ಅಜ್ಜಿಯರು ಕೂಡ ತಮ್ಮ ವಂಶೋದ್ಧಾರಕ ಮಗುವಿಗೆ ಹೆಸರನ್ನು ಸೂಚಿಸಿ ದೀಪದಂತೆ ಬೆಳಕು ಪಸರಿಸಲಿ ಎಂದು ಹಾರೈಸುತ್ತಾರೆ. ಅಲ್ಲದೆ, ನಾಮಕರಣ ಮಾಡಲಾದ ಹೆಸರಿನೊಂದಿಗೆ ತಮ್ಮ ವಂಶ, ಕುಲದ ಹೆಸರನ್ನು ಜೋಡಣೆ ಮಾಡುತ್ತಾರೆ. ಧೀಮಂತ ವ್ಯಕ್ತಿಗಳ ಹೆಸರಿಡುವ ಮೂಲಕ ತಮ್ಮ ಮಕ್ಕಳು ಕೂಡ ಅವರಂತೆಯೇ ಆಗಲಿ ಎಂದು ಇಚ್ಛಿಸುತ್ತಾರೆ. ಮನೆಯಲ್ಲಿ ಬಡತನವಿದ್ದರೂ ಮಗನಿಗೆ ಕುಬೇರ ಎಂದು ಹೆಸರಿಟ್ಟು, ಆತನಾದರೂ ಸಿರಿ ಸಂಪತ್ತು ಗಳಿಸುವಂತಾಗಲಿ ಎಂದು ಪ್ರಾರ್ಥಿಸುತ್ತಾರೆ.
ಕೆಲವರು ತಮ್ಮ ನೆಚ್ಚಿನ ಆಟಗಾರರ, ಚಲನಚಿತ್ರ ಕಲಾವಿದರ ಹೆಸರಿಡುವುದುಂಟು. ಮಗುವಿನ ತಂದೆ-ತಾಯಿಯ ಹೆಸರಿನಲ್ಲಿರುವ ಅಕ್ಷರಗಳನ್ನು ಬಳಸಿಕೊಂಡು ಮಕ್ಕಳಿಗೆ ಹೆಸರಿಡುತ್ತಾರೆ. ಇನ್ನೂ ಕೆಲವರು ತಮ್ಮ ಆತ್ಮೀಯ ಗೆಳೆಯ/ಗೆಳತಿಯ ಹೆಸರನ್ನು ತಮ್ಮ ಮಕ್ಕಳಿಗೆ ಇಡುವವರಿದ್ದಾರೆ. ಅವಿಸ್ಮರಣೀಯ ಘಳಿಗೆಗಳನ್ನು ಕೂಡ ಮಕ್ಕಳಿಗೆ ಹೆಸರಿಡುವ ಮೂಲಕ ಚಿರಸ್ಥಾಯಿಯಾಗಿಸುವವರಿದ್ದಾರೆ. ಹೇಗೆಂದರೆ ಮೊನ್ನೆಯಷ್ಟೇ ಭಾರತವು ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭಲ್ಲಿ ಹುಟ್ಟಿದ ಮಕ್ಕಳಿಗೆ ವಿಕ್ರಮ್ ಮತ್ತು ಪ್ರಗ್ಯಾನ್ ಎಂದು ನಾಮಕರಣ ಮಾಡಿದ್ದಾರೆ.
