ಶಾಲೆಯ ಬಾಗಿಲು, ಕಿಟಕಿ ಧ್ವಂಸ

ಹಾಸನ: ನಗರದ ಹೃದಯ ಭಾಗದಲ್ಲಿರುವ ಉತ್ತರ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಬಾಗಿಲು, ಕಿಟಕಿಗಳನ್ನು ಕಿಡಿಗೇಡಿಗಳು ಮುರಿದು ನಷ್ಟ ಉಂಟುಮಾಡಿದ್ದಾರೆ.

ಸ್ಥಳೀಯ ಪುಂಡಪೋಕರಿಗಳ ದ್ವೇಷದಿಂದ ಶಾಲೆಗೆ ತೊಂದರೆ ಎದುರಾಗಿದೆ. ಈ ಬೆಳವಣಿಗೆ ಪಾಲಕರಲ್ಲಿ ಆತಂಕ ಹುಟ್ಟಿಸಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆಯುತ್ತಿದ್ದರೆ, ಇಲ್ಲಿ ಶಾಲೆಗೆ ಕಪ್ಪುಚುಕ್ಕಿ ತರುವಂತಹ ಕೆಲಸ ನಡೆಯುತ್ತಿದೆ. ಬಾಗಿಲು, ಕಿಟಕಿಗಳನ್ನು ನಾಶಗೊಳಿಸಿರುವ ಪುಂಡರ ವಿರುದ್ಧ ಕ್ರಮ ಜರುಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

1917ರಲ್ಲಿ ಆರಂಭವಾಗಿರುವ ಈ ಶಾಲೆಗೆ ತನ್ನದೇ ಆದ ಇತಿಹಾಸವಿದೆ. ಈಗಲೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ಆದರೆ, ರಾತ್ರಿ ಹೊತ್ತು ಶಾಲೆ ಆವರಣಕ್ಕೆ ನುಗ್ಗಿರುವ ಪುಂಡರು ಒಂಬತ್ತು ಬಾಗಿಲು, ಕಿಟಕಿ ಹಾಗೂ ಡೋರ್ ಲಾಕ್‌ಗಳನ್ನು ಮುರಿದಿದ್ದಾರೆ. ಹೆಂಚುಗಳನ್ನು ಕಿತ್ತೆಸೆದಿದ್ದು ಛಾವಣಿ ತೆರೆದುಕೊಂಡಿದೆ. ರಾತ್ರಿ ಸಮಯದಲ್ಲಿ ಪೊಲೀಸ್ ಗಸ್ತು ಪ್ರಾರಂಭಿಸಿದರೆ ಪರಿಸ್ಥಿತಿ ನಿಯಂತ್ರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರೈಲ್ವೆ ಇಲಾಖೆಯಿಂದ ಅಭಿವೃದ್ಧಿ:

ಉತ್ತರ ಬಡಾವಣೆ ಶಾಲೆ ಉಳಿವಿಗೆ ಸುತ್ತಲಿನ ನಿವಾಸಿಗಳು ನಿರಂತರ ಹೋರಾಟ ನಡೆಸಿದ ಪರಿಣಾಮ ರೈಲ್ವೆ ಇಲಾಖೆ 3 ಲಕ್ಷ ರೂ. ಅನುದಾನ ನೀಡಿತ್ತು. ಆ ಹಣದಿಂದಲೇ ಹೆಂಚು, ಗೋಡೆಗಳಿಗೆ ಬಣ್ಣ ಹಾಗೂ ಇತರ ಸಾಮಗ್ರಿ ಖರೀದಿಸಲಾಗಿತ್ತು. ಆದರೆ, ಪುಂಡರ ಹಾವಳಿಯಿಂದ ಶಿಕ್ಷಕರು ಹಾಗೂ ಮಕ್ಕಳು ತೊಂದರೆಗೆ ಸಿಲುಕಿದ್ದಾರೆ. 2019-20ನೇ ಸಾಲಿನ ತರಗತಿಗಳು ಮೇ 29ರಂದು ಆರಂಭವಾಗಲಿದ್ದು, ಅಷ್ಟರೊಳಗೆ ರಿಪೇರಿ ಕೆಲಸ ಮಾಡಬೇಕಾದ ಇಕ್ಕಟ್ಟಿಗೆ ಶಿಕ್ಷಕರು ಸಿಲುಕಿದ್ದಾರೆ.

ನಗರ ಠಾಣೆಗೆ ದೂರು ಸಲ್ಲಿಸಿರುವ ಮುಖ್ಯ ಶಿಕ್ಷಕ ನಾಗರಾಜ್, ಶಾಲೆ ಆವರಣದಲ್ಲಿ ಪೋಲಿ ಹುಡುಗರು ತಿರುಗದಂತೆ ಎಚ್ಚರಿಕೆ ನೀಡಬೇಕು. ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಶಾಲೆಯ ಬಾಗಿಲುಗಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆಯಲಾಗುವುದು. ರಿಪೇರಿ ಕಾಮಗಾರಿ ಕೈಗೊಳ್ಳಲಾಗುವುದು.
ಎಚ್. ಮಂಜುನಾಥ್, ಡಿಡಿಪಿಐ ಹಾಸನ

ಚಿತ್ರ

Leave a Reply

Your email address will not be published. Required fields are marked *