ಹಗರಣಗಳ ಪಟ್ಟಿ ಬಿಡುಗಡೆಗೆ ಕಿಮ್ಮನೆ ಮುಹೂರ್ತ

ಶಿವಮೊಗ್ಗ: ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗಳ ಪಟ್ಟಿಯನ್ನು ಜ. 3ರಂದು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.

ಡಿಸೆಂಬರ್ 17 ರಂದು ಮೇಳಿಗೆಯಿಂದ ತೀರ್ಥಹಳ್ಳಿ ಹಾಗೂ ಜನವರಿ 3 ರಂದು ಗುಡ್ಡೇಕೊಪ್ಪದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಮಾಡಿ ಶಾಸಕರ ಹಗರಣಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ಫೆಬ್ರವರಿಯಲ್ಲಿ ಆಗುಂಬೆಯಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರಗ ಜ್ಞಾನೇಂದ್ರ ಕ್ಷೇತ್ರದ ಶಾಸಕರಾದೆ ಬಿಜೆಪಿ ಶಾಸಕರಾಗಿದ್ದಾರೆ. ಅವರ ಪಕ್ಷಪಾತ ಧೋರಣೆ ಪರಿಣಾಮ ಕಳೆದ ಆರು ತಿಂಗಳಿನಿಂದ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಾಲೂಕಿನಲ್ಲಿ ಶಾಸಕರ ಬೆಂಬಲಿಗರಿಂದಲೇ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ. ಪ್ರತಿ ತಿಂಗಳು 500 ರೂ. ಕೊಡುವಂತೆ ಬಿಜೆಪಿಯ ಓರ್ವ ತಾಪಂ ಸದಸ್ಯ ಗ್ರಾಪಂ ಪಿಡಿಒಗಳಿಗೆ ತಾಕೀತು ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತನ್ನ ಹಿಂಬಾಲಕರಿಗೆ ನೀಡುವಂತೆ ಶಾಸಕರು ಪ್ರಭಾವ ಬೀರುತ್ತಿದ್ದಾರೆ. ಬೆಂಬಲಿಗರು ಶಾಸಕರಿಗೆ ಶೇ.10 ಕಮಿಷನ್ ನೀಡಬೇಕು ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದೇ ಉದ್ದೇಶಕ್ಕೆ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ಅಧಿಕಾರಿಗಳಿಗೆ ಕಠಿಣ ಶಬ್ದಗಳನ್ನೂ ಬಳಸಿದ ಉದಾಹರಣೆ ಇದೆ. ಈವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಯಾವೊಬ್ಬ ಶಾಸಕರೂ ಇವರಂತೆ ಪಕ್ಷಪಾತ ಧೋರಣೆ ಮಾಡಿಲ್ಲ ಎಂದರು.

ಬಗರ್​ಹುಕುಂ ಸಮಸ್ಯೆಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಹಾರಕ್ಕೆ ಯತ್ನಿಸುವ ಬದಲಿಗೆ ಬಿಜೆಪಿ ಮುಖಂಡರು ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ಸಹಜ ಸಾವನ್ನು ತಂದು ಪ್ರತಿಭಟನೆ ಮಾಡಿ ಅಧಿಕಾರಿಗಳ ನೈತಿಕತೆಯನ್ನೇ ಕುಂದಿಸುತ್ತಿದ್ದಾರೆ. ವೋಟಿಗಾಗಿ ಕಸ್ತೂರಿ ರಂಗನ್ ವರದಿ ವಿರೋಧಿಸುವಂತೆ ನಾಟಕವಾಡುವ ಬಿಜೆಪಿಯ ಇನ್ನೊಂದು ತಂಡ ಈ ವರದಿಯ ಪರವಾಗಿ ಕೆಲಸ ಮಾಡುತ್ತಿದೆ. ಭೂ ಕಬಳಿಕೆ ಪ್ರಕರಣದಲ್ಲಿ ನಮ್ಮ ಪಕ್ಷ ರೈತರಿಗೆ ಉಚಿತ ಕಾನೂನು ನೆರವು ನೀಡುತ್ತಿದೆ ಎಂದು ಹೇಳಿದರು.

ಜಿ.ಎಸ್.ನಾರಾಯಣರಾವ್, ಮುಡುಬಾ ರಾಘವೇಂದ್ರ, ಪಿ.ವಿ.ಮಹಾಬಲೇಶ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಬಿ.ಎಸ್.ಎಲ್ಲಪ್ಪ, ಮಹಮದ್ ಜಫ್ರುಲ್ಲ ಇದ್ದರು.

ಎಂಪಿ ಚುನಾವಣೆ ದಿಕ್ಸೂಚಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಜಾತ್ಯತೀತ ಮನೋಭಾವ ಸೇರಿ ಸೈದ್ಧಾಂತಿಕ ನೆಲೆಯ ಗೆಲುವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ದೇವಸ್ಥಾನ, ಮಸೀದಿ ಹೆಸರಿನಲ್ಲಿ ಜನರ ಭಾವನೆ ಕೆರಳಿಸುವ ಬಿಜೆಪಿ ತಂತ್ರಗಾರಿಕೆ ಈ ಚುನಾವಣೆಯಲ್ಲಿ ವಿಫಲವಾಗಿದೆ. ಈ ಫಲಿತಾಂಶದ ಗೌರವ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಜಾತ್ಯತೀತ ನೆಲೆಯಲ್ಲಿ ದೇಶದ ಹಿತ ಬಯಸುವ ಸರ್ವರಿಗೂ ಸೇರಿದೆ. ದೇಶ ಒಂದಾಗಿ ಉಳಿಯಬೇಕಾದರೆ ಕಾಂಗ್ರೆಸ್ ಅನಿವಾರ್ಯ ಎಂಬುದನ್ನು ಈ ಫಲಿತಾಂಶ ದೃಢಪಡಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.