ರಸ್ತೆಗಿಲ್ಲ ಡಾಂಬರು ಭಾಗ್ಯ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಕಾಂತಾವರ ಹೈಸ್ಕೂಲ್‌ನಿಂದ ಕೆಪ್ಲಾಜೆ ಮಾರಿಗುಡಿಯಾಗಿ ಕಡಂದಲೆ ಹಾಗೂ ಪಾಲಡ್ಕ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಸವಾಲಾಗಿದೆ.

ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರಗಳ ಹೊಂಡಗಳು ನಿರ್ಮಾಣವಾಗಿ ಸಣ್ಣಪುಟ್ಟ ವಾಹನಗಳು ಓಡಾಟ ಮಾಡುವುದೇ ಕಷ್ಟವಾಗಿದೆ. ರಸ್ತೆ ದುರಸ್ತಿ ಬಗ್ಗೆ ಹಲವು ವರ್ಷಗಳಿಂದ ಈ ಭಾಗದ ಗ್ರಾಮಸ್ಥರು ಸ್ಥಳೀಯಾಡಳಿತ, ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ ದುರಸ್ತಿ ಕಾರ್ಯ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.

ಡಾಂಬರು ಅಳವಡಿಸಿ 20 ವರ್ಷ: ಇಲ್ಲಿನ ಮಾರಿಗುಡಿ ರಸ್ತೆಗೆ ಡಾಂಬರು ಅಳವಡಿಸಿ 20 ವರ್ಷ ಕಳೆದಿವೆ. ಈ ನಡುವೆ ಎರಡು ಮೂರು ಬಾರಿ ಬರೀ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಕೆಲವು ವರ್ಷಗಳಿಂದ ತೇಪೆಯೂ ಹಾಕುವ ಕೆಲಸ ನಡೆಯದೆ, ಮೂರೂವರೆ ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.

ಪ್ರಮುಖ ಸಂಪರ್ಕ ರಸ್ತೆ: ಗ್ರಾಮೀಣ ಭಾಗವಾದ ಕಾಂತಾವರದಿಂದ ಕೆಪ್ಲಾಜೆ ಮಾರಿಗುಡಿ ಮಾರ್ಗವಾಗಿ ಮುಂದೆ ಪಾಲಡ್ಕವಾಗಿ ಮೂಡುಬಿದಿರೆಗೆ ಸಾಗಲು ಹಾಗೂ ಕಡಂದಲೆಯಾಗಿ ಸಚ್ಚೇರಿಪೇಟೆ, ಕಿನ್ನಿಗೋಳಿ ಹಾಗೂ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲು ಹತ್ತಿರದ ರಸ್ತೆಯಾದ ಪರಿಣಾಮ ಈ ಭಾಗದಲ್ಲಿ ಬಹುತೇಕ ವಾಹನಗಳು ನಿತ್ಯ ಸಂಚಾರ ನಡೆಸುತ್ತವೆ. ಬಸ್ ಸಂಚಾರವಿಲ್ಲದ ಈ ರಸ್ತೆಯಲ್ಲಿ ರಿಕ್ಷಾ, ಕಾರು ಹಾಗೂ ಇತರ ಬಾಡಿಗೆ ವಾಹನ ಮತ್ತು ಬೈಕ್‌ನಂಥ ಸಣ್ಣ ಪುಟ್ಟ ವಾಹನಗಳು ಮಾತ್ರ ಸಂಚರಿಸುತ್ತವೆ. ಆದರೆ ಈಗ ರಿಕ್ಷಾ, ಕಾರು ಮಾತ್ರವಲ್ಲದೆ ಕಾಲ್ನಡಿಗೆಯಲ್ಲೂ ಸಂಚಾರ ಕಷ್ಟವಾಗುವ ಸ್ಥಿತಿಗೆ ಬಂದಿದೆ ಗ್ರಾಮಸ್ಥರ ಅಳಲು. ಪ್ರತಿ ಬಾರಿ ಚುನಾವಣೆ ಸಂದರ್ಭ ರಸ್ತೆ ರಿಪೇರಿ ಮಾಡುತ್ತೇವೆ ಎಂಬುವವರು ಮತ್ತೆ ಕಾಣಲು ಸಿಗುವುದಿಲ್ಲ. ಹಲವು ವರ್ಷದ ಸಮಸ್ಯೆಯನ್ನು ಯಾರೂ ಕೇಳುವವರಿಲ್ಲ ಎನ್ನುತ್ತಾರೆ ಇಲ್ಲಿಯ ಜನ.

ಡಾಂಬರು ಎದ್ದು ಮಣ್ಣಿನ ರಸ್ತೆ ಗೋಚರ: ಡಾಂಬರು ಅಳವಡಿಸಿದ ರಸ್ತೆಯಾದರೂ ಕೆಲವೊಂದು ಕಡೆ ಬರಿ ಮಣ್ಣಿನ ರಸ್ತೆಯಂತೆ ಭಾಸವಾಗುತ್ತದೆ. 50-60 ರೂ. ಬಾಡಿಗೆ ಮಾಡಲು ಹೋಗಿ ಎರಡು ದಿನಕ್ಕೊಮ್ಮೆ ಗ್ಯಾರೇಜಿಗೆ ಹೋಗಬೇಕಾಗುತ್ತದೆ ಎಂಬುದು ರಿಕ್ಷಾ ಚಾಲಕರ ಆರೋಪ. ಮಳೆಗಾಲದಲ್ಲಂತೂ ಕಾಲ್ನಡಿಗೆಯಲ್ಲಿ ಸಾರ್ವಜನಿಕರು ಹಾಗೂ ಶಾಲೆ -ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೆಸರು ನೀರಿನಲ್ಲೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಡಲೇ ಈ ರಸ್ತೆ ದುರಸ್ತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಾವು ಈ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವವರು. ರಸ್ತೆ ಹದಗೆಟ್ಟಿದ್ದು, ಅತ್ತಿತ್ತ ಸಾಗುವುದೇ ಕಷ್ಟವಾಗಿದೆ. ಈ ರಸ್ತೆಗೆ ಡಾಂಬರು ಅಳವಡಿಸಿ 20 ವರ್ಷಕ್ಕೂ ಅಧಿಕ ಕಾಲ ಕಳೆದಿದೆ.
– ನಿತೇಶ್ ಕಾಂತಾವರ, ಸ್ಥಳೀಯ ನಿವಾಸಿ

ಶಾಸಕರ ನಿಧಿಯಿಂದ ಕಾಂತಾವರ ಮಾರಿಗುಡಿ ರಸ್ತೆ ಅಭಿವೃದ್ಧಿಗೆ 55 ಲಕ್ಷ ರೂ. ಮಂಜೂರು ಮಾಡಲಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿಯಾಗುವಂತೆ ಶ್ರಮಿಸುತ್ತೇವೆ.
– ದಿವ್ಯಾ ಗಿರೀಶ್ ಅಮೀನ್, ಜಿಲ್ಲಾ ಪಂಚಾಯಿತಿ ಸದಸ್ಯರು

Leave a Reply

Your email address will not be published. Required fields are marked *