ಶಿರಸಿ: ತನ್ನ ಸುತ್ತಮುತ್ತಲಿನ ಪರಿಸರ, ಭೂಮಿ, ಜಲ ಪ್ರದೇಶದ ರಕ್ಷಣೆಯು ನನ್ನ ಧರ್ಮವಾಗಿದೆ. ಇದೇ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಉಳಿವು ಸ್ಥಳೀಯರ ಪ್ರಯತ್ನದ ಮೇಲಿದೆ. ಆದರೆ, ಅವುಗಳಿಗೆ ಧಕ್ಕೆಯಾದರೆ ಎಂತಹ ತ್ಯಾಗಕ್ಕೂ ಮುಂದಾಗಬೇಕು ಎಂದು ಪರಿಸರ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಹೇಳಿದರು.
ನಗರದ ಟಿಆರ್ಸಿ ಸಭಾಂಗಣದಲ್ಲಿ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಯೋಜನೆಗಳ ಸಾಧಕ- ಬಾಧಕ ಕುರಿತ ಸಮಾಲೋಚನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪರಿಸರ ಸಂಪತ್ತು ದೋಚುವ ದಾಹಿಗಳಿಂದ ನದಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನದಿಗಳಿಗೂ ಕಾನೂನು ರೀತಿ ಹಕ್ಕು ನೀಡಲು ಹಕ್ಕೊತ್ತಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮಾನವನಿಗೆ ಆತನ ಹಕ್ಕುಗಳ ರಕ್ಷಣೆಗೆ ಕಾನೂನಿನ ಬಲವಿದೆ. ಅದೇ ರೀತಿ ನದಿಗಳಿಗೂ ಅವುಗಳದ್ದೇ ಆದ ಹಕ್ಕಿದ್ದು, ಕಾನೂನು ಅದನ್ನು ಪರಿಗಣಿಸಬೇಕು. ಕಾನೂನಾತ್ಮಕ ಹಕ್ಕು ನೀಡಿ ನದಿಗಳ ಬಲ ವರ್ಧಿಸಬೇಕು ಎಂದು ಹೇಳಿದರು.
ನದಿ ಜೋಡಣೆಗೆ ಮುಂದಾಗಿರುವವರಿಗೆ ಜನರ ಬಾಯಾರಿಕೆಯ ಚಿಂತೆಯಿಲ್ಲ. ಬದಲಾಗಿ ಯೋಜನೆಗೆ ಮೀಸಲಿಡುವ ಮೊತ್ತವನ್ನು ಕಬಳಿಸುವ ದಾಹ ಹೆಚ್ಚಿದೆ. ಯೋಜನೆ ಅನುಷ್ಠಾನದೊಂದಿಗೆ ಗ್ರಾನೈಟ್, ಮರಳು ಮಾಫಿಯಾ, ನೂರಾರು ಜೆಸಿಬಿಗಳಿಗೆ ನಿರಂತರ ಕೆಲಸ, ಸಿಮೆಂಟ್, ಸ್ಟೀಲ್ ದಲ್ಲಾಳಿಗಳಿಗೆ ಕೆಲಸ ದೊರೆಯುತ್ತದೆ. ಇದು ಇರುವುದೆಲ್ಲವನ್ನೂ ಕಬಳಿಸುವ ದಾಹದ ಮಾರ್ಗವಾಗಿದೆ. ಬಾಯಾರಿದವರಿಗೆ ನೀರು ಕೊಡಬಹುದು. ಆದರೆ, ಇಂಥ ದಾಹ ಇದ್ದವರಿಗೆ ನೀರು ಕೊಡುವುದು ಅಧರ್ಮ. ಈ ನಿಟ್ಟಿನಲ್ಲಿ ಇಂಥ ಅಧರ್ಮವನ್ನು ವಿರೋಧಿಸುವುದು ಪ್ರತಿಯೊಬ್ಬರ ಧರ್ಮವಾಗಿದೆ ಎಂದರು.
