ಪಂಥ ಎಂಬುದು ಮಾನಸಿಕ ವಿಕಲ್ಪ

ಶಿರಸಿ: ಎಡ ಹಾಗೂ ಬಲ ಪಂಥೀಯರಾಗಿಯೇ ಸಮಾಜವನ್ನು ನೋಡುವ ಪದ್ಧತಿ ಬೆಳೆಯುತ್ತಿದೆ. ಸಮಾನವಾಗಿ ನೋಡಿ ಬುದ್ಧಿಯ ದೃಷ್ಟಿಯಲ್ಲಿ ನೋಡುವ ರೂಢಿ ನಮಗೆ ಬರಬೇಕಿದೆ ಎಂದು ಹೆಗ್ಗೋಡು ನೀನಾಸಂ ಮುಖ್ಯಸ್ಥ, ಸಾಹಿತಿ ಕೆ. ವಿ. ಅಕ್ಷರ ಹೇಳಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎ. ಹೆಗಡೆ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ‘ಬಾಲ ರಾಮಾಯಣ’ ಕೃತಿಯನ್ನು ನಗರದ ಗಣೇಶ ನೇತ್ರಾಲಯದಲ್ಲಿ ಭಾನುವಾರ ಸಂಜೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಆಧುನಿಕ ಪೂರ್ವ ಪಠ್ಯಗಳ ನೋಡುವಿಕೆಯಲ್ಲಿ ನಾವು ಸಮಸ್ಯೆ ಸೃಷ್ಟಿಸಿಕೊಂಡಿದ್ದೇವೆ. ವಾಸ್ತವವಾಗಿ ಎಡ ಪಂಥ ಮತ್ತು ಬಲಪಂಥ ಎಂಬುದು ಮಾನಸಿಕ ವಿಕಲ್ಪ. ನಮ್ಮ ಗತಕಾಲವನ್ನು ಬಲ ಪಂಥ, ಎಡ ಪಂಥ ಎಂಬ ಹಣೆಪಟ್ಟಿಯಲ್ಲಿ ಒಕ್ಕಣ್ಣಿನಿಂದ ನೋಡುತ್ತಿದ್ದೇವೆ. ಒಂದು ಕಣ್ಣಿನಿಂದ ಕಾಣುತ್ತಿರುವುದೇ ಸತ್ಯ ಎಂದು ನಂಬಿ ನಾವು ಹೋರಾಟವನ್ನೂ ನಡೆಸುತ್ತಿದ್ದೇವೆ. ಗತ ಕಾಲದ ಭಾರತವನ್ನು ನೋಡಲು ನಮಗೆ ಈ ಕಾರಣವೇ ಅಡ್ಡಿಯಾಗುತ್ತಿದೆ. ಎಡ-ಬಲಪಂಥೀಯ ಒಕ್ಕಣ್ಣ ಪ್ರಭುತ್ವ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ನಾಡಿನಲ್ಲಿ ಮಹತ್ವದ ಕವಿಗಳ ಹುಟ್ಟಲು ಸಾಧ್ಯವಿಲ್ಲ. ಈ ಸ್ಥಿತಿ ಬದಲಾಯಿಸಲು ಸಾಧ್ಯವೇ ಎಂದು ಗಂಭೀರವಾಗಿ ನಾವು ಚಿಂತನೆ ಮಾಡಬೇಕಿದೆ ಎಂದರು.

ಬರಹಗಾರ ಮಾಧವ ಚಿಪ್ಪಳಿ ಕೃತಿ ಪರಿಚಯಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಪ್ರೊ. ಎಂ. ಎ. ಹೆಗಡೆ, ಗಾಯಿತ್ರಿ ಬೆಟ್ಕೊಪ್ಪ ಇದ್ದರು.