ಆದರೆ ಹೆಸರಲ್ಲೇನಿದೆ ಎಂದು ಸಾಮಾನ್ಯವಾಗಿ ಹೇಳಿಬಿಡಬಹುದು. ಯಾವ ಹೆಸರಾದರೂ ಸರಿ, ಕರೆಯುವುದಕ್ಕೆ ಒಂದು ಹೆಸರು, ಕೇಳುವುದಕ್ಕೆ ಒಂದು ಹೆಸರು, ಗುರುತಿಸುವುದಕ್ಕೆ ಒಂದು ಹೆಸರು ಸಾಕಲ್ಲವೇ! ಎನ್ನುವುದು ಸಾಮಾನ್ಯವಾಗಿ ನಮ್ಮ ನಂಬಿಕೆ. ಮಗು ಹುಟ್ಟುವ ಮೊದಲೇ ಗಂಡಾದರೆ ಹೀಗೆ, ಹೆಣ್ಣಾದರೆ ಹಾಗೆ ಹೆಸರಿಡೋಣವೆಂದು ಸಾಕಷ್ಟು ಪೂರ್ವ ಸಿದ್ಧತೆಗಳು ಆಗಿರುತ್ತವೆ. ಈಗಂತೂ ವಿದೇಶದಲ್ಲಿ ಮಾತ್ರವಲ್ಲದೆ, ನಮ್ಮ ದೇಶದಲ್ಲೂ ಮಗು ಹುಟ್ಟಿದ ತಕ್ಷಣ ಹೆಸರಿಟ್ಟು ಬಿಡುತ್ತಾರೆ. ಯಾಕೆಂದರೆ ಮಗು ಬೆಳೆಯುತ್ತ-ಬೆಳೆಯುತ್ತ ಬದಲಾಗಿ ಬಿಡಬಹುದು. ಹಾಗಾಗಿ ಇದೀಗ ಆಸ್ಪತ್ರೆಗಳಲ್ಲೇ ಮಗು ಹುಟ್ಟಿದ ತಕ್ಷಣ ಹೆಸರು ಇಡಬೇಕು ಎಂದು ನಿರ್ಣಯಿಸಿ ಬಿಡುತ್ತಾರೆ.
ನಮ್ಮ ಸಂಪ್ರದಾಯದಲ್ಲಿ ನಾಮಕರಣ ಎಂಬ ವಿಧಿ ಮಾಡಿ, ಈ ವಿಧಿಯಲ್ಲಿ ನಾಮಕರಣಕ್ಕೆ ಸೂಕ್ತವಾದ ಹೆಸರನ್ನು ಸಾಮಾನ್ಯವಾಗಿ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಅಕ್ಷರವನ್ನು ಜ್ಯೋತಿಷಿಯವರು, ವಿದ್ವಾಂಸರ ಕೇಳಿಕೊಂಡು, ಅವರು ಸೂಚಿಸಿದ ಅಕ್ಷರದಿಂದ ಆರಂಭಗೊಳ್ಳುವ ಹೆಸರದಿಡುವುದು ಸಾಮಾನ್ಯ. ಲ, ಲ, ಲಿ, ಲೋ ಎಂದು ಬಂದರೆ ಲೋಕೇಶ ಎಂದು ಇಡುತ್ತಾರೆ. ಹಿಂದೆಲ್ಲ ಹೆಸರು ಇಡುವುದರ ಹಿಂದೆ ಅನೇಕ ಯೋಚನೆಗಳು ಇದ್ದವು. ಕುಲ ದೇವರು, ಗ್ರಾಮದೇವರು, ಇಷ್ಟದೇವರ ಹೆಸರನ್ನು ಇಟ್ಟು ನಿರಾಳರಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನ್ಮ ನಕ್ಷತ್ರಕ್ಕೊಂದು ಹೆಸರು, ಶಾಲಾ-ಕಾಲೇಜು ವ್ಯವಹಾರ ನಾಮ (ಕರೆಯುವುದಕ್ಕೆ) ಒಂದು ಹೆಸರು ಇಡುತ್ತಿದ್ದೇವೆ. ಅಲ್ಲದೆ, ಮನೆಯಲ್ಲಿ ಮುದ್ದಿನಿಂದ ಕರೆಯುವ ಸಲುವಾಗಿ ಅಪ್ಪು, ಪುಟ್ಟ, ಅಮ್ಮಿ, ಪಮ್ಮಿ ಹೀಗೆ ಹೆಸರನ್ನು ಮತ್ತಷ್ಟು ಶಾರ್ಟ್ ಮಾಡುವುದುಂಟು.