ಪರಿಸರಶಾಸ್ತ್ರಜ್ಞ ಡಾ.ಟಿ.ವಿ. ರಾಮಚಂದ್ರ ಮಾತನಾಡಿ, ಸರ್ಕಾರಗಳು ಅವುಗಳಿಗೆ ಬೇಕಾದ ಯೋಜನೆ ಅನುಷ್ಠಾನ ಮಾಡುತ್ತವೆ ಹೊರತು ಯೋಜನೆ ಅಧ್ಯಯನ ವರದಿಯಾಧರಿಸಿ ಕ್ರಮವಹಿಸುವುದಿಲ್ಲ. ಎತ್ತಿನಹೊಳೆಯಿಂದ ಕೋಲಾರಕ್ಕೆ 1 ಟಿಎಂಸಿ ನೀರು ಕೊಂಡೊಯ್ಯಲು 24 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವ ಸರ್ಕಾರದ ನೀತಿ ಜನರಿಗೆ ನೀರು ಕೊಡುವುದಲ್ಲ ಬದಲಾಗಿ ಹಣ ಲೂಟಿ ಮಾಡುವುದಾಗಿದೆ. ಯಾವುದೇ ಯೋಜನೆ ಜಾರಿಗೊಳಿಸುವಾಗ ಅದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ನದಿಪಾತ್ರಗಳ ಜಲಾನಯನ ಪ್ರದೇಶಗಳ ಅರಿವು, ವಿಷಯ ಜ್ಞಾನವು ಯೋಜನೆ ಅನುಷ್ಠಾನ ಮಾಡುವವರಿಗೆ ಇಲ್ಲದಿರುವುದು ದುರಂತದ ಸಂಗತಿ ಎಂದರು.
ನದಿ ಜೋಡಿಸುವ ಬದಲು ನೀರಿನ ಅಲಭ್ಯತೆ ಇರುವ ಪ್ರದೇಶಗಳಲ್ಲಿ ಅರಣ್ಯ ಬೆಳೆಸುವ ಕಾರ್ಯ ಅಗಬೇಕು. ಕೆರೆಗಳ ಪುನಶ್ಚೇತನ ಮಾಡಬೇಕು. ಬತ್ತಿದ ನದಿಗಳ ಜಲಾನಯನ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ವಿವಿಧ ಸಂರಕ್ಷಣಾ ಕವಚದ ಜತೆ ಅತಿಸೂಕ್ಷ್ಮ ಪರಿಸರ ವಲಯ ಹೊಂದಿರುವ ಬೇಡ್ತಿ, ಅಘನಾಶಿನಿ, ವರದಾ ಪ್ರದೇಶಗಳಲ್ಲಿ ನದಿ ಜೋಡಣೆಗೆ ಪೂರಕ ವಾತಾವರಣವಿಲ್ಲ. ಇದನ್ನು ಸರ್ಕಾರಕ್ಕೆ ಮನದಟ್ಟು ಮಾಡಬೇಕಿದೆ ಎಂದರು.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಾಗಾರ ಉದ್ಘಾಟಿಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಸ್ವಾಗತಿಸಿದರು. ಮಧುಮತಿ ಹೆಗಡೆ ನಿರೂಪಿಸಿದರು. ನಂತರ ಹಲವಾರು ಪರಿಸರ ಕಾರ್ಯಕರ್ತರು, ಸಾರ್ವಜನಿಕರು, ರೈತರು, ಉದ್ಯಮಿಗಳಿಂದ ಅಭಿಪ್ರಾಯ ಮಂಡನೆ ನಡೆಯಿತು.
