ಶಿವಮೊಗ್ಗ: ದೇಶದಲ್ಲಿ ಸಹಕಾರ ಚಳವಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹು ದೊಡ್ಡದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಸಹಕಾರ ಮತ್ತು ಯುವಜನತೆ ವಿಷಯ ಕುರಿತು ಬುಧವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಯೂರೋಪಿನ ರಾಷ್ಟ್ರಗಳಲ್ಲಿ ಬಂಡವಾಳಶಾಹಿಗಳ ವಿರುದ್ಧ ಹುಟ್ಟಿಕೊಂಡ ಅಸಹಕಾರ ಚಳವಳಿಯು ಸಹಕಾರ ಚಳವಳಿಯಾಗಿ ಮಾರ್ಪಟ್ಟಿದೆ. ಭಾರತ ವಿಶ್ವದಲ್ಲಿಯೇ ಅತಿದೊಡ್ಡ ಸಹಕಾರ ಕ್ಷೇತ್ರ. ಕಾರ್ಪೋರೇಟ್ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಸಹಕಾರ ಕ್ಷೇತ್ರ ಬೆಳೆಯುತ್ತಿದೆ ಎಂದು ತಿಳಿಸಿದರು.
ಯಾವ ಕಾರ್ಪೋರೇಟ್ ಕಂಪನಿಗಳಿಗೂ ಸಹಕಾರ ಕ್ಷೇತ್ರ ಕಡಿಮೆ ಇಲ್ಲ. ಕಂಪನಿಗಳು ಸರ್ಕಾರವನ್ನೇ ಬುಡಮೇಲು ಮಾಡುವಷ್ಟು ಬೆಳೆದಿವೆ. ಆದರೆ ಅದನ್ನು ತಡೆಯುವ ಶಕ್ತಿ ಸಹಕಾರ ಸಂಸ್ಥೆಗಳಿಗೆ ಬಂದಿದೆ. ವಿದ್ಯಾರ್ಥಿಗಳು ಸಹಕಾರ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ವಿಚಾರ ಸಂಕಿರಣದ ಸಂಚಾಲಕ ಡಾ. ಕೆ.ಎನ್.ಮಂಜುನಾಥ್ ಮಾತನಾಡಿ, ಸಹಕಾರ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆಯಬಹುದು ಇಲ್ಲವೇ ಸಾಲ ಪಡೆದು ತಮ್ಮದೇ ಆದ ಉದ್ಯಮವನ್ನೂ ಆರಂಭಿಸಬಹುದು ಎಂದು ಹೇಳಿದರು.
ಪ್ರಾಚಾರ್ಯ ಡಾ. ಸೈಯ್ಯದ್ ಸನಾವುಲ್ಲಾ ಮಾತನಾಡಿ, ಜಿಲ್ಲಾ ಸಹಕಾರ ಇಲಾಖೆಯು ವಿದ್ಯಾರ್ಥಿಗಳಿಗೆ ಸಹಕಾರ ಕ್ಷೇತ್ರದ ಮಹತ್ವ ಪರಿಚಯಿಸಿದೆ. ವಿದ್ಯಾರ್ಥಿಗಳು ಸಹಕಾರ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ಹಿರಿಯ ಸಹಕಾರಿ ಎಚ್.ಎಲ್.ಷಡಕ್ಷರಿ, ಎಚ್.ಎಸ್.ಸಂಜೀವ್‌ಕುಮಾರ್, ಕೆ.ಎಲ್.ಜಗದೀಶ್ವರ್, ಪಿ.ವೀರಮ್ಮ, ಜಿ.ಗಂಗಾ, ಪಿ.ಕರಿಯಪ್ಪ, ನಿಖಿಲ್, ಎಚ್.ಯಶವಂತ್‌ಕುಮಾರ್, ಕೆ.ಶಫೀವುಲ್ಲಾ, ಸಿ.ನಾಗಭೂಷಣ್, ಬಿ.ವಸಂತನಾಯ್ಕ, ಶ್ರೀಕಾಂತ್ ಬರುವೆ, ಡಾ. ಎಚ್.ವಿ.ನಾಗರಾಜ್, ಆಯೇಷಾ ತಬಸ್ಸುಮ್ ಇತರರಿದ್ದರು.