ಹೆಸರಿನ ಮಹತ್ವ ಎಷ್ಟೆಂದರೆ- ಈ ಹೆಸರಿನಿಂದ ವ್ಯಕ್ತಿಯನ್ನು ಮಾತ್ರವಲ್ಲದೆ ಅವರಲ್ಲಿನ ವ್ಯಕ್ತಿತ್ವವನ್ನು ಗುರುತಿಸುತ್ತೇವೆ. ಅದಕ್ಕಾಗಿ ಹೆಸರು ಇಡಲು ಹೆತ್ತವರು ಅನೇಕ ಬಾರಿ ಯೋಚಿಸುತ್ತಾರೆ. ಹೆಸರಿಡುವ ಮೊದಲು ಅನೇಕ ಪರಿಶೋಧನೆ, ತಮ್ಮ ಆಪ್ತೇಷ್ಟರಲ್ಲಿ ಕೇಳುತ್ತಾರೆ, ರ್ಚಚಿಸುತ್ತಾರೆ. ಪುರಾಣಗಳಲ್ಲಿ ಗಮನಿಸುವುದಾದರೆ ಮಹಾಭಾರತದಲ್ಲಿ ಅನೇಕ ಹೆಸರುಗಳು ಬರುತ್ತವೆ. ಅದರಲ್ಲಿ ನಿಜವಾಗಿಯೂ ಹೆಸರಿಡಲು ಕಷ್ಟ ಆಗಿರಬಹುದು ಎಂಬುದಾದರೆ ಬಹುಶಃ ಕೌರವರ ಹೆತ್ತವರಿಗೆ. ಅವರಿಗೆ ನೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು. ಈ ನೂರು ಹೆಸರನ್ನು ಗುರುತಿಸಿ ಕರೆಯುವಂತಹದ್ದು ಬಹಳ ಕಷ್ಟದ ಕೆಲಸವೇ ಸರಿ. ಆದರೆ, ನೂರು ಜನರ ಹೆಸರನ್ನು ಹೇಳದೆಯೇ ಕೇವಲ ಕೌರವರು ಎಂದು ಹೆಸರಿನಿಂದ ಅವರೆಲ್ಲರನ್ನು ಗುರುತಿಸುತ್ತಾರೆ.
ಸಾಮಾನ್ಯವಾಗಿ ಹೆಸರಿಡುವಾಗ ಒಳ್ಳೆಯ ಹೆಸರನ್ನೇ ಆಯ್ಕೆ ಮಾಡುತ್ತಾರೆ. ಯಾಕೆಂದರೆ ಅದು ವ್ಯಕ್ತಿತ್ವದ ಕೈಗನ್ನಡಿಯಂತೆ ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಹೆಸರು ಕೂಡ ಒಂದು ಅರ್ಥ ಹೊಂದಿದೆ. ಕೆಲವು ಸಂದರ್ಭಗಳಲ್ಲಿ ಹೆಸರು ಧರ್ಮ, ಸಮಾಜ, ಮೌಲ್ಯವನ್ನು ಪ್ರತಿನಿಧಿಸುತ್ತದೆ. ಒಬ್ಬ ವ್ಯಕ್ತಿಯ ಹೆಸರು ಕೇಳಿದಾಗಲೇ ಗೌರವದ ಭಾವನೆ ಮೂಡಿದರೆ, ಇನ್ನು ಕೆಲವರ ಹೆಸರು ಕೇಳಿದರೆ ಬೇಸರವೂ ಮೂಡುತ್ತದೆ. ಯಾಕೆಂದರೆ ಅವರವರ ಸ್ವಭಾವಕ್ಕೆ ಅನುಗುಣವಾಗಿ ನಮ್ಮಲ್ಲಿ ಗೌರವ ಅಥವಾ ತಿರಸ್ಕಾರದ ಭಾವನೆ ಮೂಡುತ್ತದೆ. ನಾವು ಕಂಡ ಹಾಗೆ ಯಾರು ಕೂಡ ದುರ್ಯೋಧನನ ಹೆಸರು ಇಟ್ಟುಕೊಳ್ಳುವುದಿಲ್ಲ. ದುರ್ಯೋಧನನ ಆ ಹೆಸರಿನಲ್ಲಿ ಏನೂ ದೋಷ, ಸಮಸ್ಯೆಗಳು ಇರದಿದ್ದರೂ ಆ ಹೆಸರನ್ನು ಇಟ್ಟುಕೊಂಡಿದ್ದಾತನ ವ್ಯಕ್ತಿತ್ವದ ಪರಿಣಾಮವಾಗಿ ಯಾರೂ ಇಷ್ಟಪಡುವುದಿಲ್ಲ. ಹಠಮಾರಿ, ತನ್ನ ಸ್ವಭಾವವನ್ನು ಇಚ್ಛಾನುಸಾರವಾಗಿ ಉಪಯೋಗಿಸುತ್ತಾನೆ. ಯಾರಿಗೆ ಹಿಂಸೆ ಆದರೂ ತಾನು ಸುಖವಾಗಿ ಇರಬೇಕು ಎಂದು ಬಯಸುವವನು ಎಂಬ ಭಾವನೆ ಆ ಹೆಸರು ಕೇಳಿದಾಗ ಬರುತ್ತದೆ. ಹಿಂಸೆಯೇ ಕೆಟ್ಟದ್ದು. ಹಿಂಸೆಯನ್ನು ಆನಂದಿಸುವವರನ್ನು ನಾವು ಯಾವಾಗಲೂ ಇಷ್ಟಪಡುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ದುಷ್ಟರಿಗೆ ಶಿಕ್ಷೆ ನೀಡಿ ಧರ್ಮ ಉಳಿಸುವ ದೇವರ ಹೆಸರನ್ನು ಹೆಚ್ಚಾಗಿ ಇಡಲಾಗುತ್ತದೆ. ಹೆಸರು ಕರೆಯುವ ನೆಪದಲ್ಲಿ ದೇವರನ್ನು ಸ್ತುತಿಸಿದ ಹಾಗೆಯೂ ಆಗುತ್ತದೆ ಎಂಬ ಒಂದು ಭಕ್ತಿಯೂ ಅದರಲ್ಲಿ ಅಡಗಿದೆ. ಮಂಜುನಾಥ ಎಂಬ ಹೆಸರು ಬಹಳ ಸಾಮಾನ್ಯವಾಗಿ ಇಡುತ್ತಾರೆ. ಅದನ್ನು ಹತ್ತು ಸಲ ಕರೆದರೆ ಹತ್ತು ಸಲ ನಾಮಸ್ಮರಣೆ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅನೇಕರದ್ದು.
ಒಬ್ಬ ನಾಸ್ತಿಕನಿದ್ದ. ಒಂದು ದಿನವೂ ಆತ ದೇವರ ಪೂಜೆ-ಪುರಸ್ಕಾರ ಮಾಡಿದವನಲ್ಲ. ಅನೇಕ ವಾರಗಳ ಕಾಲ ಮಲಗಿದ್ದಾಗ ಆತ ಒಂದು ದಿನ ಮರಣವನ್ನಪ್ಪಿದ. ಆಗ ಪ್ರತ್ಯಕ್ಷರಾದ ಯಮ ಕಿಂಕರರು ಆತನನ್ನು ಯಮಧರ್ಮರಾಜನಲ್ಲಿಗೆ ಕರೆದೊಯ್ದರು. ಆತನ ಪಾಪ-ಪುಣ್ಯದ ಫಲವನ್ನು ಲೆಕ್ಕ ಹಾಕಿಯಾದ ಮೇಲೆ ಆತನನ್ನು ಸ್ವರ್ಗಕ್ಕೆ ಕಳುಹಿಸಿಕೊಡುವಂತೆ ತಿಳಿಸಲಾಯಿತು. ಆಗ ಅಲ್ಲೊಬ್ಬ ಕೇಳಿದ, ‘ಸ್ವಾಮಿ ಯಮಧರ್ಮರಾಯ, ಆತ ನಾಸ್ತಿಕ. ದೇವರ ಮೇಲೆ ಯಾವ ಗೌರವ, ಭಕ್ತಿಗಳೂ ಇಲ್ಲ. ಮತ್ತೆ ಯಾವ ಕಾರಣದಿಂದ ಆತನನ್ನು ಸ್ವರ್ಗಕ್ಕೆ ಕಳುಹಿಸಿಕೊಟ್ಟಿರುವಿರೀ?’ ಎಂದು ಪ್ರಶ್ನಿಸಿದ. ಆಗ ಯಮಧರ್ಮರಾಯನು, ಆತ ನಾಸ್ತಿಕನೇ ಇರಬಹುದು. ಆತ ತಾನು ಸಾಯುವ ಸಂದರ್ಭದಲ್ಲಿ ಶ್ರೀಮಾನ್ ನಾರಾಯಣನ ಧ್ಯಾನ ಮಾಡಿದ. ಹಾಗಾಗಿ ಅವನ ಪಾಪ-ದೋಷಗಳೆಲ್ಲ ಪರಿಹಾರವಾಗಿ ಸ್ವರ್ಗ ಸೇರುವಂತಾಯಿತು ಎಂದ.