ವೈಜ್ಞಾನಿಕ ಚಿಂತನೆ ಅಗತ್ಯ: ನದಿ ಜೋಡಣೆಯಂಥ ಯೋಜನೆ ಜಾರಿಗೂ ಮುನ್ನ ಸರ್ಕಾರವು ಪರಿಸರಕ್ಕೆ ಧಕ್ಕೆಯಾಗದ ರೀತಿ ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ಹಂತದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾಗಿರುವ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಎಚ್ಚರಿಸಿದ್ದಾರೆ. ನದಿ ಜೋಡಣೆ ಸಾಧಕ- ಬಾಧಕ ಕುರಿತ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಬಯಲುಸೀಮೆ ಪ್ರದೇಶದ ಜನರಿಗೆ ಕುಡಿಯುವ ನೀರು ನೀಡಬಾರದು ಎಂಬುದು ನಮ್ಮ ಆಶಯವಲ್ಲ. ಆದರೆ ಮಲೆನಾಡು, ಬಯಲುಸೀಮೆ ಜನರಿಗೆ ಅಗತ್ಯವಾಗಿ ನೀರು ಸಿಗುವ ಯೋಜನೆ ಜಾರಿಗೆ ಸರ್ಕಾರ ವೈಜ್ಞಾನಿಕವಾಗಿ ಚಿಂತಿಸಿ ಕ್ರಮವಹಿಸಬೇಕು ಎಂದರು. ಕುಡಿಯುವ ನೀರು ಪೂರೈಸಲು ಪರ್ಯಾಯ ಮಾರ್ಗ ರೂಪಿಸುವ ಬದಲು ನೀರಿಲ್ಲದ ನದಿಗಳ ಜೋಡಣೆ ಹೇಗೆ ಶಾಶ್ವತ ಪರಿಹಾರ ಆಗಬಲ್ಲದು ಎಂಬ ಪ್ರಶ್ನೆ ಮೂಡುತ್ತಿದೆ. ತಕ್ಷಣದ ಪರಿಹಾರದ ಬದಲಾಗಿ ದೀರ್ಘಾವಧಿ ಪರಿಣಾಮಗಳ ಅವಲೋಕನ, ಆಲೋಚನೆ ಅಗತ್ಯ. ಅದಿಲ್ಲದಿದ್ದರೆ ಸಾಮಾನ್ಯ ಜನರು ಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದ ಶ್ರೀಗಳು ಹಸಿರು ಕವಚ ಹೆಚ್ಚಿರುವಲ್ಲಿ ಮಳೆ, ನೀರು, ಅಂತರ್ಜಲ ಹೆಚ್ಚಿರುತ್ತದೆ. ಹಾಗಾಗಿ ಹಸಿರೀಕರಣ, ಮಳೆ ನೀರು ಕೊಯ್ಲಿನಂಥ ಯೋಜನೆ ಇನ್ನಷ್ಟು ಚುರುಕಾಗಿ ಮಾಡಬೇಕೇ ವಿನಾ ನದಿ ಜೋಡಣೆ ಸರಿಯಲ್ಲ ಎಂದರು.
ನದಿ ತಿರುವು ಯೋಜನೆ ವಿರೋಧಿಸಿ 2000ನೇ ಇಸವಿಯಲ್ಲಿ ಹೋರಾಟ ನಡೆದಿತ್ತು. ಇದೀಗ ಮತ್ತೆ ಹೋರಾಟ ರೂಪುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾಗದ ರೀತಿ ಅಭಿವೃದ್ಧಿ ನಡೆಸಲು ಹಕ್ಕೊತ್ತಾಯ ಮಾಡಲಾಗುವುದು.
| ಕೇಶವ ಕೊರ್ಸೆ ಪರಿಸರ ತಜ್ಞ
ಕಾರ್ಯಾಗಾರದ ನಿರ್ಣಯಗಳು
- ಕಾರ್ಯಾಗಾರದಲ್ಲಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ಹಕ್ಕೊತ್ತಾಯ ಮಾಡಿ ನಿರ್ಣಯ ಸ್ವೀಕರಿಸಲಾಯಿತು. ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಸಂಘಟಕ ನಾರಾಯಣ ಹೆಗಡೆ ಗಡೀಕೈ ನಿರ್ಣಯ ಮಂಡಿಸಿದರು.
