ಮಳವಳ್ಳಿ: ನಾಡಿನ ಮಠಗಳು ಶಿವಶರಣರ ಪರಂಪರೆಯ ಕೊಂಡಿಯಾಗಿ ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಂದೂರು ಬೆಟ್ಟದ ಶ್ರೀ ರಸಸಿದ್ದೇಶ್ವರ ಮಠದಲ್ಲಿ ಗುರುವಾರ ನಡೆದ ಗುರು ಪುಟ್ಟಾಧಿಕಾರ ಮಹೋತ್ಸವ ಹಾಗೂ ಮಹಾದ್ವಾರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕುಂದೂರು ಬೆಟ್ಟದ ತಪ್ಪಲಿನಲ್ಲಿರುವ ರಸ ಸಿದ್ದೇಶ್ವರ ಮಠದ ಗುರುಪರಂಪರೆ ಇತಿಹಾಸ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಬೇರೂರಿದೆ. ಶರಣರ ಪರಂಪರೆ ಅರಿತಿರುವ ಭಕ್ತ ಸಮೂಹ ಭಾವನಾತ್ಮಕವಾಗಿ ಇಲ್ಲಿನ ಇತಿಹಾಸವನ್ನು ಬಣ್ಣಿಸುವುದನ್ನು ಆಲಿಸಿದರೆ ಎಂತಹ ನಾಸ್ತಿಕರೂ ಆಸ್ತಿಕರಾಗಿ ಭಕ್ತಿ ಪರವಶರಾಗುತ್ತಾರೆ ಎಂದರು.
ನೆರೆಯ ರಾಜ್ಯಗಳ ಮಠಗಳಿಗೆ ಹೊಲಿಸಿದರೆ ನಾಡಿನ ಮಠಗಳ ಸೇವೆ ಅನನ್ಯವಾದದ್ದು. ಅಂತಹ ಮಠಗಳ ಪರಂಪರೆಯಲ್ಲಿ ಕುಂದೂರು ರಸ ಸಿದ್ದೇಶ್ವರ ಮಠವೂ ಒಂದಾಗಿದೆ. ಬೆಟ್ಟದ ತಪ್ಪಲಿನಲ್ಲಿನ ಸುಂದರವಾದ ಪರಿಸರದಲ್ಲಿರುವ ಹಾಗೂ ಸಿದ್ಧಪುರುಷರು ಸಂಚರಿಸಿದ ಪವಿತ್ರ ಸ್ಥಳದಲ್ಲಿರುವ ಮಠದಲ್ಲಿ ಶರಣರ ಗುರುಪರಂಪರೆಯ ಕಾಯಕದಲ್ಲಿ ತೊಡಗಿರುವುದು ದೈವ ಭಕ್ತಿಯುಳ್ಳವರ ಧಾರ್ಮಿಕ ಸುಕ್ಷೇತ್ರ ಎಂದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಬಸವ ತತ್ವವನ್ನು ಈ ನಾಡಿನಲ್ಲಿ ಪಸರಿಸುತ್ತಿರುವ ಮಠಾಧೀಶರ ಸೇವೆ ಅನನ್ಯ. ನಾನು ಸಹ ಬಸವ ತತ್ವದ ಅನುಯಾಯಿಗಿದ್ದೇನೆ. ಕ್ಷೇತ್ರದ ಶಾಸಕನಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕುಂದೂರು ಮಠದ ಮೂಲಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಎಲ್ಲ ಹರಗುರು ಚರಮೂರ್ತಿಗಳ ಆಶೀರ್ವಾದದೊಂದಿಗೆ ನಾನು ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಕಿರಿಯ ಶ್ರೀ ಚೆನ್ನಬಸವ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಲಿಂಗಶ್ರೀ, ಮರಳೇಗವಿ ಮಠದ ಶಿವರುದ್ರ ಸ್ವಾಮೀಜಿ, ಸೋಮಹಳ್ಳಿ ವೀರಸಿಂಹಾಸನ ಮಠದ ಸಿದ್ದಮಲ್ಲ ಸ್ವಾಮೀಜಿ, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕುಂದೂರು ರಸ ಸಿದ್ದೇಶ್ವರ ಮಠದ ನಂಜುಂಡಸ್ವಾಮೀಜಿ, ಗುರುಪಟ್ಟಾಧಿಕಾರ ಸ್ವೀಕರಿಸಿದ ಶ್ರೀರುದ್ರ ಮಹಾಂತ ಸ್ವಾಮಿ, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ, ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಮೂರ್ತಿ, ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೃಷಭೇಂದ್ರ, ಮುಖಂಡರಾದ ಅಂಬರೀಶ್, ಸಿ.ಎಂ.ಪುಟ್ಟಬುದ್ದಿ, ಬಬ್ರುವಾಹನ, ಪ್ರಕಾಶ್ ಇತರರು ಇದ್ದರು