‘ಸ್ವಾಮೀ, ಅದು ಆತನ ಮಗನ ಹೆಸರಲ್ಲವೇ. ತಾನು ಸಾಯುವ ಹೊತ್ತಿಗೆ ಮಗನ ಹೆಸರು ಕೂಗಿಕೊಂಡದ್ದಷ್ಟೇ ಅಲ್ಲವೇ’ ಎಂದು ಮರು ಪ್ರಶ್ನಿಸಿದ. ಆಗ ಯಮದೇವನು ‘ಅದು ಮಗನಿಗೆ ಇಟ್ಟಿರುವ ಹೆಸರಾದರೂ ಅದು ಶ್ರೀಮನ್ನಾರಾಯಣನ ಹೆಸರಲ್ಲವೇ. ಆತ ಮೃತನಾಗುವ ವೇಳೆ ನಾರಾಯಣ ಎಂದು ಬಹು ಪ್ರೀತಿಯಿಂದ ಕೂಗಿಕೊಂಡ. ಅದು ಕ್ಷೀರಸಾಗರದಲ್ಲಿದ್ದ ಭಗವಂತನಿಗೆ ಅರ್ಪಿತವಾಗಿ ಆತ ಪ್ರಸನ್ನಗೊಂಡು ಸ್ವರ್ಗ ಪ್ರಾಪ್ತಿ ಕರುಣಿಸಿದ. ನೋಡು ಭಗವಂತನ ಲೀಲೆಯೆಂದರೆ ಇದೇ ಅಲ್ಲವೇ’ ಎಂದ ಯಮಧರ್ಮರಾಯ. ಭಗವಂತನ ನಾಮಸ್ಮರಣೆಯಿಂದ ಮುಕ್ತಿ ಹೊಂದಿ ಪರಮ ಪಾವನವಾದವರು ಅನೇಕರಿದ್ದಾರೆ. ಭಕ್ತ ಕುಂಬಾರ, ಕೋಳೂರ ಕೊಡಗೂಸು, ಭಕ್ತ ಪ್ರಹ್ಲಾದ ಹೀಗೆ ತಮ್ಮ ಭಕ್ತಿಯಿಂದಲೇ ದೇವರ ನಾಮ ಹೇಳಿ ಬದುಕನ್ನು ಸಾರ್ಥಕಗೊಳಿಸಿಕೊಂಡವರು ಅನೇಕರಿದ್ದಾರೆ.
ಹಿಂದೆಲ್ಲ ಉದ್ದುದ್ದ ಹೆಸರುಗಳನ್ನು ಇಡುತ್ತಿದ್ದರು. ಆದರೆ, ಇಂದು ಆಧುನಿಕ ಕಾಲದಂತೆ ಚಿಕ್ಕದಾದ ಎರಡಕ್ಷರದ ಹೆಸರುಗಳನ್ನು ಇಡುವ ಕಾಲಘಟ್ಟಕ್ಕೆ ತಲುಪಿದ್ದೇವೆ. ಒಂದು ಕಾಲದಲ್ಲಿ ಹೆಚ್ಚಾಗಿ ಚಿಂತನೆ ಮಾಡದೆ ದೇವರನ್ನು ಪ್ರಧಾನವಾಗಿರಿಸಿಕೊಂಡೇ ಹೆಸರುಗಳನ್ನು ಇಟ್ಟುಬಿಡುತ್ತಿದ್ದರು. ಪುರಂದರ, ವಿಠಲ, ಹರಿನಾರಾಯಣದಾಸ, ಗೋಪಾಲ, ಕೃಷ್ಣ ಹೀಗೆ ಹೆಸರುಗಳನ್ನು ಹೊಂದಿಸುತ್ತಿದ್ದರು. ಕೆಲವೊಮ್ಮೆ ಎರಡು ಮೂರು ದೇವರ ಹೆಸರುಗಳನ್ನು ಜೋಡಿಸಿ ಒಂದು ಹೆಸರು ಇಡುತ್ತಿದ್ದರು. ಪುರಾಣೇತಿಹಾಸಗಳಿಂದ ಹೆಸರನ್ನು ಆಯ್ದುಕೊಂಡು ಹೊಸ ಹೆಸರು ಸೃಷ್ಟಿಸುತ್ತಿದ್ದರು. ಆ ಕಾಲದ ಹೆಸರುಗಳೂ ಹಳೆಯದೆನಿಸದೆ ಇಂದಿಗೂ ಸಾಕಷ್ಟು ಮನ್ನಣೆ ಹೊಂದಿರುವುದನ್ನು ಗಮನಿಸಬಹುದು. ಏಕಲವ್ಯ, ಅಭಿಮನ್ಯು, ಅರ್ಜುನ ಹೀಗೆ ಹಲವು ನಾಮಗಳಿವೆ.