- ಪಶ್ಚಿಮಘಟ್ಟ, ಮಲೆನಾಡು ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆ, ಕಾರ್ಯಚಟುವಟಿಕೆ ಹೆಚ್ಚಿಸುವ ದೃಷ್ಟಿಯಿಂದ ಪಶ್ಚಿಮಘಟ್ಟ ಪರಿಸರ ಸಂಘ – ಸಂಸ್ಥೆಗಳ ಒಕ್ಕೂಟ ರಚನೆ
- ರಾಜ್ಯ ನೀರಾವರಿ ಇಲಾಖೆ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಕುರಿತು ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರದ ಎನ್.ಡಬ್ಲು್ಯ.ಡಿ.ಎ.ಗೆ ನೀಡಿರುವ ಆದೇಶವನ್ನು ರದ್ದುಪಡಿಸಬೇಕು. ಸ್ಥಳ ಸಮೀಕ್ಷೆಗೆ ಅವಕಾಶ ನೀಡಬಾರದು.
- ಪಶ್ಚಿಮಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ದಿಕ್ಕು ತಿರುಗಿಸುವ ಕುರಿತು ಅಧ್ಯಯನ ಮಾಡಲು ರಾಜ್ಯ ನೀರಾವರಿ ಇಲಾಖೆ ಎನ್.ಡಬ್ಲು್ಯ.ಡಿ.ಎ.ಗೆ ನೀಡಿರುವ ಆದೇಶ ಹಿಂಪಡೆಯುವ ಜತೆಗೆ ರದ್ದುಪಡಿಸಬೇಕು.
- ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗೆ ನಿಯೋಗದ ಮೂಲಕ ಹಕ್ಕೊತ್ತಾಯದ ಮನವಿ ಸಲ್ಲಿಸಬೇಕು. ವಿಧಾನಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಈ ನಿಯೋಗ ಒಯ್ಯಲು ದಿನಾಂಕ ನಿಶ್ಚಯಿಸಬೇಕು.
- ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಈ ಯೋಜನೆ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು.
- ಸಹಕಾರಿ ಸಂಸ್ಥೆಗಳು, ಗ್ರಾಮೀಣ ಅಭಿವೃದ್ಧಿ, ಕೃಷಿ ಕಿಸಾನ್, ರೈತ, ವನವಾಸಿ ಸಂಘಟನೆಗಳು ಸರ್ಕಾರಕ್ಕೆ ಮನವಿ ನೀಡಬೇಕು. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ನದಿ ಜೋಡಣೆ ಯೋಜನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಸಭೆ ನಡೆಸಬೇಕು.
- ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ ನದಿಗಳು ಸೇರಿದಂತೆ ಪಶ್ಚಿಮಘಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ನದಿ ತಿರುವು ಅಥವಾ ಜೋಡಣೆ ಯೋಜನೆ ಕೈಬಿಡಬೇಕು.
ತಜ್ಞರಿಂದ ತೀವ್ರ ವಿರೋಧ
ಪಶ್ಚಿಮವಾಹಿನಿ ನದಿಗಳಿಗೆ ಮರಣ ಶಾಸನವೆಂದೇ ಹೇಳಲಾಗುತ್ತಿರುವ ನದಿ ಜೋಡಣೆ ಯೋಜನೆಗಳಿಗೆ ಇಲ್ಲಿನ ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಸಾಧಕ- ಬಾಧಕ ಸಮಾಲೋಚನಾ ಕಾರ್ಯಾಗಾರದಲ್ಲಿ ವಿವಿಧ ಕ್ಷೇತ್ರದ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾರ್ಯಾಗಾರದ ಚಿಂತನ ಗೋಷ್ಠಿಯಲ್ಲಿ ಅರಣ್ಯ ಮಹಾವಿದ್ಯಾಲಯದ ಪೊ›.ಆರ್.ವಾಸುದೇವ ಮಾತನಾಡಿ, ಕುಡಿಯುವ ನೀರಿನ ಉದ್ದೇಶವಿದ್ದರೆ ಅದಕ್ಕೆ ನದಿ ಜೋಡಣೆ ಪರಿಹಾರವಲ್ಲ ಎಂದರು. ಯೋಜನೆ ಅನುಷ್ಠಾನಕ್ಕೆ ಡೇಟಾಗಳನ್ನು ತಿರುಚುವ ಪ್ರಯತ್ನ ನಡೆದಿದೆ ಎಂದರು.