ಈ ಹೆಸರಿನೊಂದಿಗಿರುವ ನಂಟು ಅಪ್ಯಾಯಮಾನವಾದದ್ದು. ನಮ್ಮ ಮನೆಯ ಹೆಸರನ್ನು ಅಥವಾ ತಂದೆ-ತಾಯಿಯ ಹೆಸರನ್ನು ಹೇಳಿ, ‘ಓ ನೀವು ಅವರ ಮಕ್ಕಳಾ’ ಎಂದು ಪ್ರೀತಿ-ಗೌರವ ತೋರಿದರೆ ಆಗುವ ಖುಷಿ ಅಷ್ಟಿಷ್ಟಲ್ಲ. ಕೆಲವೊಮ್ಮೆ ಪರಿಚಿತರ ಹೆಸರು ಹೇಳಿಕೊಂಡೇ ಬಾಂಧವ್ಯಗಳು ವೃದ್ಧಿಯಾಗುತ್ತವೆ. ‘ಅವರು ನಮ್ಮ ಮಾವ ಆಗಬೇಕು, ಅವರು ನಮಗೆ ಬಹಳ ಹತ್ತಿರ ಸಂಬಂಧಿ, ಓ ಅವರು ನಮಗೆ ಗೊತ್ತು.. ನಾವೆಲ್ಲ ಆವಾಗ ಒಟ್ಟಿಗೆ ಇದ್ವೀ’ ಎಂದೆನ್ನುತ್ತಾ ನೆನಪುಗಳ ಬುತ್ತಿ ಬಿಚ್ಚುವವರು ಅನೇಕರಿದ್ದಾರೆ. ಇನ್ನು ಜನಸಂದಣಿಯಲ್ಲಿ ನಮಗಿಷ್ಟವಾದ ವ್ಯಕ್ತಿಯ ಹೆಸರನ್ನು ಯಾರಾದರೂ ಕೂಗಿದರೆ ಒಂದೊಮ್ಮೆ ಕಣ್ಣುಗಳೆರಡು ಅತ್ತ ಹೋಗದೇ ಇರದು. ಅವರು ನಮ್ಮ ಆಪ್ತರು ಇರಬಹುದೇ ಎಂಬ ಭಾವನೆ ಮೂಡುತ್ತವೆ. ಆತ್ಮೀಯರ ಹೆಸರು ಕೇಳಿದೊಡನೆ ಮನದಲ್ಲಿ ಸಂತೋಷದ ಭಾವ ಸ್ಪುರಿಸುವುದುಂಟು. ತಮ್ಮ ನೆಚ್ಚಿನ ಗುರುಗಳು, ಗೆಳೆಯ-ಗೆಳತಿಯರು, ಪ್ರೀತಿಪಾತ್ರರು ಹೀಗೆ ಮನಸ್ಸಿಗೆ ಅತ್ಯಾಪ್ತರಾಗಿರುವವರ ಹೆಸರು ಎಂದಿಗೂ ಮನದಲ್ಲಿ ಅಚ್ಚಳಿಯದೇ ಇರುತ್ತದೆ. ಮಾತ್ರವಲ್ಲದೆ, ಆ ಹೆಸರಿನೊಂದಿಗೆ ಯಾವುದೋ ಒಂದು ಅವಿನಾಭಾವ ನಂಟು ಬೆಸೆದುಕೊಂಡಿರುತ್ತದೆ.
ಹಿಂದೆಲ್ಲ ಕೆಲಸ ಗಿಟ್ಟಿಸಿಕೊಳ್ಳಲು ಹೆಸರೇ ಸಾಕಾಗುತ್ತಿತ್ತು. ಈಗಿನಂತೆ ಶಿಫಾರಸು ಪತ್ರದ ಅಗತ್ಯವಿರಲಿಲ್ಲ. ಸ್ವಾಮಿ ನಮ್ಮೂರ ಶ್ಯಾನುಬೋಗರು, ಶಾಲಾ ಹೆಡ್ವಾಸ್ಟರ್ ಅಥವಾ ಇಂತಿಂಥವರು ನಿಮ್ಮನ್ನು ಭೇಟಿಯಾಗೋಕೆ ಹೇಳಿದ್ರು. ಕೆಲಸ ಆಗುತ್ತದೆ ಅಂದು ಎಂದು ವರದಿ ಒಪ್ಪಿಸಿದಾಕ್ಷಣ ಕೆಲಸ ಸಿಕ್ಕೇ ಬಿಡುತ್ತಿತ್ತು. ಆದರೆ, ಈಗ ಉದ್ಯೋಗಾಕಾಂಕ್ಷಿಯ ಕೌಶಲವೇ ಪರಿಗಣಿಸಲ್ಪಡುವುದರಿಂದ ಶಿಫಾರಸುಗಳಿಗೆ ಅಷ್ಟೇನೂ ಮನ್ನಣೆ ಇಲ್ಲವಾಗಿದೆ. ಕೆಲವೊಮ್ಮೆ ಹೆಸರಿನಿಂದ ವ್ಯಕ್ತಿಗೆ ಬೆಲೆ ಬಂದರೆ ಇನ್ನು ಕೆಲವು ಸಲ ವ್ಯಕ್ತಿಯಿಂದಾಗಿ ಹೆಸರಿಗೆ ಗೌರವ ದೊರೆಯುತ್ತದೆ.
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಯವರ ಹೆಸರು ಜಗದ್ವಿಖ್ಯಾತವಾದುದು ಎಂಬುದರಲ್ಲಿ ಅನುಮಾನ ಎಳ್ಳಷ್ಟೂ ಇಲ್ಲ. ಬಹುಶಃ ನನಗನ್ನಿಸಿದ ಪ್ರಕಾರ ಅವರ ಹೆಸರು ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಅಜರಾಮರವಾಗಿದೆ. ಬಾಪೂಜಿಯವರ ನೆನಪಿಗೋಸ್ಕರ ನಮ್ಮಲ್ಲಿ ರಸ್ತೆಗಳಿಗೆಲ್ಲ ಮಹಾತ್ಮಾ ಗಾಂಧೀಜಿ (ಎಂ.ಜಿ) ರಸ್ತೆ ಎಂದು ಹೆಸರನ್ನಿಡುವುದುಂಟು. ಅಂತೆಯೇ ವಿಶ್ವದ ಅನೇಕ ದೇಶಗಳಲ್ಲಿ ಅವರ ಪ್ರತಿಮೆಗಳನ್ನು ಸ್ಥಾಪಿಸಿರುವುದಲ್ಲದೆ, ರಸ್ತೆಗಳಿಗೂ ಅವರ ಹೆಸರನ್ನಿಟ್ಟಿದ್ದಾರೆ. ನಮ್ಮಲ್ಲೂ ಅಷ್ಟೇ ಯಾವುದೇ ಊರಿಗೆಯೇ ಹೋಗಲಿ ಅಲ್ಲೊಂದು ಎಂ.ಜಿ ರೋಡ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹೀಗೆ ವ್ಯಕ್ತಿಯೊಬ್ಬರು ಸಾರ್ವಕಾಲಿಕವಾಗಿ ಜನ-ಮನದಲ್ಲಿ ನೆನಪಿನಲ್ಲಿ ಉಳಿಯುವುದು ಅವರು ಮಾಡಿದ ಸೇವೆ, ತ್ಯಾಗಗಳಿಂದ ಎಂಬುದು ಮನದಟ್ಟಾಗುತ್ತದೆ.