ಹೊನ್ನಾವರದ ಡಾ. ಪ್ರಕಾಶ ಮೇಸ್ತಾ ಮಾತನಾಡಿ, ಯಾವುದೇ ನದಿಗಳನ್ನು ತಿರುಗಿಸುವ ಯತ್ನ ಮಾಡಿದರೆ ಪ್ರಥಮವಾಗಿ ಕರಾವಳಿ ಭಾಗಕ್ಕೆ ತೊಂದರೆಯಾಗುತ್ತದೆ. ಅಲ್ಲಿನವರ ಕುಲ ಉದ್ಯೋಗವಾದ ಮೀನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಗಣೇಶ ಭಟ್ಟ ಉಪ್ಪೋಣಿ ಮಾತನಾಡಿ, ಯೋಜನೆ ಜಾರಿಯಿಂದ ಕೆಲ ಗುತ್ತಿಗೆದಾರರು, ಕಂಪನಿಗಳಿಗೆ ಲಾಭವಾಗುತ್ತದೆ ಹೊರತು ಉತ್ತರ ಕನ್ನಡ ಹಾಗೂ ಹಾವೇರಿ, ಗದಗಿನ ಜನರಿಗೆ ಕಿಂಚಿತ್ತೂ ಪ್ರಯೋಜನ ಸಿಗದು ಎಂದರು.
ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ ಮಾತನಾಡಿ, ರೈತರಿಗೆ ಸುಳ್ಳು ಆಶ್ವಾಸನೆ ನೀಡಿ ಸಾಲದ ಕೂಪಕ್ಕೆ ದೂಡುವ ಪ್ರಯತ್ನ ಈ ಯೋಜನೆಯಿಂದ ಆಗುತ್ತದೆ ಎಂದರು.
ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ರೀಧರ ಭಟ್ಟ ಮಾತನಾಡಿ, ಬೇಡ್ತಿ ಪರಿಸರವು 35ಕ್ಕೂ ಹೆಚ್ಚು ಪ್ರಾಣಿ ತಳಿಗಳ ಕಾರಿಡಾರ್ ಆಗಿದೆ. ಯೋಜನೆಯ ಬೃಹತ್ ಕಾಲುಗಳು ಈ ಕಾರಿಡಾರ್ ತುಂಡರಿಸಿದರೆ ಪರಿಸರ ಅಸಮತೋಲನ ನಿಶ್ಚಿತ ಎಂದರು. ಸಾಮಾಜಿಕ ಕಾರ್ಯಕರ್ತ ಬಿ.ಜಿ.ಹೆಗಡೆ ಗೇರಾಳ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್.ಹೆಗಡೆ, ಪತ್ರಕರ್ತೆ ಶೈಲಜಾ ಗೋರ್ನಮನೆ ಮಾತನಾಡಿದರು. ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷವಿ.ಎನ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಭೂಗರ್ಭಶಾಸ್ತ್ರಜ್ಞ ಡಾ.ಜಿ.ವಿ.ಹೆಗಡೆ ಇದ್ದರು.
ಉತ್ತರ ಕನ್ನಡದಲ್ಲಿ ಜಲ ಜಾಗೃತಿಯಿದೆ. ಹಾಗಾಗಿ ಈ ಯೋಜನೆ ಅನುಷ್ಠಾನ ಕಷ್ಟಸಾಧ್ಯ. ಸರ್ಕಾರ ನೆರೆ ನೀರನ್ನು ಹಿಡಿದಿಡುವ ಕಾರ್ಯ ಮಾಡಿದರೆ ಉತ್ತಮ.
| ಶಿವಾನಂದ ಕಳವೆ, ಪರಿಸರ ಬರಹಗಾರ