ಹೆಸರಿನ ಬಗ್ಗೆ ಅನೇಕ ತಮಾಷೆಯ ವಿಷಯಗಳೂ ಇವೆ. ಶಾಲಾ-ಕಾಲೇಜುಗಳಲ್ಲಿ ಹುಡುಗರು ತಮ್ಮ ಆಪ್ತ ಗೆಳೆಯರನ್ನು ಕರೆಯುವುದು ಅವರಿಗಿಟ್ಟಿರುವ ಅಡ್ಡ ಹೆಸರಿನಿಂದಲೇ. ಕೆಲವು ಚೂಟಿ ಹುಡುಗರಂತೂ ತಮ್ಮ ಅಧ್ಯಾಪಕರಿಗೆ ಅಡ್ಡ ಹೆಸರು ಇಟ್ಟು ತರಲೆ ಮಾಡಿ ಖುಷಿ ಪಡುವುದುಂಟು. ಅವೆಲ್ಲ ನೆನಪಿನಲ್ಲಿ ಅಚ್ಚಯಳಿಯದೆ ಉಳಿದುಕೊಂಡು ನಮ್ಮ ಬದುಕನ್ನು ರೂಪಿಸಿದ ಗುರುಗಳು ಎಂಬ ಗೌರವವೂ, ಹೆಮ್ಮೆಯೂ ವ್ಯಕ್ತವಾಗುತ್ತದೆ. ತರಗತಿಗಳಲ್ಲಿ ಒಂದೇ ಹೆಸರಿನವರು ಇಬ್ಬರು, ಮೂವರು ಇದ್ದರೆ ಶಿಕ್ಷಕರ ಕಷ್ಟವಂತೂ ಹೇಳತೀರದು. ಆತನಲ್ಲ, ಇವ, ಇವನಲ್ಲ ಅವ ಎನ್ನುವ ಹೊತ್ತಿಗೆ ಸಮಯ ಕಳೆದು ಹೋಗಿ ಪಾಠ ಅರ್ಧದಲ್ಲೇ ಬಾಕಿಯಾಗುವ ಸಂದರ್ಭಗಳೂ ಇವೆ. ಅದಕ್ಕಾಗಿ ಅವರಿಗೆ ರೋಲ್ ನಂಬರ್ ಕೊಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತರಾದರೂ ಮಕ್ಕಳ ಹೆಸರು ನೆನಪಾಗುವುದಿಲ್ಲ. ಶಿಕ್ಷಕರಿಗೂ ಅಷ್ಟೇ ತರಗತಿಯಲ್ಲಿನ ಜಾಣ ಮಕ್ಕಳು, ತಂಟೆ ಮಾಡುವ, ಚೂಟಿ ಮಕ್ಕಳ ಹೆಸರು ನೆನಪಿನಲ್ಲಿ ಉಳಿಯುವುದೇ ಹೆಚ್ಚು.
ವ್ಯಕ್ತಿಯದ್ದೇ ಆಗಿರಲಿ ಅಥವಾ ಮನೆ, ಉದ್ದಿಮೆ, ಕಂಪನಿ ಇತ್ಯಾದಿಗಳಿಗೆ ಸಂಬಂಧಿಸಿದ ಹೆಸರೇ ಆಗಿರಲಿ ಅಸ್ಮಿತೆ. ಹೆಸರು ಹೇಳಿದಾಕ್ಷಣ ಅಥವಾ ಕೇಳಿದಾಕ್ಷಣ ಅಲ್ಲೊಂದು ಬಂಧವೊಂದು ಮೂಡುವುದಂತೂ ನಿಜ. ಹೆಸರಿನಿಂದ ಗುರುತಿಸಿಕೊಳ್ಳುವವರು, ಗುರುತಿಸಲ್ಪಡುವವರು ಇದ್ದಾರೆ. ಅಂತೆಯೇ ಹೆಸರನ್ನು ಬಳಸಿ ಸೇವೆ -ಸಹಕಾರ ನೀಡುವವರು ಒಂದೆಡೆಯಾದರೆ, ಹೆಸರಿನ ಮೂಲಕ ಲಾಭ, ಪ್ರಯೋಜನವನ್ನು ಪಡೆಯುವರು ಇದ್ದಾರೆ. ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೇ ನಮ್ಮ ಹೆಸರು ದುರುಪಯೋಗವಾಗುವುದುಂಟು, ಅಪಪ್ರಚಾರಕ್ಕೊಳಗಾಗುವುದುಂಟು. ಹೀಗೆ ಬದುಕಿನ ಉದ್ದಕ್ಕೂ ಗುರುತಿಸುವುದು ಮಾತ್ರವಲ್ಲದೆ, ಒಂದಲ್ಲ ಒಂದು ರೀತಿಯಲ್ಲಿ ಹೆಸರುಗಳು ಬಳಕೆಯಾಗುತ್ತಲೇ ಇರುತ್ತವೆ. ಅವೆಲ್ಲದರ ನಡುವೆ ನಮ್ಮ ವ್ಯಕ್ತಿತ್ವವು ನಮ್ಮ ಹೆಸರಿಗೆ ಮತ್ತಷ್ಟು ಗೌರವ ತಂದುಕೊಡುವಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳುವತ್ತ ನಮ್ಮ ಪ್ರಯತ್ನವಿರಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)
ಚೈತ್ರಾ ಕುಂದಾಪುರ & ಟೀಂ ಇಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ಗೆ ಎಂಟ್ರಿ